ಮೂರು ತಾಸು ಸಭೆ ನಡೆಸಿದ ಪ್ರಶಾಂತ್​ ಕಿಶೋರ್​-ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳ ರಾಜಕಾರಣದತ್ತ ಕುತೂಹಲ

West Bengal: ಮಮತಾ ಬ್ಯಾನರ್ಜಿಯವರು ಒಂದು ವ್ಯಕ್ತಿಗೆ ಒಂದೇ ಹುದ್ದೆ (One Man, One Post) ಎಂಬ ನಿಯಮವನ್ನು ಮುಂದಿನವಾರದಿಂದ ಅನುಷ್ಠಾನಕ್ಕೆ ತರಲಿದ್ದಾರೆ. ಇದರ ಅನ್ವಯ ಟಿಎಂಸಿಯಲ್ಲಿ ಒಬ್ಬರು ಎರಡು ಹುದ್ದೆಗಳನ್ನು ನಿಭಾಯಿಸುವಂತಿಲ್ಲ.

ಮೂರು ತಾಸು ಸಭೆ ನಡೆಸಿದ ಪ್ರಶಾಂತ್​ ಕಿಶೋರ್​-ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳ ರಾಜಕಾರಣದತ್ತ ಕುತೂಹಲ
ಪ್ರಶಾಂತ್ ಕಿಶೋರ್​ ಮತ್ತು ಮಮತಾ ಬ್ಯಾನರ್ಜಿ
Follow us
TV9 Web
| Updated By: Lakshmi Hegde

Updated on: Jul 10, 2021 | 1:08 PM

ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್​ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು, ಕೋಲ್ಕತ್ತದಲ್ಲಿ ಭೇಟಿಯಾಗಿದ್ದಾರೆ. ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮತ್ತೊಮ್ಮೆ ಪಶ್ಚಿಮಬಂಗಾಳದ ಅಧಿಕಾರ ಹಿಡಿದಿರುವ ಟಿಎಂಸಿಯಲ್ಲಿ ಕೆಲವು ಆಂತರಿಕ ಬೆಳವಣಿಗೆಗಳು ಆಗುತ್ತಿರುವ ಬೆನ್ನಲ್ಲೇ ಪ್ರಶಾಂತ್​ ಕಿಶೋರ್ ಮತ್ತು ಮಮತಾ ಬ್ಯಾನರ್ಜಿ ಸುಮಾರು ಮೂರು ತಾಸು ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿಯವರು ಒಂದು ವ್ಯಕ್ತಿಗೆ ಒಂದೇ ಹುದ್ದೆ (One Man, One Post) ಎಂಬ ನಿಯಮವನ್ನು ಮುಂದಿನವಾರದಿಂದ ಅನುಷ್ಠಾನಕ್ಕೆ ತರಲಿದ್ದಾರೆ. ಇದರ ಅನ್ವಯ ಟಿಎಂಸಿಯಲ್ಲಿ ಒಬ್ಬರು ಎರಡು ಹುದ್ದೆಗಳನ್ನು ನಿಭಾಯಿಸುವಂತಿಲ್ಲ. ಉದಾಹರಣೆಗೆ ಸಚಿವರಾದ ಜ್ಯೋತಿಪ್ರಿಯೋ ಮಲ್ಲಿಕ್​, ಪುಲಾಕ್​ ರಾಯ್​, ಸ್ವಪನ್​ ದೇಬ್​ನಾಥ್​, ಸೌಮೆನ್​ ಮಹಾಪಾತ್ರಾ ಜಿಲ್ಲೆಗಳ ಅಧ್ಯಕ್ಷ ಸ್ಥಾನದಲ್ಲೂ ಇದ್ದಾರೆ. ಬರುವ ದಿನಗಳಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ನಿಯಮ ಜಾರಿಯಾದರೆ ಇವರು ಒಂದೋ ಸಚಿವ ಸ್ಥಾನ ಬಿಡಬೇಕು..ಇಲ್ಲವೇ ಜಿಲ್ಲಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಟ್ಟಿನಲ್ಲಿ ಒಂದೇ ಹುದ್ದೆಯಲ್ಲಿ ಇರಬೇಕಾಗುತ್ತದೆ. ಈ ಅಜೆಂಡಾವನ್ನು ಮುಂದಿಟ್ಟಿದ್ದು ತೃಣಮೂಲ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ. ಇದರ ಹೊರತಾಗಿ ಪಕ್ಷದಲ್ಲಿ ಕೆಲವು ಆಂತರಿಕ ಬದಲಾವಣೆ ಮಾಡಲು ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದಲೂ ಪಕ್ಷದಲ್ಲಿ ಸಭೆ ನಡೆಯುತ್ತಿದೆ. ಚುನಾವಣೆಗಳ ಸಮಯಸೂಚಿ ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಾರಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಜವಾಬ್ದಾರಿಯನ್ನು ಸಂಪುಟ ದರ್ಜೆ ಸಚಿವರು ಹೊರಬೇಕು ಎಂಬ ಮಾಹಿತಿ ಸಿಕ್ಕಿದೆ. ಹಾಗೇ, ಸಂಪುಟ ಮರುರಚನೆ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಟಿಎಂಸಿಯ ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮಮತಾ ಬ್ಯಾನರ್ಜಿಯವರು ಜೂ.5ರಂದು ಪಕ್ಷದ ಸಾಂಸ್ಥಿಕ ಸಭೆ ನಡೆಸಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಕೂಡ ಅದರಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೊಮ್ಮೆ ಕೋಲ್ಕತ್ತದಲ್ಲಿ ಇವರಿಬ್ಬರೂ ಸುಮಾರು ಮೂರು ತಾಸುಗಳ ಸಭೆ ನಡೆಸಿದ್ದಾರೆ. ಈ ಬಾರಿ ಟಿಎಂಸಿ ಗೆದ್ದ ಬೆನ್ನಲ್ಲೇ ಪ್ರಶಾಂತ್ ಕಿಶೋರ್​, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಲು ಕಾರಣವೇನು ಎಂಬುದನ್ನು ತಿಳಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಳಸಿದ ತಂತ್ರವನ್ನೇ ಮತ್ತೊಮ್ಮೆ ಬಳಸಲು ಬಿಜೆಪಿ ಮುಂದಾಗಿದ್ದೇ ಅದರ ಸೋಲಿಗೆ ಕಾರಣ ಎಂದೂ ಹೇಳಿದ್ದರು.

 ಇದನ್ನೂ ಓದಿ: ಮತ್ತೆ ಒಂದಾಗಿ ನಾಗಚೈತನ್ಯ ಜೊತೆ ಸೆಲ್ಫಿಗೆ ಭರ್ಜರಿ ಪೋಸ್ ನೀಡಿದ ಆಮೀರ್ ಖಾನ್, ಕಿರಣ್ ರಾವ್: ಸಂತಸಕ್ಕೆ ಕಾರಣ ಗೊತ್ತಾ?

Prashant Kishor Mamata Banerjee s 3 hour Meet In Kolkata