ಬ್ಯಾಂಕ್ ನೌಕರನಿಂದ ಪತ್ನಿಗೆ ಗುಂಡಿಕ್ಕಿ ಹತ್ಯೆ; ಮನೆಗೆ ತೆರಳಿ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ!

ಉತ್ತರ ಪ್ರದೇಶದ ಲಕ್ನೋದಿಂದ ಅತ್ಯಂತ ಆಘಾತಕಾರಿ ಕೊಲೆ ಪ್ರಕರಣವೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ತಂಗಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭೀಕರ ಅವಳಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ಇಂದು ನಡೆದಿದೆ. ಎಸ್​ಬಿಐ ಉದ್ಯೋಗಿಯಾಗಿದ್ದ ವ್ಯಕ್ತಿ ಐಸಿಐಸಿಐ ಬ್ಯಾಂಕ್ ಎದುರು ತನ್ನ ಪತ್ನಿಗೆ ಶೂಟ್ ಮಾಡಿ ಕೊಂದಿದ್ದಾನೆ. ತನ್ನ ಪತ್ನಿ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಂತರ ಮನೆಗೆ ಮರಳಿ ತನ್ನ ತಂಗಿಯನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ.

ಬ್ಯಾಂಕ್ ನೌಕರನಿಂದ ಪತ್ನಿಗೆ ಗುಂಡಿಕ್ಕಿ ಹತ್ಯೆ; ಮನೆಗೆ ತೆರಳಿ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ!
Lucknow Murder
Image Credit source: TV9

Updated on: Aug 20, 2026 | 7:55 PM

ಲಕ್ನೋ, ಆಗಸ್ಟ್ 20: ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) ಇಂದು ಡಬಲ್ ಮರ್ಡರ್ ಹಾಗೂ ಆತ್ಮಹತ್ಯೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಎಸ್‌ಬಿಐ ಬ್ಯಾಂಕ್ ನೌಕರನೊಬ್ಬ ಪತ್ನಿ ಕೆಲಸ ಮಾಡುತ್ತಿದ್ದ ಕಚೇರಿಯ ಹೊರಗಡೆ ಆಕೆಗೆ ಗುಂಡಿಕ್ಕಿ ಕೊಂದಿದ್ದು, ಬಳಿಕ ಮನೆಗೆ ತೆರಳಿ ತನ್ನ ತಂಗಿಯನ್ನೂ ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯಲ್ಲಿ ಮೃತನನ್ನು ಎಸ್‌ಬಿಐ ನೌಕರ ಮಾನಸ್ ವಾಜಪೇಯಿ (38) ಎಂದು ಗುರುತಿಸಲಾಗಿದೆ. ಈತ ನಗರದ ಐಷಾರಾಮಿ ಪ್ರದೇಶವಾದ ಗೋಮತಿ ನಗರದಲ್ಲಿರುವ ಐಸಿಐಸಿಐ (ICICI) ಬ್ಯಾಂಕ್ ಶಾಖೆಯ ಹೊರಗಡೆ ತನ್ನ ಪತ್ನಿ ದಿವ್ಯಾ ಮಿಶ್ರಾಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಎನ್​ಡಿಟಿವಿ ವರದಿ ಪ್ರಕಾರ, 38 ವರ್ಷದ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದ ಆಕೆಯನ್ನು ಹೊರಗೆ ಕರೆಸಿಕೊಂಡಿದ್ದ. ಕೆಲವು ನಿಮಿಷಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ನಂತರ ಮಾನಸ್ ಆಕೆಗೆ ಗುಂಡಿಕ್ಕಿ ಕೊಂದಿದ್ದಾನೆ. ತಕ್ಷಣ ದಿವ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ನೋಯ್ಡಾದಲ್ಲಿ ಲೋಕಸಭಾ ಸಚಿವಾಲಯದ ಅಧಿಕಾರಿ ಆತ್ಮಹತ್ಯೆ, ನಿರ್ಧಾರದ ಹಿಂದಿನ ಕಾರಣ ತಿಳಿಸಿದ 15 ಪುಟಗಳ ಡೆತ್​ ನೋಟ್

ದಿವ್ಯಾ ಮತ್ತು ಮಾನಸ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ಕಳೆದ 1 ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಹತ್ಯೆಯ ನಂತರ ಆರೋಪಿ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಕೊಲೆಯ ಕುರಿತು ಬರೆದುಕೊಂಡಿದ್ದ. “ಪತ್ನಿ ನನಗೆ ವಂಚನೆ ಮಾಡಿದ್ದಾಳೆ, ಹೀಗಾಗಿ ಆಕೆಯನ್ನು ಹತ್ಯೆ ಮಾಡಿದ್ದೇನೆ” ಎಂದು ಬರೆದಿದ್ದ.

ಅಷ್ಟೇ ಅಲ್ಲದೆ, “ಈಗ ನನ್ನ ತಂಗಿಯನ್ನೂ ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ವಾಟ್ಸಾಪ್‌ನಲ್ಲಿ ಬರೆದುಕೊಂಡಿದ್ದ. ಹೀಗೆ ಬರೆದ ನಂತರ ಮನೆಗೆ ತೆರಳಿದ ಆತ ತನ್ನ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳೆಗೆ ಗುಂಡೇಟು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ತಾಯಿ ಕಣ್ಣೆದುರೇ ಹತ್ಯೆ: ಒಂದು ಎಕರೆ ಜಮೀನಿಗಾಗಿ ಅಣ್ಣನನ್ನೇ ಕೊಂದು ಜೈಲು ಸೇರಿದ ತಮ್ಮ

ಘಟನಾ ಸ್ಥಳದಿಂದ ಪೋಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ನಗರದ ಅತ್ಯಂತ ಸುರಕ್ಷಿತ ಮತ್ತು ಪ್ರಭಾವಿ ಪ್ರದೇಶದಲ್ಲಿ ಈ ಕೊಲೆ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ. ಆತನ ವಾಟ್ಸಾಪ್ ಸ್ಟೇಟಸ್ ನೋಡಿದ ನಂತರ ಬಾಗಿಲು ಮುರಿದು ಒಳಗೆ ಹೋದಾಗ ಅಣ್ಣ-ತಂಗಿ ಇಬ್ಬರೂ ಮಂಚದ ಮೇಲೆ ಶವವಾಗಿ ಬಿದ್ದಿದ್ದರು. ಮಾನಸ್ ಎದೆಯ ಮೇಲೆ ಪಿಸ್ತೂಲ್ ಪತ್ತೆಯಾಗಿದೆ.

ಆರೋಪಿ ಗಂಡ ದಿವ್ಯಾ ಅವರನ್ನು ಬ್ಯಾಂಕ್‌ನಿಂದ ಹೊರಗೆ ಕರೆಸಿ, ಕೆಲ ಸಮಯ ಮಾತನಾಡಿದ ನಂತರ ಗುಂಡಿಕ್ಕಿ ಪರಾರಿಯಾಗಿದ್ದ. ಈ ಘಟನೆ ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇಡೀ ಘಟನೆಯನ್ನು ಮರುಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಮೊದಲು ಪತ್ನಿಯನ್ನು ಭೇಟಿಯಾಗಿ ಮಾತನಾಡಿದ್ದು, ಮಾತುಕತೆ ಫಲಿಸದಿದ್ದಾಗ ಪತ್ನಿಯನ್ನು ಕೊಂದು, ನಂತರ ತಂಗಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us