Viral News: ಅತಿಯಾಗಿ ಪ್ರೀತಿಸ್ತಾನೆ; ಗಂಡ ಜಗಳವನ್ನೇ ಮಾಡಲ್ಲ ಎಂದು ವಿಚ್ಛೇದನ ಕೋರಿದ ಹೆಂಡತಿ!

|

Updated on: Jun 12, 2024 | 10:36 PM

Shocking News: ಕೆಲವು ಯುವತಿಯರಿಗೆ ತಮ್ಮ ಗಂಡ ತಮ್ಮನ್ನು ವಿಪರೀತ ಪ್ರೀತಿ ಮಾಡಿದರೆ ಬಹಳ ಇಷ್ಟ. ಮುದ್ದಿಸುವ ಗಂಡನಿದ್ದರೆ ಯಾವ ಜಗಳವೂ ಆಗುವುದಿಲ್ಲ. ಆದರೆ, ಗಂಡ-ಹೆಂಡತಿ ಎಂದಮೇಲೆ ಜಗಳ, ವಾದಗಳೆಲ್ಲ ಇಲ್ಲವೆಂದರೆ ದಾಂಪತ್ಯದಲ್ಲಿ ಉಪ್ಪು, ಹುಳಿ, ಖಾರವೇ ಇರುವುದಿಲ್ಲ ಎಂಬುದು ಕೆಲವರ ಲೆಕ್ಕಾಚಾರ. ಹೀಗೆಲ್ಲ ಯೋಚನೆ ಮಾಡುವವರು ಕೂಡ ಇದ್ದಾರಾ? ಎಂದು ಆಶ್ಚರ್ಯವಾಯಿತಾ? ಗಂಡ ತನ್ನೊಂದಿಗೆ ಜಗಳವಾಡುವುದಿಲ್ಲ, ಬರೀ ಪ್ರೀತಿ ಮಾಡುತ್ತಾನೆ ಎಂದು ಮಹಿಳೆಯೊಬ್ಬಳು ಡೈವೋರ್ಸ್​ ಕೋರಿದ್ದಾಳೆ.

Viral News: ಅತಿಯಾಗಿ ಪ್ರೀತಿಸ್ತಾನೆ; ಗಂಡ ಜಗಳವನ್ನೇ ಮಾಡಲ್ಲ ಎಂದು ವಿಚ್ಛೇದನ ಕೋರಿದ ಹೆಂಡತಿ!
ಗಂಡ- ಹೆಂಡತಿ
Image Credit source: istock
Follow us on

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಮಹಿಳೆಯೊಬ್ಬರು ಮದುವೆಯಾಗಿ ಕೇವಲ 18 ತಿಂಗಳಲ್ಲಿ ವಿಚ್ಛೇದನಕ್ಕಾಗಿ (Divorce) ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗೀಗ ವಿಚ್ಛೇದನಕ್ಕೆ ಸಣ್ಣಪುಟ್ಟ ಕಾರಣಗಳೇ ಸಾಕಾಗುತ್ತಿದೆ. ಆದರೆ, ಈ ಮಹಿಳೆ ನೀಡಿರುವ ಕಾರಣ ಬಹಳ ವಿಚಿತ್ರವಾದುದು. ಆಕೆಯ ಪತಿ ಆಕೆಯನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಅವಳೊಂದಿಗೆ ಜಗಳವಾಡುವುದಿಲ್ಲ ಎಂಬ ಕಾರಣ ನೀಡಿ ಆ ಮಹಿಳೆ ವಿಚ್ಛೇದನ ಕೋರಿದ್ದಾರೆ. ಇದನ್ನು ಕೇಳಿ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ.

ವಿಚ್ಛೇದನ ಕೋರಿದ ಮಹಿಳೆಗೆ ತನ್ನ ಗಂಡ ತನ್ನೊಂದಿಗೆ ಬಹಳ ಮಾತಾಡಬೇಕು, ವಾದ ಮಾಡಬೇಕು, ಜಗಳವಾಡಬೇಕು ಎಂಬ ಆಸೆಯಿತ್ತಂತೆ. ಆದರೆ, ಆಕೆಯ ಗಂಡ ಆಕೆ ಏನೇ ಹೇಳಿದರೂ ಕೋಪಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ದಿನವೂ ಆಕೆಯೊಂದಿಗೆ ಜಗಳವಾಡಲಿಲ್ಲ. ಇದರಿಂದ ಬೇಸತ್ತ ಆ ಮಹಿಳೆ ತನ್ನ ಗಂಡನ ಪ್ರೀತಿ ತನಗೆ ಉಸಿರುಗಟ್ಟಿಸುತ್ತಿದೆ ಎಂಬ ಕಾರಣಕ್ಕೆ ವಿಚ್ಛೇದನ ಕೋರಿದ್ದಾರೆ.

ಇದನ್ನೂ ಓದಿ: Viral: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ  ಕರೆಂಟ್‌ ಶಾಕ್‌ ಕೊಟ್ಟ ಪತ್ನಿ 

“ನನ್ನ ಗಂಡ ವಿಪರೀತ ಒಳ್ಳೆಯವನು. ಅವನೇ ನನಗಾಗಿ ಅಡುಗೆ ಮಾಡುತ್ತಾನೆ. ಮನೆಯ ಎಲ್ಲ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾನೆ. ನನಗೆ ಸ್ವಲ್ಪವೂ ತೊಂದರೆಯಾಗಲು ಬಿಡುವುದಿಲ್ಲ. ವಿಪರೀತ ಕಾಳಜಿ ವಹಿಸುತ್ತಾನೆ. ಇದೇ ನನಗೆ ಉಸಿರುಗಟ್ಟಿಸುತ್ತಿದೆ. ನಾವು ಬೇರೆ ದಂಪತಿಯಂತೆ ನಾರ್ಮಲ್ ಆಗಿಲ್ಲ ಎನಿಸುತ್ತಿದೆ. ನನ್ನ ಗಂಡ ಪ್ರತಿಯೊಂದು ವಿಚಾರದಲ್ಲೂ ನನ್ನೊಂದಿಗೆ ಕಾಂಪ್ರಮೈಸ್ ಆಗುವುದು ನನಗೆ ಇಷ್ಟವಾಗುವುದಿಲ್ಲ” ಎಂದು ಆ ಮಹಿಳೆ ಕೋರ್ಟ್​ನಲ್ಲಿ ಹೇಳಿದ್ದಾರೆ.

“ನಾನು ತಪ್ಪು ಮಾಡಿದಾಗ ಅವನು ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಅವನೇ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸಿದ್ದೆ. ಆದರೆ, ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲ” ಎಂದು ಆಕೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Viral News: ಹೆಂಡತಿ ಟೀ ಮಾಡೋದಿಲ್ಲ ಎಂದು ವಿಚ್ಛೇದನ ಕೇಳಿದ ಗಂಡ; ಕೋರ್ಟ್ ನೀಡಿದ ತೀರ್ಪು ಏನು?

ಆಕೆಯ ಪತಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. “ನಾನು ಪರಿಪೂರ್ಣ ಮತ್ತು ಉತ್ತಮ ಪತಿಯಾಗಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಆಕೆಯ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಇಂತಹ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ನಿನಗೆ ವಿಚ್ಛೇದನ ನೀಡಲು ನಿನ್ನ ಗಂಡನಿಗೂ ಇಷ್ಟವಿಲ್ಲ. ನಿಮ್ಮ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಬಳಿಕ ಈ ವಿಷಯವನ್ನು ಸ್ಥಳೀಯ ಪಂಚಾಯತ್‌ನಲ್ಲಿ ಪ್ರಸ್ತಾಪಿಸಲಾಯಿತು. ಅಲ್ಲಿ ಕೂಡ ಈ ವಿಷಯದ ಬಗ್ಗೆ ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ