SBI Recruitment 2026: ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣಾವಕಾಶ

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ (SBI), 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರಿಗೆ ಇದೊಂದು ಸುವರ್ಣಾವಕಾಶ. ಆಯ್ಕೆಯಾದವರಿಗೆ ಒಂದು ವರ್ಷ ತರಬೇತಿಯೊಂದಿಗೆ ಪ್ರತಿ ತಿಂಗಳು ರೂ 15,000 ಸ್ಟೈಫಂಡ್ ನೀಡಲಾಗುತ್ತದೆ. ಜೂನ್ 8 ಕೊನೆಯ ದಿನಾಂಕ. ಈ ತರಬೇತಿ ಪೂರ್ಣಗೊಳಿಸಿದವರಿಗೆ ಭವಿಷ್ಯದಲ್ಲಿ ಎಸ್‌ಬಿಐ ಕ್ಲರ್ಕ್ ನೇಮಕಾತಿಯಲ್ಲಿ ಆದ್ಯತೆ ದೊರೆಯಲಿದೆ.

SBI Recruitment 2026: ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣಾವಕಾಶ
ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಅರ್ಜಿ ಆಹ್ವಾನ
Image Credit source: Pinterest

Updated on: May 21, 2026 | 3:48 PM

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸುವರ್ಣಾವಕಾಶವನ್ನು ನೀಡಿದೆ. ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ (Apprentice) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ಅರ್ಹತೆಗಳು, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಕೆಳಗಿನಂತಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:

SBI ಈ ಅಧಿಸೂಚನೆಯ ಮೂಲಕ ದೇಶಾದ್ಯಂತ ಒಟ್ಟು 7,150 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳ ಈ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ (Degree) ಉತ್ತೀರ್ಣರಾಗಿದ್ದರೆ ಸಾಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಡ್ಡಾಯವಾಗಿ ಪ್ರವೀಣರಾಗಿರಬೇಕು.

ವಯೋಮಿತಿ ಮತ್ತು ಸಡಿಲಿಕೆ:

ಏಪ್ರಿಲ್ 1, 2026 ರ ಅನ್ವಯ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಅಂದರೆ, ಅಭ್ಯರ್ಥಿಗಳು ಏಪ್ರಿಲ್ 2, 1998 ಮತ್ತು ಏಪ್ರಿಲ್ 1, 2006 ರ ನಡುವೆ ಜನಿಸಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ (SC), ಎಸ್‌ಟಿ (ST), ಒಬಿಸಿ (OBC) ಮತ್ತು ದಿವ್ಯಾಂಗ (PwBD) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಂತಿಮ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಜುಲೈ 2026 ರಲ್ಲಿ ನಡೆಯಲಿದೆ. ಆನ್‌ಲೈನ್ ಲಿಖಿತ ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು 100 ಅಂಕಗಳಿಗೆ ನಡೆಯುತ್ತದೆ. ಜನರಲ್/ಫೈನಾನ್ಷಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್. ಪ್ರತಿ ವಿಭಾಗದಿಂದ ತಲಾ 25 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜನರಲ್ ಇಂಗ್ಲಿಷ್ ವಿಭಾಗವನ್ನು ಹೊರತುಪಡಿಸಿ, ಉಳಿದ ವಿಭಾಗಗಳನ್ನು ಇಂಗ್ಲಿಷ್, ಹಿಂದಿ ಮತ್ತು ಅಭ್ಯರ್ಥಿಯು ಆಯ್ಕೆ ಮಾಡಿದ ರಾಜ್ಯದ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಅಂದರೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ:

ಲಿಖಿತ ಪರೀಕ್ಷೆಯ ಮೆರಿಟ್ ಆಧಾರದಲ್ಲಿ ಆಯ್ಕೆಯಾದವರಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಇರುತ್ತದೆ. ಆದರೆ, ಅಭ್ಯರ್ಥಿಗಳು ತಮ್ಮ 10 ಅಥವಾ 12 ನೇ ತರಗತಿಯ ಅಂಕ ಪಟ್ಟಿಯಲ್ಲಿ ಈ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರುವ ಪುರಾವೆಗಳನ್ನು ತೋರಿಸಿದರೆ ಈ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ತರಬೇತಿ ಅವಧಿ, ಸ್ಟೈಫಂಡ್ ಮತ್ತು ಭವಿಷ್ಯದ ಪ್ರಯೋಜನಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ಅಪ್ರೆಂಟಿಸ್‌ಗಳಾಗಿ ತರಬೇತಿ ಪಡೆಯಲು ಅವಕಾಶವಿರುತ್ತದೆ. ಈ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ. 15,000 ಸ್ಟೈಫಂಡ್ ನೀಡಲಾಗುತ್ತದೆ. ಇಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ, ಭವಿಷ್ಯದಲ್ಲಿ ನಡೆಯುವ ಎಸ್‌ಬಿಐ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್ – SBI Junior Associate) ನೇಮಕಾತಿಗಳಲ್ಲಿ ವಿಶೇಷ ಆದ್ಯತೆ (Weightage/Preference) ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ಲಿಂಕ್‌ಗಳು:

  • ಪ್ರಮುಖ ದಿನಾಂಕ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 8, 2026 ಕೊನೆಯ ದಿನವಾಗಿದೆ.
  • ಅಭ್ಯರ್ಥಿಗಳು ಮೊದಲು ಸರ್ಕಾರದ ಅಧಿಕೃತ NAPS ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
  • ನಂತರ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ನೇರ ಅರ್ಜಿ ಲಿಂಕ್‌ಗಳು:

SBI Careers – Current Openings

SBI Official Web Portal

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us