ಸತ್ಯಪಾಲ್ ಮಲಿಕ್ ಆರೋಪ ಅಲ್ಲಗಳೆದ ಆರ್​ಎಸ್​ಎಸ್​ ನಾಯಕ ರಾಮ್ ಮಾಧವ್

ಆರ್​ಎಸ್​ಎಸ್​ ಹಿರಿಯ ನಾಯಕ ಮತ್ತು ಅಂಬಾನಿಗೆ ಸೇರಿದ ಕಡತಗಳಿಗೆ ಅನುಮೋದನೆ ನೀಡಿದರೆ ₹ 300 ಕೋಟಿ ಲಂಚ ನೀಡುವುದಾಗಿ ತಮಗೆ ಆಮಿಷ ಒಡ್ಡಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಆರೋಪಿಸಿದ್ದರು.

ಸತ್ಯಪಾಲ್ ಮಲಿಕ್ ಆರೋಪ ಅಲ್ಲಗಳೆದ ಆರ್​ಎಸ್​ಎಸ್​ ನಾಯಕ ರಾಮ್ ಮಾಧವ್
ರಾಮ್ ಮಾಧವ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 24, 2021 | 10:32 PM

ರಾಜ್​ಕೋಟ್: ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮಾಡಿರುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಆರ್​ಎಸ್​ಎಸ್​ ಹಿರಿಯ ನಾಯಕ ರಾಮ್​ ಮಾಧವ್ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ತಾವು ಜಮ್ಮು ಕಾಶ್ಮೀರ ರಾಜ್ಯಪಾಲರಾಗಿದ್ದಾಗ ಆರ್​ಎಸ್​ಎಸ್​ ಹಿರಿಯ ನಾಯಕ ಮತ್ತು ಅಂಬಾನಿಗೆ ಸೇರಿದ ಕಡತಗಳಿಗೆ ಅನುಮೋದನೆ ನೀಡಿದರೆ ₹ 300 ಕೋಟಿ ಲಂಚ ನೀಡುವುದಾಗಿ ತಮಗೆ ಆಮಿಷ ಒಡ್ಡಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಆರೋಪಿಸಿದ್ದರು. ಸತ್ಯಪಾಲಿಕ್ ಮಲಿಕ್ ಅಧಿಕಾರ ಅವಧಿಯಲ್ಲಿ ಅನುಮೋದನೆ ದೊರೆತ ಮತ್ತು ತಿರಸ್ಕೃತಗೊಂಡ ಎಲ್ಲ ಕಡತಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮಲಿಕ್ ಅವರಿಗೆ ಲಂಚದ ಆಮಿಷವೊಡ್ಡಿದ ಅಧಿಕಾರಿಯ ಬಗ್ಗೆಯೂ ತನಿಖೆ ನಡೆಯಬೇಕು ಎಂದು ರಾಮ್​ ಮಾಧವ್ ಆಗ್ರಹಿಸಿದರು.

ಮೇಘಾಲಯ ಗವರ್ನರ್ ಸತ್ಯಪಾಲ್ ಪಾಲಿಕ್ ಪರೋಕ್ಷವಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ಹೆಸರಿನಲ್ಲಿದ್ದ ಕಡತಕ್ಕೆ ಸಂಬಂಧಿಸಿದಂತೆ ಲಂಚ ನೀಡಲು ಮುಂದೆ ಬರಲಾಗಿತ್ತು ಎಂದು ಆರೋಪಸಿದ್ದಾರೆ. ಇದು ಸಂಪೂರ್ಣ ಸುಳ್ಳು. ನನ್ನ ಹೆಸರಿನಲ್ಲಿ ಅಥವಾ ನನ್ನ ಪರವಾಗಿ ಯಾವುದೇ ಕಡತ ರಾಜ್ಯಪಾಲರ ಕಚೇರಿಗೆ ಹೋಗಿರಲಿಲ್ಲ ಎಂದು ರಾಮ್ ಮಾಧವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಇತ್ತೀಚೆಗೆ ಪ್ರಕಟಗೊಂಡಿರುವ ತಮ್ಮ ‘ಹಿಂದುತ್ವ ಪ್ಯಾರಡೈಮ್’ ಪುಸ್ತಕದ ಪ್ರಚಾರಕ್ಕಾಗಿ ರಾಮ್​ ಮಾಧವ್ ಭಾನುವಾರ ರಾಜಕೋಟ್​ಗೆ ಭೇಟಿ ನೀಡಿದ್ದರು.

ಆರ್​ಎಸ್​ಎಸ್​ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ರಾಮ್​ ಮಾಧವ್ ಈಚಿನ ದಿನಗಳಿಂದ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಮಲಿಕ್ ಅವರು ಆಗಸ್ಟ್ 2018ರಿಂದ ಆಕ್ಟೋಬರ್ 2019ರವರೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಈ ಅವಧಿಯಲ್ಲಿ ವಿಲೇವಾರಿಯಾದ ಕಡತಗಳ ಚಲನೆ ಬಗ್ಗೆ ತನಿಖೆ ನಡೆಯಬೇಕಿದೆ. ಯಾವುದೇ ಅಧಿಕಾರಿ ರಾಜ್ಯಪಾಲರ ಬಳಿಗೆ ಹೋಗಿ ಇಂಥ ಕಡತಕ್ಕೆ ಸಹಿ ಹಾಕಬೇಕು ಎಂದು ಹೇಳಿರುವುದು ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದರು.

ರಾಜ್ಯಪಾಲರ ಬಳಿಗೆ ಹೋಗಿ ₹ 300 ಕೋಟಿ ಲಂಚದ ಆಮಿಷವೊಡ್ಡಿದ ಅಧಿಕಾರಿ ಯಾರು? ರಾಜ್ಯಪಾಲರ ಬಳಿಗೆ ಹೋಗಿ ಇಂಥ ಆಮಿಷವೊಡ್ಡಬೇಕು ಎಂದರೆ ಆ ಅಧಿಕಾರಿಗೆ ಎಷ್ಟು ಧೈರ್ಯ ಇರಬೇಕು? ರಾಜ್ಯಪಾಲರು ತಮ್ಮ ಸ್ಥಾನಮಾನದ ಘನತೆಯನ್ನು ಹೇಗೆ ಕಾಪಾಡಿಕೊಂಡಿದ್ದರು? ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ರಾಮ್ ಮಾಧವ್ ಆಗ್ರಹಿಸಿದರು. ರಾಜಸ್ಥಾನದಲ್ಲಿ ಅಕ್ಟೋಬರ್ 17ರಂದು ನಡೆದಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಲಿಕ್ ಈ ಆರೋಪಗಳನ್ನು ಮಾಡಿದ್ದರು.

ಪದೇಪದೇ ‘ಒಬ್ಬ ಹಿರಿಯ ಆರ್​ಎಸ್​ಎಸ್​ ನಾಯಕ’ ಎಂದು ಮಲಿಕ್ ಹೇಳಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ಜರುಗಿಸಲು ಏನೆಲ್ಲಾ ಅವಕಾಶವಿದೆ ಎಂಬ ಬಗ್ಗೆ ದೆಹಲಿಗೆ ತೆರಳಿದ ನಂತರ ಆಲೋಚಿಸುತ್ತೇನೆ. ನಾವು ಕಾನೂನು ಕ್ರಮ ಜರುಗಿಸಲೇಬೇಕು, ಇದರ ಜೊತೆಗೆ ಈ ಅವಧಿಯಲ್ಲಿ ಆದ, ರದ್ದುಗೊಂಡ ಎಲ್ಲ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು. ಎರಡು ಕಡತಗಳನ್ನು ತಿರಸ್ಕರಿಸಿದ್ದಾಗಿ ಮಲಿಕ್ ಹೇಳುತ್ತಿದ್ದಾರೆ. ಅವು ಯಾವ ವಿಚಾರದ ಕಡತಗಳು ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ. ಅವರು ಯಾವ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ರಾಮ್​ ಮಾಧವ್ ಆಗ್ರಹಿಸಿದರು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದ ಆಲೋಚನೆ; ಬಿಜೆಪಿ ನಾಯಕ ರಾಮ್ ಮಾಧವ್ ಇದನ್ನೂ ಓದಿ: Amit Shah: ಗಡಿ ನಿರ್ಣಯ, ಚುನಾವಣೆ ಬಳಿಕ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ವಾಪಾಸ್; ಅಮಿತ್ ಶಾ ಭರವಸೆ