‘ ಆರ್‌ಎಸ್‌ಎಸ್ ಹಿಂದೂಗಳನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತಿದೆ’: ಭಾರತ ಆರ್‌ಎಸ್‌ಎಸ್ ಮುಕ್ತವಾಗಬೇಕಿದೆ ಎಂದ ನಿವೃತ್ತ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್
M Nageswara Rao: 2019 ರಲ್ಲಿ ಹಂಗಾಮಿ ಸಿಬಿಐ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಾವ್ ಮಂಗಳವಾರ ಸರಣಿ ಟ್ವೀಟ್ ಮಾಡಿದ್ದು ಎಲ್ಲ ಹಿಂದೂಗಳನ್ನು "ಆರ್‌ಎಸ್‌ಎಸ್ ಮುಕ್ತ ಭಾರತ" ಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಬಹಿಷ್ಕರಿಸಲು ಕರೆ ನೀಡಿದ ನಂತರ ನಿವೃತ್ತ ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ ರಾವ್ ಇದೀಗ ಪ್ರಸ್ತುತ ಸಂಘಟನೆಯು ‘ಹುಸಿ ಹಿಂದುತ್ವ ಮೋಸಗಾರ’ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. 2019 ರಲ್ಲಿ ಹಂಗಾಮಿ ಸಿಬಿಐ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಾವ್ ಮಂಗಳವಾರ ಸರಣಿ ಟ್ವೀಟ್ ಮಾಡಿದ್ದು ಎಲ್ಲ ಹಿಂದೂಗಳನ್ನು “ಆರ್‌ಎಸ್‌ಎಸ್ ಮುಕ್ತ ಭಾರತ” ಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
“ಆರ್‌ಎಸ್‌ಎಸ್ ಇಸ್ಲಾಂಗೆ ಧೈರ್ಯವನ್ನು ನೀಡುತ್ತಿದೆ ಮತ್ತು ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ.ಇಸ್ಲಾಂ “ಗೆಲ್ಲುತ್ತದೆ” ಏಕೆಂದರೆ ಅದು “ಬಗ್ಗದ ಮನಸ್ಸನ್ನು” ಸೃಷ್ಟಿಸುತ್ತದೆ ಎಂದು ರಾವ್ ಟ್ವೀಟ್ ಮಾಡಿದ್ದಾರೆ.
” ಹೆಚ್ಚು ಹಿಂಸೆಯನ್ನು ಹೊರಹಾಕಿ ಕೆಲಸವನ್ನು ಬೇಗನೆ ಮುಗಿಸಲು ಪ್ರಚೋದನೆಯಾಗಿ ಮಾತ್ರ ಇಸ್ಲಾಂ ಈಗ ಆರ್‌ಎಸ್‌ಎಸ್‌ನಲ್ಲಿನ ದೌರ್ಬಲ್ಯದ ಲಕ್ಷಣಗಳನ್ನು ಕಾಣುತ್ತದೆ ಎಂದು ಅವರು ಹೇಳಿದರು. ಟ್ವಿಟರ್‌ನಲ್ಲಿ ರಾವ್ ಅವರ ಬಯೋದಲ್ಲಿ ಹೀಗೆ ಬರೆದಿದೆ “ಹಿಂದುಗಳಿಗೆ ಸಮಾನ ಹಕ್ಕುಗಳು ಮತ್ತು ಹುಸಿ ಹಿಂದುತ್ವವನ್ನು ಬಹಿರಂಗಪಡಿಸುವುದು”.
ಮುಂಬೈನಲ್ಲಿ ಸೋಮವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಮಾಜಿ ಪೊಲೀಸ್ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ. ವಿಚಾರ ಸಂಕಿರಣದಲ್ಲಿ ಮಾತನಾಡಿದ ಭಾಗವತ್, ಬ್ರಿಟಿಷರು ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ತಪ್ಪು ಕಲ್ಪನೆ ಮಾಡುವ ಮೂಲಕ ಹೋರಾಡುವಂತೆ ಮಾಡಿದರು ಎಂದು ಹೇಳಿದ್ದರು.
ವಿವಾದಗಳೇನೂ ಹೊಸತಲ್ಲ ಆದಾಗ್ಯೂ ವಿವಾದಗಳು ರಾವ್‌ಗೆ ಹೊಸತಲ್ಲ. ನಿವೃತ್ತ ಐಪಿಎಸ್ ಅಧಿಕಾರಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿಸಿದ್ದರು. ಸೆಪ್ಟೆಂಬರ್ 2020 ರಲ್ಲಿ, ರಾವ್ ಅವರು ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಸಾವನ್ನು “ಅನಾವಶ್ಯಕವಾಗಿದ್ದು ತೊಲಗಿತು” ಎಂದಿದ್ದರು. ಅವರು ಅಗ್ನಿವೇಶ್ ಅವರನ್ನು “ಹಿಂದೂ ವಿರೋಧಿ” ಎಂದು ಕರೆದಿದ್ದು ಮತ್ತು ಕಾರ್ಯಕರ್ತರು “ಹಿಂದೂ ಧರ್ಮಕ್ಕೆ ಅಪಾರ ಹಾನಿ ಮಾಡಿದ್ದಾರೆ” ಎಂದು ಹೇಳಿದರು.
“ತೊಲಗಿತು ಸ್ವಾಮಿ ಅಗ್ನಿವೇಶ್. ನೀವು ಕೇಸರಿ ಬಟ್ಟೆ ಧರಿಸುವ ಹಿಂದೂ ವಿರೋಧಿ. ನೀವು ಹಿಂದೂ ಧರ್ಮಕ್ಕೆ ಅಪಾರ ಹಾನಿ ಮಾಡಿದ್ದೀರಿ. ನೀನು ತೆಲುಗು ಬ್ರಾಹ್ಮಣನಾಗಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತದೆ. ಯಮರಾಜ್ ವಿರುದ್ಧ ನನ್ನ ಕುಂದುಕೊರತೆಯೆಂದರೆ ಅವನು ಯಾಕೆ ಇಷ್ಟು ದಿನ ಕಾಯುತ್ತಿದ್ದಾನೆ! ಎಂದು ರಾವ್ ಟ್ವೀಟ್ ಮಾಡಿದ್ದರು.
ಅದೇ ವರ್ಷ ಜುಲೈ 25 ರಂದು ರಾವ್ ಅವರು “ಹಿಂದೂ ನಾಗರೀಕತೆಯ ಅಬ್ರಾಹ್ಮಮಿಸೇಷನ್ “( Abrahamisation of Hindu Civilisation) ಕಡೆಗೆ ಸ್ವಾತಂತ್ರ್ಯದ ನಂತರ ಸಂಘಟಿತ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಹೇಳುತ್ತಾ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
“ಹಿಂದುಗಳ ಹಾದಿತಪ್ಪಿಸುವಿಕೆಯ” ಮೊದಲ ಹಂತದಲ್ಲಿ, “ಇತಿಹಾಸದ ಕೈಗಾರಿಕಾ ಪ್ರಮಾಣದ ವಿರೂಪ ಮತ್ತು ನಿರಾಕರಣೆ ಮತ್ತು ರಕ್ತಸಿಕ್ತ ಇಸ್ಲಾಮಿಕ್ ಆಕ್ರಮಣಗಳು/ನಿಯಮಗಳನ್ನು ವೈಟ್ ವಾಷ್ ಮಾಡುವ” ಪ್ರಯತ್ನಗಳನ್ನು ಮಾಡಲಾಯಿತು ಎಂದು ಅವರು ಪ್ರತಿಪಾದಿಸಿದರು.
ಉದಾಹರಣೆಗೆ ರಸ್ತೆಗಳು, ಸಾರ್ವಜನಿಕ ಸ್ಥಳಗಳಗಳಿಗೆ “ಆಕ್ರಮಣಕಾರರ” ಎಂದು ಹೆಸರಿಡಲಾಗಿದೆ. “ದೆಹಲಿಯ ಮೂಲ ನಿರ್ಮಾಪಕರಾದ ಕೃಷ್ಣ/ಪಾಂಡವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ” ಎಂಬ ಅಂಶವನ್ನು ರಾವ್ ಉಲ್ಲೇಖಿಸಿದ್ದಾರೆ.
“ಸರ್ಕಾರದಿಂದ ಎಡಪಂಥೀಯ ಮತ್ತು ಅಲ್ಪಸಂಖ್ಯಾತರ ಪರವಾದ ಶಿಕ್ಷಣ ತಜ್ಞರು/ ವಿದ್ವಾಂಸರ ಅಪಾರ ಪ್ರೋತ್ಸಾಹ” ಮತ್ತು “ಸರ್ಕಾರದಿಂದ ಎಲ್ಲಾ ಹಿಂದೂ ರಾಷ್ಟ್ರೀಯವಾದಿಗಳು ಮತ್ತು ಶಿಕ್ಷಣ ತಜ್ಞರು/ ವಿದ್ವಾಂಸರನ್ನು ವ್ಯವಸ್ಥಿತವಾಗಿ ಬದಿಗೊತ್ತಿ ನಿರ್ಮೂಲನೆ ಮಾಡುವುದು” ಎಂದು ಅವರು ಹೇಳಿದರು. ಈ ಟ್ವೀಟ್ ಗಳ ಬಗ್ಗೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ರಾವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಪತ್ರ ಬರೆದಿತ್ತು. ಆದರೆ ಈ ಪ್ರಕರಣದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ವೃತ್ತಿ ಜೀವನದಲ್ಲಿ ಹಣಕಾಸಿನ ಅವ್ಯವಹಾರ, ತನಿಖೆ ರಾವ್ ಒಡಿಶಾ ಕೇಡರ್‌ನ 1986 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಹಣಕಾಸಿನ ಅವ್ಯವಹಾರ, ತನಿಖೆಗಳ ಮೇಲೆ ಪ್ರಭಾವ ಬೀರುವ ಮತ್ತು ಆತನ ವಿರುದ್ಧ ತನಿಖೆಗಳನ್ನು ಕೆದಕುವ ಹಲವಾರು ದೂರುಗಳೊಂದಿಗೆ ವಿವಾದಾತ್ಮಕ ವೃತ್ತಿಜೀವನವನ್ನು ಹೊಂದಿದ್ದಾರೆ.
ಅವರು ಒಡಿಶಾದ ಭುವನೇಶ್ವರದಲ್ಲಿ ಅಗ್ನಿಶಾಮಕ ಸೇವಾ ನಿರ್ದೇಶನಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದಾಗಿನಿಂದ ಹಣಕಾಸಿನ ಅಕ್ರಮಗಳ ಆರೋಪ ಅವರ ಮೇಲಿದೆ. ಕೆಲವು ದೂರುಗಳಲ್ಲಿ ಸಿಬಿಐನಲ್ಲಿ ತನಿಖೆಯನ್ನು ಕೆದಕುವುದು ಮತ್ತು ಪ್ರಭಾವ ಬೀರುವುದು, ಕಚೇರಿಯಲ್ಲಿದ್ದಾಗ ಹಣದ ದುರುಪಯೋಗ ಮತ್ತು ಶೆಲ್ ಕಂಪನಿಯಲ್ಲಿ ಅವರ ಪತ್ನಿ ಭಾಗಿಯಾಗಿರುವುದೂ ಸೇರಿವೆ.
ಸಂಜಯ್ ಭಂಡಾರಿ ಡೈರಿಗಳಲ್ಲಿ ಅವರ ಹೆಸರು ಕಾಣಿಸಿಕೊಂಡಿರುವ 70 ಕ್ಕೂ ಹೆಚ್ಚು ಭಾರತೀಯ ಕಂದಾಯ ಸೇವೆಗಳ (ಐಆರ್‌ಎಸ್) ಅಧಿಕಾರಿಗಳ ವಿರುದ್ಧ ವಿಚಾರಣೆ ಮುಕ್ತಾಯಗೊಳಿಸಿದ ಆರೋಪವೂ ಅವರ ಮೇಲಿದೆ.
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಭಂಡಾರಿ ಅವರನ್ನು 2015 ರ ಜನವರಿಯಲ್ಲಿ ಆಗಿನ ಆದಾಯ ತೆರಿಗೆ ಜಂಟಿ ಆಯುಕ್ತ ಸಲಾಂಗ್ ಯಾಡೆನ್ ಜೊತೆಗೆ ಭ್ರಷ್ಟಾಚಾರ ಆರೋಪದಡಿ ಬಂಧಿಸಲಾಯಿತು. 2019 ರಲ್ಲಿ ಅಂದಿನ ಮಹಾನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ನಡುವಿನ ಜಟಾಪಟಿಯ ನಡುವೆ ರಾವ್ ಅವರನ್ನು ಹಂಗಾಮಿ ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಬೋರೆನರಸಾಪುರ ಗ್ರಾಮದಿಂದ ಬಂದಿರುವ ರಾವ್, ಕೇಂದ್ರೀಯ ಜಾಗರಣಾ ಆಯುಕ್ತರಾದ ಕೆ.ವಿ. ಚೌಧರಿ ಅವರ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
(Retired IPS officer M Nageswara Rao stoked a controversy RSS taking Hindus on path of destruction)