ಅಪಹರಣ, ಮೊಬೈಲ್ ಜಪ್ತಿ, ವಕೀಲರಿಗೂ ನೋ ಎಂಟ್ರಿ: ಪೊಲೀಸರ ವಿರುದ್ಧ ಸೌರವ್ ದಾಸ್ ಗಂಭೀರ ಆರೋಪ, ಧರಣಿ ಮುಂದುವರೆಸುವುದಾಗಿ ಸಿಜೆಪಿ ಪಟ್ಟು

ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಸಿಜೆಪಿ ನಾಯಕ ಸೌರವ್ ದಾಸ್ ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್‌ಗಳನ್ನು ಕಾನೂನುಬಾಹಿರವಾಗಿ ಕಸಿದುಕೊಂಡು, ವಕೀಲರ ಪ್ರವೇಶ ನಿರಾಕರಿಸಲಾಗಿದೆ ಎಂದಿದ್ದಾರೆ. ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಘೋಷಿಸಿದೆ. ಸುಪ್ರೀಂ ಕೋರ್ಟ್ ಶಾಂತಿಯುತ ಪ್ರತಿಭಟನೆಯ ಹಕ್ಕು ಎತ್ತಿಹಿಡಿದಿದ್ದು, ಪ್ರತಿಪಕ್ಷಗಳು ಹೋರಾಟಕ್ಕೆ ಬೆಂಬಲ ನೀಡಿವೆ.

ಅಪಹರಣ, ಮೊಬೈಲ್ ಜಪ್ತಿ, ವಕೀಲರಿಗೂ ನೋ ಎಂಟ್ರಿ: ಪೊಲೀಸರ ವಿರುದ್ಧ ಸೌರವ್ ದಾಸ್ ಗಂಭೀರ ಆರೋಪ, ಧರಣಿ ಮುಂದುವರೆಸುವುದಾಗಿ ಸಿಜೆಪಿ ಪಟ್ಟು
ಸೌರವ್

Updated on: Oct 11, 2026 | 2:59 PM

ನವದೆಹಲಿ, ಅಕ್ಟೋಬರ್ 11: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಕ್ರೋಚ್ ಜನತಾ ಪಕ್ಷದ (CJP) ಸಂಚಾಲಕ ಅಭಿಜೀತ್ ದಿಪ್ಕೆ, ಸಹ-ಸಂಚಾಲಕ ಸೌರವ್ ದಾಸ್ ಮತ್ತು ವಕ್ತಾರ ಅಶುತೋಷ್ ರಂಕಾ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ, ದೆಹಲಿ ಪೊಲೀಸರ ದೌರ್ಜನ್ಯದ ವಿರುದ್ಧ ಪತ್ರಿಕಾ ಪ್ರಕಟಣೆಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಾನೂನುಬಾಹಿರವಾಗಿ ಮೊಬೈಲ್ ಕಸಿದುಕೊಂಡರು: ಸೌರವ್ ದಾಸ್ ಕಿಡಿಕಾಡು

ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆಯಲ್ಲಿ ಪತ್ರಕರ್ತ ಹಾಗೂ ಸಿಜೆಪಿ ಮುಖಂಡ ಸೌರವ್ ದಾಸ್ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಮಾನ ನಿಲ್ದಾಣದಿಂದ ನಮ್ಮನ್ನು ಯಾವುದೇ ಮುನ್ಸೂಚನೆ ಅಥವಾ ವಾರಂಟ್ ನೀಡದೆ ಪೊಲೀಸರು ಬಲವಂತವಾಗಿ ಅಪಹರಿಸಿದ ರೀತಿಯಲ್ಲಿ ಕರೆದೊಯ್ದರು.

ಫೋನ್‌ಗಳ ಜಪ್ತಿ: “ನಮ್ಮ ಮೊಬೈಲ್ ಫೋನ್‌ಗಳನ್ನು ಕಾನೂನುಬಾಹಿರವಾಗಿ ಕಸಿದುಕೊಳ್ಳಲಾಯಿತು. ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಯಾವುದೇ ಅವಕಾಶ ನೀಡಲಿಲ್ಲ.  “ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ, ನಮ್ಮ ವಕೀಲರನ್ನು ಭೇಟಿ ಮಾಡಲು ಅಥವಾ ಕಾನೂನು ನೆರವು ಪಡೆಯಲು ನಮಗೆ ಅವಕಾಶ ನೀಡಲಿಲ್ಲ” ಎಂದು ದಾಸ್ ಆರೋಪಿಸಿದ್ದಾರೆ.

ಹಿಂದೆ ಸರಿಯಲ್ಲ: ಸತತ 2ನೇ ದಿನವೂ ಜಂತರ್ ಮಂತರ್ ಚಲೋಗೆ ಕರೆ

ಸಿಜೆಪಿ ಹಂಗಾಮಿ ನಾಯಕ ಅಜಿಂಕ್ಯ ಶಿಂಧೆ ಮತ್ತು ಎಐಎಸ್‌ಎ (AISA) ಅಧ್ಯಕ್ಷೆ ನೇಹಾ ಬೋರಾ ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ದೇಶವ್ಯಾಪಿ ಆಂದೋಲನ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ. ಸರ್ಕಾರ ನಮ್ಮ ನಾಯಕರನ್ನು ಬಂಧಿಸಿ ಚಳವಳಿ ಹತ್ತಿಕ್ಕಲು ನೋಡುತ್ತಿದೆ. ಆದರೆ ದೆಹಲಿಯ ಒಂದೊಂದು ಭಾಗವೂ ಜಂತರ್ ಮಂತರ್ ಆಗಿ ಬದಲಾಗಲಿದೆ ಎಂದು ವಿದ್ಯಾರ್ಥಿ ಮುಖಂಡರು ಕರೆ ನೀಡಿದ್ದಾರೆ.

ದೆಹಲಿಯಲ್ಲಿ ಕೋಟೆ ಸನ್ನಿವೇಶ: 40,000 ಭದ್ರತಾ ಸಿಬ್ಬಂದಿ ನಿಯೋಜನೆ

ಬೃಹತ್ ಭದ್ರತೆ: 2020ರ ದೆಹಲಿ ಗಲಭೆಯ ನಂತರ ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ 40,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ಬೀದಿಗಿಳಿಸಲಾಗಿದೆ. ಹರಿಯಾಣ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ ಸಿಂಘು, ಘಾಜಿಪುರ, ಚಿಲ್ಲಾ ಮತ್ತು ಅಪ್ಸರಾ ಗಡಿಗಳಲ್ಲಿ ಎರಡು ಹಂತದ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. 30ಕ್ಕೂ ಹೆಚ್ಚು ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಮತ್ತಷ್ಟು ಓದಿ: ದೆಹಲಿ ಪ್ರತಿಭಟನೆ, ಸಿಜೆಪಿಯ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಬಿಡುಗಡೆ

ಮೆಟ್ರೋ ಸಂಚಾರ ಪುನರಾರಂಭ: ಶನಿವಾರ ಮುಚ್ಚಲಾಗಿದ್ದ ದೆಹಲಿ ಮೆಟ್ರೋ ನಿಲ್ದಾಣಗಳು ಮತ್ತು ರೈಲು ಸಂಚಾರವನ್ನು ಭಾನುವಾರದಿಂದ ಸಹಜ ಸ್ಥಿತಿಗೆ ತರಲಾಗಿದೆ.

ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ತೃಣಮೂಲ ಕಾಂಗ್ರೆಸ್ ನಾಯಕಿ ಮೇನಕಾ ಗುರುಸ್ವಾಮಿ ಸಲ್ಲಿಸಿದ ತುರ್ತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರಿದ್ದ ಸುಪ್ರೀಂ ಕೋರ್ಟ್ ಪೀಠ “ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕು. ಬ್ಯಾರಿಕೇಡ್‌ಗಳು ಮತ್ತು ಇಂಟರ್ನೆಟ್ ನಿಷೇಧದಿಂದ ಜನರ ಸಂಚಾರ ಹಾಗೂ ಹಕ್ಕುಗಳನ್ನು ಮೊಟಕುಗೊಳಿಸಬಾರದು” ಎಂದು ಪೊಲೀಸರಿಗೆ ಆದೇಶಿಸಿದೆ.

ಸೋಮವಾರ ಸುಪ್ರೀಂ ಕೋರ್ಟ್‌ಗೆ ಇಂಡಿ ಮೈತ್ರಿಕೂಟದ ಪಾದಯಾತ್ರೆ

ಈ ಹೋರಾಟಕ್ಕೆ ವಿಪಕ್ಷಗಳ ಇಂಡಿ ಬಣ ಸಂಪೂರ್ಣ ಸಾಥ್ ನೀಡಿದ್ದು, ಸೋಮವಾರ ಮಹತ್ವದ ಪ್ರತಿಭಟನೆಗೆ ಕರೆ ನೀಡಿದೆ. ಎಸ್‌ಐಆರ್ ಮತದಾರರ ಪಟ್ಟಿ ಅಕ್ರಮ ಮತ್ತು ಚುನಾವಣಾ ಆಯೋಗದ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್‌ಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಇದು ವಿಪಕ್ಷಗಳ ಪ್ರಾಯೋಜಿತ ದೊಂಬಿಪ್ರಭುತ್ವ ಮತ್ತು ವಿದೇಶಿ ಶಕ್ತಿಗಳ ಪಿತೂರಿ ಎಂದು ಆಡಳಿತಾರೂಢ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us