
ಚೆನ್ನೈ, ಮೇ 25: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Assembly Elections) ಬೆನ್ನಲ್ಲೇ ಅಲ್ಲಿನ ರಾಜಕಾರಣದಲ್ಲಿ ಹೊಸ ತಿರುವು ಉಂಟಾಗಿದೆ. ಬಹುಮತ ಸಿಗದ ಹಿನ್ನೆಲೆಯಲ್ಲಿ ಇತರೆ ಪಕ್ಷಗಳ ಬೆಂಬಲ ಪಡೆಯಲು ವಿಜಯ್ ನೇತೃತ್ವದ ಟಿವಿಕೆ ಹರಸಾಹಸ ಪಟ್ಟಿತ್ತು. ಕೊನೆಗೂ ಎಡ ಪಕ್ಷಗಳು ಮತ್ತು ಕಾಂಗ್ರೆಸ್ನ ಬೆಂಬಲದೊಂದಿಗೆ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಎಐಎಡಿಎಂಕೆ (AIADMK) ಪಕ್ಷದ ಮೂವರು ಶಾಸಕರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಎಐಎಡಿಎಂಕೆಗೆ ರಾಜೀನಾಮೆ ನೀಡಿದ ರೆಬೆಲ್ ಶಾಸಕರು ಟಿವಿಕೆಗೆ ಸೇರುವುದಾಗಿ ಘೋಷಿಸುವ ಮೂಲಕ ಪಕ್ಷದ ಮುಖ್ಯಸ್ಥ ಪಳನಿಸ್ವಾಮಿಗೆ ಶಾಕ್ ನೀಡಿದ್ದಾರೆ.
ಈ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ಸ್ಪೀಕರ್ ಪ್ರಭಾಕರ್, ಅವುಗಳು ನಿಗದಿತ ನಿಯಮಾವಳಿಗಳ ಪ್ರಕಾರ ಸರಿಯಾದ ಮಾದರಿಯಲ್ಲಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಅಂಗೀಕರಿಸಿದ್ದಾರೆ. ರಾಜೀನಾಮೆ ನೀಡಲು ಕಾರಣವನ್ನು ಉಲ್ಲೇಖಿಸಲೇಬೇಕಾದ ಅಗತ್ಯವಿಲ್ಲ ಎಂದು ಈ ವೇಳೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಮಾಣವಚನದ ವೇಳೆ ರಾಹುಲ್ ಗಾಂಧಿ ಹೆಸರು ಹೇಳಿ ವಿವಾದಕ್ಕೀಡಾದ ತಮಿಳುನಾಡು ಕಾಂಗ್ರೆಸ್ ಶಾಸಕ
ರಾಜೀನಾಮೆ ನೀಡಿರುವ ಎಐಎಡಿಎಂಕೆಯ ಮೂವರು ಶಾಸಕರೆಂದರೆ ಮರಗತಂ ಕುಮಾರವೇಲ್, ಸತ್ಯಭಾಮಾ ಮತ್ತು ಜಯಕುಮಾರ್. ಅವರು ಸಿ. ವಿ. ಷಣ್ಮುಗಂ ಮತ್ತು ಎಸ್. ಪಿ. ವೇಲುಮಣಿ ನೇತೃತ್ವದ ಎಐಎಡಿಎಂಕೆ ಬಂಡಾಯ ಬಣದ ಭಾಗವಾಗಿದ್ದರು. ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ವೇಳೆ ಈ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ, ನಟ ವಿಜಯ್ ನೇತೃತ್ವದ ಮೈತ್ರಿಕೂಟದ ಪರವಾಗಿ ಮತ ಚಲಾಯಿಸಿದ್ದರು.
#WATCH | Tamil Nadu | Three AIADMK MLAs, Maragatham Kumaravel, Sathyabama, and Jayakumar, met Minister Aadhav Arjuna
They tendered their resignation to Assembly Speaker JCD Prabakaran earlier today.
(By-elections will be held for these three constituencies along with Tiruchi… pic.twitter.com/bBQN0QZ4RL
— ANI (@ANI) May 25, 2026
ಮರಗತಂ ಕುಮಾರವೇಲ್ ಅವರು ಮಧುರಾಂತಕಂ ಕ್ಷೇತ್ರದಿಂದ, ಸತ್ಯಭಾಮಾ ಅವರು ಧಾರಾಪುರಂ ಕ್ಷೇತ್ರದಿಂದ ಮತ್ತು ಜಯಕುಮಾರ್ ಅವರು ಪೆರುಂದುರೈ ಕ್ಷೇತ್ರದಿಂದ ಎಐಎಡಿಎಂಕೆ ಟಿಕೆಟ್ ಮೂಲಕ ಸ್ಪರ್ಧಿಸಿ ಗೆದ್ದಿದ್ದರು. ಸ್ಪೀಕರ್‌ಗೆ ತಮ್ಮ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಈ ಮೂವರು ಶಾಸಕರು ತಮಿಳುನಾಡು ಸರ್ಕಾರದ ಸಚಿವರು ಹಾಗೂ ಟಿವಿಕೆ ಪಕ್ಷದ ಪ್ರಭಾವಿ ನಾಯಕರಾಗಿರುವ ಆಧವ್ ಅರ್ಜುನ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಅವನತಿಯತ್ತ ಎಐಎಡಿಎಂಕೆ; ಒಳಜಗಳದಿಂದಾಗಿ ಎಂಜಿಆರ್, ಜಯಲಲಿತಾ ಪರಂಪರೆ ಕೊನೆಯಾಗುತ್ತಾ?
ಮರಗತಮ್ ಕುಮಾರವೇಲ್ ನೇತೃತ್ವದಲ್ಲಿ ಪೆರುಂದುರೈ ಶಾಸಕ ಜಯಕುಮಾರ್ ಮತ್ತು ತಾರಾಪುರಂ ಶಾಸಕಿ ಸತ್ಯಭಾಮಾ ರಾಜೀನಾಮೆ ನೀಡಿದ್ದಾರೆ. ಎಐಎಡಿಎಂಕೆ ಬಣವಾದ ಎಸ್.ಪಿ. ವೇಲುಮಣಿ, ಸಿ.ವಿ. ಷಣ್ಮುಗಂ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮತ್ತೆ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವಿವಿಧ ಭಿನ್ನಾಭಿಪ್ರಾಯಗಳ ನಡುವೆ ಒಂದು ಕಡೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಮೂವರು ಶಾಸಕರು ಈಗ ಎಐಎಡಿಎಂಕೆಗೆ ರಾಜೀನಾಮೆ ನೀಡಿದ್ದಾರೆ.
ಇದರಿಂದ ಎಐಎಡಿಎಂಕೆ ಶಾಸಕರ ಸಂಖ್ಯೆ 44ಕ್ಕೆ ಇಳಿದಿದೆ. ಎರಡೂ ಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ರಾಜೀನಾಮೆ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ