Shocking News: ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡಲು 3 ತಿಂಗಳ ಮಗುವಿಗೆ 51 ಬಾರಿ ಕಬ್ಬಿಣದ ರಾಡಿನಿಂದ ಚುಚ್ಚಿಸಿದ ಪೋಷಕರು; ಮೂಢನಂಬಿಕೆಗೆ ಹಸುಗೂಸು ಬಲಿ
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಬುಡಕಟ್ಟು ಆಚರಣೆಯಂತೆ ಯಾರಿಗಾದರೂ ಅನಾರೋಗ್ಯ ಕಾಡಿದರೆ ಕಬ್ಬಿಣದ ರಾಡನ್ನು ಬಿಸಿ ಮಾಡಿ, ದೇಹದ ವಿವಿಧ ಭಾಗಕ್ಕೆ ಇಡಲಾಗುತ್ತದೆ. ಅದೇ ರೀತಿ ಆ ಮಗುವಿನ ಹೊಟ್ಟೆಗೆ ಬಿಸಿ ರಾಡಿನಿಂದ 51 ಬಾರಿ ಚುಚ್ಚಲಾಗಿದೆ.
ಶಾಹದೋಲ್: ತಂದೆ-ತಾಯಿಯ ಮೂಢನಂಬಿಕೆಗೆ 3 ತಿಂಗಳ ಮಗುವೊಂದು ಬಲಿಯಾದ ಆಘಾತಕಾರಿ ಘಟನೆ (Shocking News) ಮಧ್ಯಪ್ರದೇಶದಲ್ಲಿ ನಡೆದಿದೆ. ನ್ಯುಮೋನಿಯಾದಿಂದ (Pneumonia) ಬಳಲುತ್ತಿದ್ದ 3 ತಿಂಗಳ ಹೆಣ್ಣುಮಗುವಿಗೆ ತಮ್ಮ ಬುಡಕಟ್ಟು ಸಮುದಾಯದ ರೀತಿಯಲ್ಲಿ ಚಿಕಿತ್ಸೆ ಕೊಡಿಸಿದ ತಂದೆ-ತಾಯಿ ಆ ಮಗುವಿನ ಹೊಟ್ಟೆಯ ಮೇಲೆ ಕಾದ ಕಬ್ಬಿಣದ ರಾಡ್‌ನಿಂದ 51 ಬಾರಿ ಚುಚ್ಚಿಸಿದ್ದಾರೆ. ಮೊದಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ಕಾದ ಕಬ್ಬಿಣದ ರಾಡಿನಿಂದ ಆದ ಗಾಯದಿಂದ ಸಾವನ್ನಪ್ಪಿದೆ.
ಮಧ್ಯಪ್ರದೇಶದಲ್ಲಿ ನ್ಯುಮೋನಿಯಾ ಸೋಂಕಿತ ಶಿಶುವೊಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅದಕ್ಕೂ ಕೆಲವು ದಿನಗಳ ಮೊದಲು ಕಾದ ಕಬ್ಬಿಣದ ರಾಡ್‌ನಿಂದ 50ಕ್ಕೂ ಹೆಚ್ಚು ಬಾರಿ ಮಗುವಿಗೆ ಚುಚ್ಚಲಾಗಿದೆ. ಮಗುವನ್ನು ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯುವ ಮೊದಲು ಪೋಷಕರು ಗ್ರಾಮದ ಕ್ವಾಕ್ ಅನ್ನು ಸಂಪರ್ಕಿಸಿದರು. ಅವರ ಬುಡಕಟ್ಟು ಸಮುದಾಯದ ಆಚರಣೆಯಂತೆ ಯಾರಿಗಾದರೂ ಅನಾರೋಗ್ಯ ಕಾಡಿದರೆ ಕಬ್ಬಿಣದ ರಾಡನ್ನು ಬಿಸಿ ಮಾಡಿ, ದೇಹದ ವಿವಿಧ ಭಾಗಕ್ಕೆ ಇಡಲಾಗುತ್ತದೆ. ಅದೇ ರೀತಿ ಆ ಮಗುವಿನ ಹೊಟ್ಟೆಗೆ ಬಿಸಿ ರಾಡಿನಿಂದ 51 ಬಾರಿ ಚುಚ್ಚಲಾಗಿದೆ ಎಂಬ ವಿಷಯ ಬಯಲಾಗಿದೆ.
ಇದನ್ನೂ ಓದಿ: Shocking News: ಗೆಳೆಯನನ್ನು ಕೊಂದು ಘಾಟ್ನಲ್ಲಿ ಶವ ಬಿಸಾಡುವಾಗ ತಾನೇ ಕಾಲು ಜಾರಿ ಬಿದ್ದು ಸತ್ತ ಹಂತಕ!
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಜ್ಯದ ಬುಡಕಟ್ಟು ಜನಸಂಖ್ಯೆಯಲ್ಲಿ ನ್ಯುಮೋನಿಯಾ ಮತ್ತು ಅಂತಹುದೇ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಿಸಿ ಕಬ್ಬಿಣದ ರಾಡಿನಿಂದ ಚಿಕಿತ್ಸೆ ನೀಡುವ ಪದ್ಧತಿಯಿದೆ.
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಆ ಬಾಲಕಿಯ ಮನೆಗೆ ಭೇಟಿ ನೀಡಿ, ಕಬ್ಬಿಣದ ರಾಡ್‌ನಿಂದ ಚುಚ್ಚಬೇಡಿ ಎಂದು ಬುದ್ಧಿ ಹೇಳಿದರೂ ಕೇಳದೆ ಕಬ್ಬಿಣದ ರಾಡ್‌ನಿಂದ ಚುಚ್ಚಿದ್ದಾರೆ. ಬಳಿಕ ಮಗುವ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ಅದಾಗಿ 2 ವಾರದಲ್ಲಿ ಮಗು ಸಾವನ್ನಪ್ಪಿದೆ.
ಇದನ್ನೂ ಓದಿ: Shocking News: ಗಂಡನ ಸಾವಿನ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ!
ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಹೆದರಿದ ಪೋಷಕರು ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ತೋರಿಸಿದ್ದಾರೆ. ಆದರೆ, ಆ ಮಗುವಿಗೆ ಅನಾರೋಗ್ಯ ಉಂಟಾದ ಆರಂಭದಲ್ಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಮಗು ಬದುಕುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆ ಮಗುವಿನ ಹೊಟ್ಟೆ ಮೇಲೆ ಚೂಪಾದ ವಸ್ತುವಿನಿಂದ ಚುಚ್ಚಿದ ಗಾಯದ ಗುರುತು ಇದ್ದುದರಿಂದ ವೈದ್ಯರು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆಸ್ಪತ್ರೆಗೆ ಬಂದ ಅಧಿಕಾರಿಗಳು ಮಗುವಿನ ಪೋಷಕರನ್ನು ವಿಚಾರಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ.