ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದದ್ದು ತೇಜಸ್ವಿ ಸೂರ್ಯ, ಅವರು ಕ್ಷಮೆಯಾಚಿಸಿದ್ದಾರೆ: ನಾಗರಿಕ ವಿಮಾನಯಾನ ಸಚಿವ

Tejasvi Surya ಅಂದಹಾಗೆ ಸಂಸದ ತೇಜಸ್ವಿ ಸೂರ್ಯ ಕೇವಲ ಕ್ಷಮೆಯಾಚನೆ ಮಾಡಿ ತಪ್ಪಿಸಿಕೊಂಡರು. ಅವರು ಹೆಚ್ಚು ಗಂಭೀರವಾದ ಕ್ರಮವನ್ನು ಏಕೆ ಎದುರಿಸಲಿಲ್ಲ ಎಂದು ಹಲವಾರು ವಿರೋಧ ಪಕ್ಷದ ನಾಯಕರು ಪ್ರಶ್ನಿಸುತ್ತಿದ್ದಾರೆ.

ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದದ್ದು ತೇಜಸ್ವಿ ಸೂರ್ಯ, ಅವರು ಕ್ಷಮೆಯಾಚಿಸಿದ್ದಾರೆ: ನಾಗರಿಕ ವಿಮಾನಯಾನ ಸಚಿವ
ತೇಜಸ್ವಿ ಸೂರ್ಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 18, 2023 | 7:00 PM

ದೆಹಲಿ: ಬಿಜೆಪಿ ನಾಯಕ ತೇಜಸ್ವಿ ಸೂರ್ಯ (Tejasvi Surya) ಅವರು ಕಳೆದ ತಿಂಗಳು ಇಂಡಿಗೋ ವಿಮಾನದ (IndiGo plane)ತುರ್ತು ನಿರ್ಗಮನ ದ್ವಾರವನ್ನು (emergency exit) ಅಪ್ಪಿ ತಪ್ಪಿ ತೆರೆದಿದ್ದು ನಂತರ ಕ್ಷಮೆಯಾಚಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ. ವಿಮಾನವು ಹಾರಲು ಸಿದ್ಧತೆ ನಡೆಸುತ್ತಿದ್ದಾಗ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕನೊಬ್ಬ ತನ್ನ ವಿಮಾನ 6E 7339 (ಚೆನ್ನೈ ನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ ವಿಮಾನದ) ನ ತುರ್ತು ನಿರ್ಗಮನ ದ್ವಾರವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತೆರೆದಿದ್ದು, ಆನಂತರ ಆ ಪ್ರಯಾಣಿಕ ಕ್ಷಮೆಯಾಚಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ  ಡಿಸೆಂಬರ್ 10 ರಂದು ತಿಳಿಸಿದೆ. ಹೀಗೆ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಘಟನೆ ನಡೆದು ಒಂದು ತಿಂಗಳ ನಂತರ ವಿಮಾನಯಾನ ಸಚಿವರು ಖಚಿತಪಡಿಸಿದ್ದಾರೆ.

“ಎಚ್ಚರಿಕೆಯಿಂದ ಇರುವುದು ಮುಖ್ಯ. ವಾಸ್ತವ ನೋಡಿ. ಅಪ್ಪಿ ತಪ್ಪಿ ಬಾಗಿಲು ತೆರೆದಿದ್ದಾರೆ. ಎಲ್ಲಾ ತಪಾಸಣೆಗಳನ್ನು ಮಾಡಿದ ನಂತರನೇ ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಲಾಗಿದೆ. ಅದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸಿಂಧಿಯಾ ಹೇಳಿದ್ದಾರೆ. ಕಟ್ಟುನಿಟ್ಟಾದ ಇಂಜಿನಿಯರಿಂಗ್ ತಪಾಸಣೆಯ ನಂತರವೇ ವಿಮಾನವು ತನ್ನ ಗಮ್ಯಸ್ಥಾನವಾದ ತಿರುಚಿರಾಪಳ್ಳಿಗೆ ಹೊರಟಿದ್ದರಿಂದ ವಿಮಾನವು ಎರಡು ಗಂಟೆಗಳ ಕಾಲ ವಿಳಂಬವಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: Tejasvi surya: ವಿಮಾನದ ಎಮೆರ್ಜೆನ್ಸಿ ಎಕ್ಸಿಟ್​ ಓಪನ್ ಮಾಡಿದ ಸಂಸದ ತೇಜಸ್ವಿ ಸೂರ್ಯ, ಇಂಡಿಗೋ ವಿಮಾನ 2 ತಾಸು ತಡ

ತೇಜಸ್ವಿ ಸೂರ್ಯ ತುರ್ತು ನಿರ್ಗಮನ ದ್ವಾರದ ಮೇಲೆ ಕೈಯಿಟ್ಟು ಅದನ್ನು  ತೆರೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂದಹಾಗೆ ಸಂಸದ ತೇಜಸ್ವಿ ಸೂರ್ಯ “ಕೇವಲ ಕ್ಷಮೆಯಾಚನೆ ಮಾಡಿ ತಪ್ಪಿಸಿಕೊಂಡರು. ಅವರು ಹೆಚ್ಚು ಗಂಭೀರವಾದ ಕ್ರಮವನ್ನು ಏಕೆ ಎದುರಿಸಲಿಲ್ಲ ಎಂದು ಹಲವಾರು ವಿರೋಧ ಪಕ್ಷದ ನಾಯಕರು ಪ್ರಶ್ನಿಸುತ್ತಿದ್ದಾರೆ.

“ಪ್ರಯಾಣಿಕರು ಈ ಕ್ರಮಕ್ಕಾಗಿ ತಕ್ಷಣವೇ ಕ್ಷಮೆಯಾಚಿಸಿದರು. SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಪ್ರಕಾರ, ಘಟನೆಯನ್ನು ದಾಖಲಿಸಲಾಗಿದೆ.ವಿಮಾನವು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗೆ ಒಳಗಾಯಿತು, ಇದು ವಿಮಾನದ ನಿರ್ಗಮನದಲ್ಲಿ ವಿಳಂಬಕ್ಕೆ ಕಾರಣವಾಯಿತು” ಎಂದು ಇಂಡಿಗೋ  ಮಂಗಳವಾರ ಹೇಳಿಕೆ ನೀಡಿದ್ದರೂ ಪ್ರಯಾಣಿಕರ ಹೆಸರು ಬಹಿರಂಗಪಡಿಸಲಿಲ್ಲ.

ಘಟನೆಯನ್ನು ಸರಿಯಾಗಿ ಪರಿಶೀಲಿಸಿದ್ದು ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ವಾಯುಯಾನ ನಿಯಂತ್ರಕ ನಿರ್ದೇಶನಾಲಯದ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಪ್ರಯಾಣಿಕರು ತಪ್ಪಾಗಿ ರೈಟ್ ಹ್ಯಾಂಡ್ ಎಮರ್ಜೆನ್ಸಿ ಎಕ್ಸಿಟ್ ತೆರೆದಿದ್ದಾರೆ ಎಂದು ಅವರು ಹೇಳಿದರು.  “ಸಿಬ್ಬಂದಿ ಗಮನಕ್ಕೆ ತಂದರು. ಇದಾದ ನಂತರ ಬಾಗಿಲು ಮರುಸ್ಥಾಪಿಸುವುದು, ನಿರ್ಗಮನಕ್ಕಾಗಿ ವಿಮಾನವನ್ನು ಸಜ್ಜುಗೊಳಿಸುವ ಮೊದಲು ಪರಿಶೀಲನೆಯಂತಹ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು. ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತೇಜಸ್ವಿ ಸೂರ್ಯ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ವಿಪಕ್ಷಗಳಿಂದ ಟೀಕಾ ಪ್ರಹಾರ, ಟ್ರೋಲ್

ವಿರೋಧ ಪಕ್ಷಗಳು ಬೆಂಗಳೂರು ದಕ್ಷಿಣ ಸಂಸದರನ್ನು ಗುರಿಯಾಗಿಸಿ ಸರಣಿ ಪೋಸ್ಟ್ ಮಾಡಿದ್ದು ಇಂಡಿಗೋ ಪ್ರಯಾಣಿಕರ ಹೆಸರನ್ನು ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿವೆ. ಆಟ ಆಡುವ ಮಕ್ಕಳಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ತೇಜಸ್ವಿ ಸೂರ್ಯ ಉದಾಹರಣೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಮಕ್ಕಳ ಕಿಡಿಗೇಡಿತನದ ಕೃತ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಪ್ರಾಣದೊಂದಿಗೆ ಚೇಷ್ಟೆ ಏಕೆ?” ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.

“ಸಂಸದರ ಉದ್ದೇಶವೇನು? ಅನಾಹುತ ಸೃಷ್ಟಿಸುವ ಯೋಜನೆಯೇ? ಕ್ಷಮೆಯಾಚಿಸಿದ ನಂತರ ಅವರನ್ನು ಹಿಂಬದಿಯ ಸೀಟಿಗೆ ಏಕೆ ವರ್ಗಾಯಿಸಲಾಯಿತು,” ಎಂದು ಪ್ರಶ್ನಿಸಿದ ಕಾಂಗ್ರೆಸ್, ಟೇಕ್-ಆಫ್ ನಂತರ “ತಮಾಷೆ” ಆಗಿದ್ದರೆ ಅನಾಹುತಕ್ಕೆ ಯಾರನ್ನು ದೂಷಿಸುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.

ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಬೇಕಲ್ಲವೇ? ರನ್ವೇಯಲ್ಲಿ ಇರುವಾಗ ಹೀಗೆ ಮಾಡಿದ್ದಾಯ್ತು, ವಿಮಾನ ಟೇಕ್ ಆಫ್ ಆದ ನಂತರ ಇದು ಸಂಭವಿಸಿದ್ದರೆ, ಕ್ಷಮೆ ಸಾಕಾಗುತ್ತಿತ್ತೇ? ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಪೋಸ್ಟ್ ಮಾಡಿದ್ದಾರೆ

“ಸುರಕ್ಷಿತ ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ಗಾಗಿ, ಯಾವಾಗಲೂ ಕಾಂಗ್ರೆಸ್‌ನೊಂದಿಗೆ ಪ್ರಯಾಣಿಸಿ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Wed, 18 January 23