ಪಶ್ಚಿಮ ಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರಾ ಸಚಿವ ಸ್ಥಾನ ತೊರೆಯುವ ಸಾಧ್ಯತೆ?
Amit Mitra: ಅಮಿತ್ ಮಿತ್ರಾ ಅವರು ನವೆಂಬರ್ 4 ರಂದು ಮೂರನೇ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ರಾಜ್ಯ ವಿತ್ತ ಸಚಿವರಾಗಿ ಆರು ತಿಂಗಳು ಪೂರ್ಣಗೊಳಿಸಲಿದ್ದಾರೆ. ಅವರು ಶಾಸಕರಲ್ಲದ ಸಚಿವರಾಗಿರುವುದರಿಂದ ಆರು ತಿಂಗಳ ನಂತರ ಅವರು ಈ ಹುದ್ದೆಯನ್ನು ತೊರೆಯಬೇಕಾಗುತ್ತದೆ ಅಥವಾ ಉಪಚುನಾವಣೆಗಳ ಮೂಲಕ ಚುನಾವಣೆ ಗೆಲ್ಲಬೇಕು
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಮಿತ್ ಮಿತ್ರಾ ಅನಾರೋಗ್ಯದಿಂದಾಗಿ ಪಶ್ಚಿಮ ಬಂಗಾಳದ ವಿತ್ತ ಸಚಿವ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 74 ರ ಹರೆಯದ ಮಿತ್ರಾ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ನಂತರ 2011ರಿಂದ ಈ ಹುದ್ದೆಯಲ್ಲಿದ್ದ ಮಿತ್ರಾಗೆ ಮಮತಾ ಈ ಬಾರಿಯು ಹಣಕಾಸು ಖಾತೆ ನೀಡಿದ್ದರು. ಅಂದ ಹಾಗೆ ಶಾಸಕರಲ್ಲದ ಕಾರಣ, ಮಿತ್ರಾ ಅವರು ಗರಿಷ್ಠ 6 ತಿಂಗಳು ಈ ಹುದ್ದೆಯಲ್ಲಿರಬಹುದು. ಅದೇ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕಾದರೆ ಅವರು ಉಪಚುನಾವಣೆಯಲ್ಲಿ ಗೆದ್ದು ಬರಬೇಕು.
ಅಮಿತ್ ಮಿತ್ರಾ ಅವರು ನವೆಂಬರ್ 4 ರಂದು ಮೂರನೇ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ರಾಜ್ಯ ವಿತ್ತ ಸಚಿವರಾಗಿ ಆರು ತಿಂಗಳು ಪೂರ್ಣಗೊಳಿಸಲಿದ್ದಾರೆ. ಅವರು ಶಾಸಕರಲ್ಲದ ಸಚಿವರಾಗಿರುವುದರಿಂದ ಆರು ತಿಂಗಳ ನಂತರ ಅವರು ಈ ಹುದ್ದೆಯನ್ನು ತೊರೆಯಬೇಕಾಗುತ್ತದೆ ಅಥವಾ ಉಪಚುನಾವಣೆಗಳ ಮೂಲಕ ಚುನಾವಣೆ ಗೆಲ್ಲಬೇಕು. ಆದರೆ, ಅನಾರೋಗ್ಯದ ಕಾರಣ ನವೆಂಬರ್ 4 ರಂದು ರಾಜ್ಯ ಸಚಿವರಾಗಿ ಮುಂದುವರಿಯಲು ಅವರು ಬಯಸುವುದಿಲ್ಲ ಎಂದು ಅವರು ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೆಸರು ಹೇಳಲು ಬಯಸದ ಟಿಎಂಸಿ ನೇತಾರರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಿತ್ರಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯಿಸಲು ಸಿಕ್ಕಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮುಂದಿನ ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಯನ್ನು ಕಂಡುಕೊಳ್ಳುವವರೆಗೂ ಬ್ಯಾನರ್ಜಿ ಅವರು ಹಣಕಾಸು ಖಾತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿಯಲ್ಲಿ ಮತ್ತು ಕಳೆದ ವಾರ ರಾಜ್ಯ ಬಜೆಟ್ ಲೆಕ್ಕಾಚಾರ ಮಾಡುವಾಗ ಮಿತ್ರಾ ಅವರು ವೋಟ್ ಆನ್ ಅಕೌಂಟ್ (ಮಧ್ಯಂತರ ಬಜೆಟ್) ಹಾಜರಿರಲಿಲ್ಲ. ಫೆಬ್ರವರಿಯಲ್ಲಿ ಬ್ಯಾನರ್ಜಿ ಅವರ ಪರವಾಗಿ ಮಧ್ಯಂತರ ಬಜೆಟ್ ಮಂಡಿಸಿದ್ದರೆ, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ಕಳೆದ ವಾರ ಬಜೆಟ್ ಮಂಡಿಸಿದರು.
ಮಾಜಿ ಎಫ್‌ಐಸಿಸಿಐ ಪ್ರಧಾನ ಕಾರ್ಯದರ್ಶಿ ಮಿತ್ರಾ 2009 ರಿಂದ ಟಿಎಂಸಿ ಯುಪಿಎ -2 ರ ಭಾಗವಾಗಿದ್ದಾಗ ಬ್ಯಾನರ್ಜಿಯ ನಿರ್ಧಾರ ತೆಗೆದುಕೊಳ್ಳುವ ತಂಡದ ಭಾಗವಾಗಿದ್ದರು.
2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಿತ್ರಾ ಅವರನ್ನು ವಿತ್ತ ಸಚಿವರನ್ನಾಗಿ ಮಾಡಲಾಯಿತು. ಅವರು ಉತ್ತರ 24 ಪರಗಣಗಳ ಖಾರ್ದಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದಾರೆ. ವಿತ್ತ ಸಚಿವಾಲಯದ ಜವಾಬ್ದಾರಿ ಜತೆಗೆ ಮಿತ್ರಾ ಅವರು 2014 ರಿಂದ ಉದ್ಯಮ ಖಾತೆ ಸಹ ಹೊಂದಿದ್ದರು.
ಇದನ್ನೂ ಓದಿ: ಮೂರು ತಾಸು ಸಭೆ ನಡೆಸಿದ ಪ್ರಶಾಂತ್ ಕಿಶೋರ್-ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳ ರಾಜಕಾರಣದತ್ತ ಕುತೂಹಲ
(Senior TMC leader Amit Mitra likely to step down as West Bengal Finance Minister due to ill-health)