ದೇಶದ ಮಹಾನಗರ ಮುಂಬೈನ ಓರ್ವ ವ್ಯಕ್ತಿ, ಜಮ್ಶೆಡ್ಪುರದ ಪುಟ್ಟ ಹುಡುಗಿಯೊಬ್ಬಳ ಕಲಿಯುವ ಕನಸನ್ನು ನನಸು ಮಾಡಲು ಬೃಹತ್ ಸಹಾಯ ಮಾಡಿದ್ದಾರೆ. 11 ವರ್ಷದ ಪುಟ್ಟ ಬಾಲಕಿಗೆ ಸ್ಮಾರ್ಟ್ಫೋನ್ ಕೊಳ್ಳಬೇಕು, ಆನ್‌ಲೈನ್ ಕ್ಲಾಸ್ನಲ್ಲಿ ಕಲಿಕೆ ಮುಂದುವರಿಸಬೇಕು ಎಂದು ಕನಸು ಕಂಡಿದ್ದಳು. ಆ ಕನಸೀಗ ನನಸಾಗಿದೆ. ಅಂದಹಾಗೆ ಕೊರೊನಾ ನಂತರದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲರೂ ಆನ್‌ಲೈನ್ ಕ್ಲಾಸ್ನಲ್ಲಿ ಪಾಲ್ಗೊಳ್ಳುವಂತಾಗಿದೆ. ಈ ಸಮಯದಲ್ಲಿ ಎಲ್ಲರಿಗೂ ಫೋನ್ ಕೊಳ್ಳುವ ಅವಕಾಶ ಅಥವಾ ಸೌಕರ್ಯ ಇರುವುದಿಲ್ಲ.
ಅದೇ ರೀತಿ ಈ ಪುಟ್ಟ ಬಾಲಕಿಗೂ ಮೊಬೈಲ್ ಕೊಂಡುಕೊಳ್ಳಲು ಸಾಧ್ಯವಾಗಿಲ್ಲ. ತುಳಸಿ ಕುಮಾರಿ ಎಂಬ 11 ವರ್ಷದ ಹುಡುಗಿ, ರಸ್ತೆ ಬದಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಡೆಸುತ್ತಾಳೆ. ಆಕೆಯ ಬಳಿಯಿಂದ ಮಾವಿನಹಣ್ಣು ಕೊಳ್ಳಲು ಬಂದ ಓರ್ವ ವ್ಯಕ್ತಿ 1 ಲಕ್ಷದ 20 ಸಾವಿರ ರೂಪಾಯಿ ಕೊಟ್ಟು 12 ಮಾವಿನಹಣ್ಣುಗಳನ್ನು ಖರೀದಿಸಿದ್ದಾರೆ. ಅಂದರೆ, ಪ್ರತೀ ಹಣ್ಣಿಗೆ 10,000 ರೂಪಾಯಿಯಂತೆ ಹಣ ಪಾವತಿಸಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ಹುಡುಗಿಯ ತಂದೆ ಶ್ರೀಮಾಲ್ ಕುಮಾರ್ ಅವರ ಖಾತೆಗೆ ವರ್ಗಾಯಿಸಿದ್ದಾರೆ.
ಹೀಗೆ ಹುಡುಗಿಯ ಕಲಿಕೆಗೆ ಸಹಾಯ ಮಾಡಿದ ವ್ಯಕ್ತಿಯ ಹೆಸರು ಅಮೆಯ ಹೆಟ್. ಆತ ವ್ಯಾಲ್ಯುಯೇಬಲ್ ಎಜುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರು, ಹುಡುಗಿ ಇತ್ತೀಚೆಗಷ್ಟೇ ಸ್ಥಳೀಯ ವಾಹಿನಿಯಲ್ಲಿ ಹೇಳಿಕೊಂಡಿದ್ದ ಕಷ್ಟಗಳನ್ನು ಗಮನಿಸಿ ಈ ಸಹಾಯ ಮಾಡಿದ್ದಾರೆ. ಸ್ಮಾರ್ಟ್ಫೋನ್ ಖರೀದಿ ಹಾಗೂ ಆನ್‌ಲೈನ್ ಕ್ಲಾಸ್ನಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ತುಳಸಿ ಕುಮಾರಿ 5ನೇ ಗ್ರೇಡ್ ವಿದ್ಯಾರ್ಥಿಯಾಗಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಲಾಕ್ಡೌನ್ ಹೇರಿದ ಕಾರಣ ಶಾಲೆ ಮುಚ್ಚಲಾಗಿದ್ದು, ಆನ್‌ಲೈನ್ ತರಗತಿಯ ಮೂಲಕ ಪಾಠ ಮಾಡಲಾಗುತ್ತಿದೆ. ಇದರಿಂದ ಈ ಸಮಸ್ಯೆಗಳು ತಲೆದೋರಿವೆ.
ಹೀಗೆ ದೊಡ್ಡ ಮೊತ್ತದ ಸಹಾಯ ಪಡೆದುಕೊಂಡ ಬಳಿಕ ಹುಡುಗಿ ಸಂತಸ ಹಂಚಿಕೊಂಡಿದ್ದಾಳೆ. ತಾನು, ಹಣ ಉಳಿತಾಯ ಮಾಡಿ ಸ್ಮಾರ್ಟ್ಫೋನ್ ಕೊಂಡುಕೊಳ್ಳಬೇಕು ಎಂದುಕೊಂಡೆ. ಆದರೆ, ಈ ಕನಸು ಬೇಗನೇ ಈಡೇರಿದೆ. ಈಗ ಮೊಬೈಲ್ ಕೊಳ್ಳಬಹುದು ಹಾಗೂ ಆನ್‌ಲೈನ್ ಕ್ಲಾಸ್ನಲ್ಲೂ ಭಾಗವಹಿಸಬಹುದು ಎಂದು ಆಕೆ ತಿಳಿಸಿದ್ದಾಳೆ.
ಕೊವಿಡ್-19 ಬಳಿಕ ಕಲಿಕೆಯ ವಿಧಾನ ಸಂಪೂರ್ಣ ಬದಲಾಗಿದೆ. ಬಹುತೇಕ ಕಾರ್ಯಚಟುವಟಿಕೆಗಳು ಆನ್‌ಲೈನ್ ವಿಧಾನಕ್ಕೆ ಶಿಫ್ಟ್ ಆಗಿದೆ. ಇದರಿಂದ ಡಿಜಿಟಲ್ ಡಿವೈಡ್ ಕೂಡ ಆಗಿದೆ. ಇದು ಶಿಕ್ಷಣ ವಲಯದಲ್ಲೂ ಹೊರತಾಗಿಲ್ಲ. ಹೀಗಾಗಿ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಮಚಿತರಾಗುತ್ತಿರುವ ಪ್ರಕರಣಗಳನ್ನು ನಾವು ಕೇಳುತ್ತಿದ್ದೇವೆ. ಈ ಮಧ್ಯೆ ಹೀಗೊಂದು ಮಾನವೀಯ ಕೆಲಸ ನಡೆದಿದ್ದು, ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್