ಮಾಜಿ ಸಂಸದ ಆನಂದ್ ಮೋಹನ್‌ ಜೈಲಿನಿಂದ ಬಿಡುಗಡೆ ಕುರಿತ ದಾಖಲೆಯನ್ನು ನೀಡುವಂತೆ ಬಿಹಾರ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಉಮಾ ಕೃಷ್ಣಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ರಾಜ್ಯ ಸರ್ಕಾರ ಹಿಂದಿನ ಜೈಲು ನೀತಿಯನ್ನು ಬದಲಿಸಿ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡಿದೆ. ಆನಂದ್ ಮೋಹನ್ ಅವರ ಕ್ರಿಮಿನಲ್ ಪೂರ್ವಾಪರಗಳ ಸಂಪೂರ್ಣ ದಾಖಲೆಗಳನ್ನು ಇರಿಸಲು ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಅವರು ಪೀಠವನ್ನು ಒತ್ತಾಯಿಸಿದರು.

ಮಾಜಿ ಸಂಸದ ಆನಂದ್ ಮೋಹನ್‌ ಜೈಲಿನಿಂದ ಬಿಡುಗಡೆ ಕುರಿತ ದಾಖಲೆಯನ್ನು ನೀಡುವಂತೆ ಬಿಹಾರ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಆನಂದ್ ಮೋಹನ್
Follow us
ರಶ್ಮಿ ಕಲ್ಲಕಟ್ಟ
|

Updated on: May 19, 2023 | 3:08 PM

ದೆಹಲಿ: ಐಎಎಸ್ ಅಧಿಕಾರಿಯೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡಿ ಜೈಲಿನಲ್ಲಿದ್ದ ಗ್ಯಾಂಗ್​​ಸ್ಟರ್, ರಾಜಕಾರಣಿ ಆನಂದ್ ಮೋಹನ್‌ (Anand Mohan) ಅವರನ್ನು ಅವಧಿಗೆ ಮುಂಚೆ ಬಿಡುಗಡೆ  ಮಾಡಿರುವ ಕುರಿತ ದಾಖಲೆಗಳನ್ನು  ಬಿಡುಗಡೆ ಮಾಡುವಂತೆ ಬಿಹಾರ (Bihar) ಸರ್ಕಾರಕ್ಕೆ ಸುಪ್ರೀಂಕೋರ್ಟ್ (Supreme Court) ಇಂದು (ಶುಕ್ರವಾರ) ಸೂಚಿಸಿದೆ. 1994ರಲ್ಲಿ ಬಿಹಾರದ ಮಾಜಿ ಸಂಸದ ಆನಂದ್‌ ಮೋಹನ್‌ ನೇತೃತ್ವದ ಜನಸಮೂಹದಿಂದ ಹತ್ಯೆಗೀಡಾದ ಅಧಿಕಾರಿಯ ಜಿ ಕೃಷ್ಣಯ್ಯ ಅವರ ಪತ್ನಿ,  ಬಿಡುಗಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.  ತೆಲಂಗಾಣದ ಕೃಷ್ಣಯ್ಯ ಅವರನ್ನು 1994 ರಲ್ಲಿ ಮುಜಾಫರ್‌ಪುರ ಜಿಲ್ಲೆಯಲ್ಲಿ ದರೋಡೆಕೋರ ಛೋಟಾನ್ ಶುಕ್ಲಾ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಹಿಂದಿಕ್ಕಲು ಅವರ ವಾಹನ ಪ್ರಯತ್ನಿಸಿದಾಗ ಗುಂಪೊಂದು ಅವರನ್ನು ಹೊಡೆದು ಕೊಂದಿತ್ತು.

ಉಮಾ ಕೃಷ್ಣಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ರಾಜ್ಯ ಸರ್ಕಾರ ಹಿಂದಿನ ಜೈಲು ನೀತಿಯನ್ನು ಬದಲಿಸಿ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡಿದೆ. ಆನಂದ್ ಮೋಹನ್ ಅವರ ಕ್ರಿಮಿನಲ್ ಪೂರ್ವಾಪರಗಳ ಸಂಪೂರ್ಣ ದಾಖಲೆಗಳನ್ನು ಇರಿಸಲು ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಅವರು ಪೀಠವನ್ನು ಒತ್ತಾಯಿಸಿದರು. ಈ ವಿಷಯವನ್ನು ಆಗಸ್ಟ್ ತಿಂಗಳಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು.

ಮೇ 8 ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ಆನಂದ್ ಮೋಹನ್ ಅವರನ್ನು ಮುಂಚಿತವಾಗಿ ಬಿಡುಗಡೆ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್, ಕೇಂದ್ರ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿತ್ತು

ಬಿಹಾರದ ಜೈಲು ನಿಯಮಗಳಲ್ಲಿ ತಿದ್ದುಪಡಿ ತಂದ ನಂತರ ಆನಂದ್ ಮೋಹನ್ ಏಪ್ರಿಲ್ 27 ರಂದು ಸಹರ್ಸಾ ಜೈಲಿನಿಂದ ಬಿಡುಗಡೆಯಾಗಿದ್ದರು. 14 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಕಾರಣ ಈ ವಾರದ ಆರಂಭದಲ್ಲಿ ರಾಜ್ಯದ ಕಾನೂನು ಇಲಾಖೆ ಹೊರಡಿಸಿದ ಅಧಿಸೂಚನೆಯ ಮೂಲಕ ಬಿಡುಗಡೆ ಮಾಡಲು ಆದೇಶಿಸಿದ 20 ಕ್ಕೂ ಹೆಚ್ಚು ಕೈದಿಗಳ ಪಟ್ಟಿಯಲ್ಲಿ ಅವರೂ ಇದ್ದರು.

ನಿತೀಶ್ ಕುಮಾರ್ ಸರ್ಕಾರವು ಏಪ್ರಿಲ್ 10 ರಂದು ಬಿಹಾರ ಜೈಲು ಕೈಪಿಡಿಗೆ ತಿದ್ದುಪಡಿ ಮಾಡಿದ ನಂತರ ಕರ್ತವ್ಯದಲ್ಲಿದ್ದ ಸಾರ್ವಜನಿಕ ಸೇವಕನ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಮುಂಚಿತವಾಗಿ ಬಿಡುಗಡೆ ಮಾಡುವುದರ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಯಿತು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಬಲವನ್ನು ಸೇರಿಸುವ ರಜಪೂತ ಪ್ರಬಲ ವ್ಯಕ್ತಿ ಮೋಹನ್ ಬಿಡುಗಡೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ.

ಇದನ್ನೂ ಓದಿ:Emotions: ಗೂಗಲ್ ಸಿಇಒ ಸುಂದರ್ ಪಿಚ್ಚೈ ಅಪ್ಪ ಕಣ್ಣೀರು; ಚೆನ್ನೈ ಮನೆ ಮಾರುವಾಗ ಭಾವೋದ್ವೇಗದ ಕ್ಷಣಗಳು; ಘಟನೆ ಸ್ಮರಿಸಿದ ತಮಿಳು ನಟ

ಆನಂದ್ ಮೋಹನ್ ಸಿಂಗ್ ಯಾರು?

ಈಗ ನಿಷ್ಕ್ರಿಯವಾಗಿರುವ ಬಿಹಾರ್ ಪೀಪಲ್ಸ್ ಪಾರ್ಟಿ (ಬಿಪಿಪಿ) ಅನ್ನು ಸ್ಥಾಪಿಸಿದ ಆನಂದ್ ಮೋಹನ್ ಸಿಂಗ್ ಅವರು ಬಿಹಾರದ ರಾಜಕಾರಣಿಯಾಗಿದ್ದು, 1994 ರಲ್ಲಿ ಗೋಪಾಲ್‌ಗಂಜ್‌ನ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್  ಐಎಎಸ್ ಜಿ ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಆನಂದ್ ಮೋಹನ್ ಸಿಂಗ್ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೈದಿ. ಆದಾಗ್ಯೂ, ಬಿಹಾರ ಸರ್ಕಾರವು ಜೈಲು ನಿಯಮಗಳನ್ನು ತಿದ್ದುಪಡಿ ಮಾಡಿದ ಅವರನ್ನು ಬಿಡುಗಡೆ ಮಾಡಿದೆ. ಆನಂದ್ ಮೋಹನ್ ಜೊತೆಗೆ ನಿತೀಶ್ ಕುಮಾರ್ ಸರ್ಕಾರವು ಇತರ 26 ಕೈದಿಗಳನ್ನು ಬಿಡುಗಡೆ ಮಾಡಿದೆ.

ಐಎಎಸ್ ಜಿ ಕೃಷ್ಣಯ್ಯ ಯಾರು? ಏನಿದು ಪ್ರಕರಣ?

1994 ರಲ್ಲಿ, ಆನಂದ್ ಮೋಹನ್ ಅವರ ಬಿಪಿಪಿ ಪಕ್ಷದ ಮುಜಾಫರ್‌ಪುರದ ದರೋಡೆಕೋರ-ರಾಜಕಾರಣಿ ಛೋಟಾನ್ ಶುಕ್ಲಾ ಅವರ ಮೃತದೇಹ ಹೊತ್ತು ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಡಿಸೆಂಬರ್ 4 ರಂದು ಮುಜಾಫರ್‌ಪುರದ ಭಗವಾನ್‌ಪುರ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ವಾಹನದ ಮೇಲೆ ಗುಂಡು ಹಾರಿಸಿ ಶುಕ್ಲಾ ಸಾವಿಗೀಡಾಗಿದ್ದರು. ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಹ ಭಾಗಿಯಾಗಿದ್ದಾನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಛೋಟಾನ್ ಹತ್ಯೆಯಲ್ಲಿ ಪೊಲೀಸರೊಬ್ಬರು ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಆತನ ಬೆಂಬಲಿಗರು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಮರುದಿನ, ಮುಜಫರ್‌ಪುರದಿಂದ ವೈಶಾಲಿಯ ಲಾಲ್‌ಗಂಜ್‌ನಲ್ಲಿರುವ ಅವನ ತಂದೆಯ ಗ್ರಾಮವಾದ ಖಂಜಾಹಚಕ್‌ಗೆ ಛೋಟಾನ್‌ನ ಮೃತದೇಹ ಹೊತ್ತು ಬೆಂಬಲಿಗರು ಹೋಗಿದ್ದರು.

ಆನಂದ್ ಮೋಹನ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆರೆದಿದ್ದ ಜನರನ್ನುದ್ದೇಶಿಸಿ ಆವೇಶಭರಿತ ಭಾಷಣ ಮಾಡಿದರು. ಆ ಸಮಯದಲ್ಲಿ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರು ಹಾಜಿಪುರದಿಂದ ಗೋಪಾಲಗಂಜ್‌ಗೆ ಹಿಂತಿರುಗುತ್ತಿದ್ದರು. 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಜಿ ಕೃಷ್ಣಯ್ಯ ತೆಲಂಗಾಣದ ಮಹೆಬೂಬ್‌ನಗರದವರು.

ಕೆಂಪು ದೀಪವಿರುವ ಸರ್ಕಾರಿ ವಾಹನದ ನೋಡಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಖಬ್ರಾ ಗ್ರಾಮದ ಬಳಿ ಕೃಷ್ಣಯ್ಯ ಅವರನ್ನು ಘೇರಾವ್ ಮಾಡಿ ಕಾರಿಗೆ ಕಲ್ಲು ತೂರಾಟ ಆರಂಭಿಸಿದರು. ಈ ನಡುವೆ ಛೋಟಾನ್ ಸಹೋದರ ಭುತ್ಕುನ್ ಶುಕ್ಲಾ ಕೃಷ್ಣಯ್ಯ ಅವರ ಮೇಲೆ ಗುಂಡು ಹಾರಿಸಿದ್ದು, ಜನರ ಗುಂಪು ಕೃಷ್ಣಯ್ಯ ಅವರನ್ನು ಥಳಿಸಿ ಹತ್ಯೆಗೈದಿದೆ.

ಕೃಷ್ಣಯ್ಯ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಐಎಎಸ್ ಅಧಿಕಾರಿಯನ್ನು ಹತ್ಯೆ ಮಾಡಲು ಆನಂದ್ ಮೋಹನ್ ಜನಸಮೂಹವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ. 2007 ರಲ್ಲಿ ಕೆಳ ನ್ಯಾಯಾಲಯವು ಸಿಂಗ್ ಅವರಿಗೆ ಮರಣದಂಡನೆ ವಿಧಿಸಿತು, ಆದರೆ ಪಾಟ್ನಾ ಹೈಕೋರ್ಟ್ ನಂತರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ