1997ರ ಹಗರಣಕ್ಕೆ 2025ರಲ್ಲಿ ಕೇಸ್; ಮೋಸದಿಂದ ಐಎಎಫ್​​ನ ವಾಯುನೆಲೆಯನ್ನೇ ಮಾರಾಟ ಮಾಡಿದ ಅಮ್ಮ-ಮಗ

ಫಿರೋಜ್‌ಪುರದಲ್ಲಿ 28 ವರ್ಷಗಳ ಹಿಂದಿನ ಭೂ ಹಗರಣವೊಂದು ಬೆಳಕಿಗೆ ಬಂದಿದೆ. ಇದರಲ್ಲಿ ಭಾರತೀಯ ವಾಯುಪಡೆಯ (IAF) ವಾಯುನೆಲೆಯ ಅಕ್ರಮ ಮಾರಾಟದ ಮಾಸ್ಟರ್‌ಮೈಂಡ್ ಆಗಿರುವ ತಾಯಿ-ಮಗನ ತಂಡದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ನಡೆದಿದೆ ಎನ್ನಲಾಗಿದೆ. 1962, 1965 ಮತ್ತು 1971ರ ಯುದ್ಧಗಳಲ್ಲಿ ಲ್ಯಾಂಡಿಂಗ್ ಮೈದಾನವಾಗಿ ಬಳಸಲಾಗಿದ್ದ ಎರಡನೇ ಮಹಾಯುದ್ಧದ ಐತಿಹಾಸಿಕ ವಾಯುನೆಲೆಯನ್ನು 1997ರಲ್ಲಿ ಮೋಸದಿಂದ ಮಾರಾಟ ಮಾಡಲಾಗಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

1997ರ ಹಗರಣಕ್ಕೆ 2025ರಲ್ಲಿ ಕೇಸ್; ಮೋಸದಿಂದ ಐಎಎಫ್​​ನ ವಾಯುನೆಲೆಯನ್ನೇ ಮಾರಾಟ ಮಾಡಿದ ಅಮ್ಮ-ಮಗ
Representative Image

Updated on: Jul 01, 2025 | 5:51 PM

ಫಿರೋಜ್​ಪುರ, ಜುಲೈ 1: ಭಾರತದ ಪಂಜಾಬ್‌ನಲ್ಲಿ ಹೊಸ ಭೂ ಹಗರಣವೊಂದು ಬೆಳಕಿಗೆ ಬಂದಿದೆ. 1962, 1965 ಮತ್ತು 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಭಾರತೀಯ ವಾಯುಪಡೆಯ (IAF) ವಾಯುನೆಲೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ಪಂಜಾಬ್‌ನ ಫಿರೋಜ್‌ಪುರ ಪೊಲೀಸರು ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ತಾಯಿ-ಮಗನ ಜೋಡಿ ವಾಯುನೆಲೆಯನ್ನೇ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 1997ರಲ್ಲಿ ದುಮ್ನಿ ವಾಲಾ ಗ್ರಾಮದ ನಿವಾಸಿಗಳಾದ ಉಷಾ ಅನ್ಸಾಲ್ ಮತ್ತು ಅವರ ಮಗ ನವೀನ್ ಚಂದ್ ಈ ಭೂಮಿಯನ್ನು ಮಾರಾಟ ಮಾಡಿದ್ದರೂ ಈ ವಿಷಯದ ಬಗ್ಗೆ 28 ​​ವರ್ಷಗಳ ನಂತರ ಕೇಸ್ ದಾಖಲಿಸಲಾಗಿದೆ. ನಿವೃತ್ತ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ಅವರು ವಿಜಿಲೆನ್ಸ್ ಬ್ಯೂರೋಗೆ ದೂರು ನೀಡಿದ ನಂತರ ಈ ವಿಷಯ ಮೊದಲು ಬೆಳಕಿಗೆ ಬಂದಿತು. ಬಳಿಕ ಪ್ರಾಥಮಿಕ ತನಿಖೆ ನಡೆಸಲಾಗಿದ್ದರೂ ಹಲವು ವರ್ಷಗಳವರೆಗೆ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನ್ಯಾಯಾಲಯದ ಹಸ್ತಕ್ಷೇಪದ ನಂತರ ಇತ್ತೀಚೆಗೆ ಅಂತಿಮವಾಗಿ ಎಫ್​ಐಆರ್ ದಾಖಲಾಗಿದೆ.

ಪಾಕಿಸ್ತಾನ ಗಡಿಯ ಬಳಿಯ ಪಟ್ಟಿ ಫತ್ತುವಾಲಾ ಗ್ರಾಮದಲ್ಲಿರುವ ಈ ವಾಯುನೆಲೆಯನ್ನು ಮಾರ್ಚ್ 12, 1945ರಂದು ಬ್ರಿಟಿಷ್ ಆಡಳಿತವು ಸ್ವಾಧೀನಪಡಿಸಿಕೊಂಡಿತು. ಇದನ್ನು ಭಾರತೀಯ ವಾಯುಪಡೆ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ (ALG) ಆಗಿ ಬಳಸಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ವಾಗ್ದಂಡನೆ ಮೇರೆಗೆ ವಿಜಿಲೆನ್ಸ್ ಇಲಾಖೆ ನಡೆಸಿದ ತನಿಖೆಯ ಪರಿಣಾಮವಾಗಿ, ಈ ವಂಚನೆ ನಡೆದ 28 ವರ್ಷಗಳ ನಂತರ ಜೂನ್ 20, 2025ರಂದು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ನಾನೂ ಆ ರೂಮಲ್ಲೇ ಇದ್ದೆ; ಭಾರತ-ಪಾಕಿಸ್ತಾನದ ಕದನ ವಿರಾಮ ಕುರಿತು ಸಚಿವ ಜೈಶಂಕರ್ ಹೇಳಿದ್ದೇನು?

ಪಾಕಿಸ್ತಾನ ಗಡಿಗೆ ಹತ್ತಿರದಲ್ಲಿರುವ ಫತ್ತುವಾಲಾ ಗ್ರಾಮದಲ್ಲಿ ವಾಯುನೆಲೆ ಇದೆ. ಹೈಕೋರ್ಟ್ ಹಸ್ತಕ್ಷೇಪದ ನಂತರ ಈ ಭೂಮಿಯನ್ನು ಈ ವರ್ಷ ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಲಾಯಿತು. ಮಾರ್ಚ್ 12, 1945ರಂದು ಬ್ರಿಟಿಷ್ ಆಳ್ವಿಕೆಯಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಸಲು ಸ್ವಾಧೀನಪಡಿಸಿಕೊಂಡ ಈ ಭೂಮಿ IAFಗೆ ಸೇರಿತ್ತು. ಉಷಾ ಅನ್ಸಾಲ್ ಮತ್ತು ಅವರ ಮಗ ನವೀನ್ ಚಂದ್ ತಾವೇ ಈ ಭೂಮಿಯ ಮಾಲೀಕರೆಂದು ಹೇಳಿಕೊಂಡು ಮಾರಾಟ ಮಾಡಿದ್ದಾರೆ.

ತಾಯಿ-ಮಗ ಇಬ್ಬರೂ ತಮ್ಮನ್ನು ಭೂಮಾಲೀಕರೆಂದು ಹೇಳಿಕೊಂಡಿದ್ದು, ಇದರ ನಿಜವಾದ ಮಾಲೀಕ ಮದನ್ ಮೋಹನ್ ಲಾಲ್ 1991ರಲ್ಲಿ ನಿಧನರಾಗಿದ್ದರು. ಆದರೆ 1997ರಲ್ಲಿ ಅವರ ಹೆಸರಿನಲ್ಲಿ ಭೂಮಿಯನ್ನು ಮಾರಾಟ ಮಾಡಲಾಯಿತು. ರಕ್ಷಣಾ ಸಚಿವಾಲಯವು ಭೂಮಿಯನ್ನು ವರ್ಗಾಯಿಸದಿದ್ದರೂ 2009-2010ರ ನಡುವೆ ಹಲವಾರು ವ್ಯಕ್ತಿಗಳನ್ನು ಮಾಲೀಕರೆಂದು ಹೆಸರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಅಕ್ರಮವಾಗಿ ಭಾರತ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಜೋಡಿ: ನೀರಿಲ್ಲದೆ ಮರುಭೂಮಿಯಲ್ಲಿ ದುರಂತ ಸಾವು

ಏಪ್ರಿಲ್ 16, 2021ರಂದು ಹಲ್ವಾರಾ ವಾಯುಪಡೆ ನಿಲ್ದಾಣದ ಕಮಾಂಡೆಂಟ್ ನಿವೃತ್ತ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ಅವರು ದೂರು ದಾಖಲಿಸಿದರು. ಸ್ಥಳೀಯ ಆಡಳಿತವು ಈ ಬಗ್ಗೆ ಸಮಗ್ರ ತನಿಖೆ ನಡೆಸಲು 5 ವರ್ಷಗಳನ್ನು ತೆಗೆದುಕೊಂಡಿತು. ನಿಶಾನ್ ಸಿಂಗ್ ಡಿಸೆಂಬರ್ 21, 2023ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತೆರಳಿದರು. ನ್ಯಾಯಮೂರ್ತಿ ಹರ್ಜಿತ್ ಸಿಂಗ್ ಬ್ರಾರ್ ಅವರು ಫಿರೋಜ್‌ಪುರದ ಉಪ ಆಯುಕ್ತರಿಗೆ ಛೀಮಾರಿ ಹಾಕಿದರು. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಎಂದು ಟೀಕಿಸಿದರು. ಹಾಗೇ, ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯಸ್ಥರಿಗೆ ವೈಯಕ್ತಿಕವಾಗಿ ತನಿಖೆ ನಡೆಸಿ 4 ವಾರಗಳಲ್ಲಿ ವರದಿ ನೀಡುವಂತೆ ನಿರ್ದೇಶಿಸಿದರು. ಹೈಕೋರ್ಟ್ ಹಸ್ತಕ್ಷೇಪದ ನಂತರ, ಭೂಮಿಯನ್ನು ಅಂತಿಮವಾಗಿ ಮೇ 2025ರಲ್ಲಿ ರಕ್ಷಣಾ ಸಚಿವಾಲಯಕ್ಕೆ ವಾಪಾಸ್ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:49 pm, Tue, 1 July 25