ಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವನ ಪುತ್ರನನ್ನು ಬೆನ್ನಟ್ಟಿ ಹೋಗಿ ಥಳಿಸಿದ ಹಳ್ಳಿಗರು; ಬಿಜೆಪಿ ಸಚಿವರಿಂದ ಪ್ರತ್ಯಾರೋಪ !

ಸಚಿವರು ತನ್ನ ಪುತ್ರನ ತಪ್ಪೇನೂ ಇಲ್ಲ ಎಂದು ಹೇಳಿದ್ದಾರೆ. ಹಳ್ಳಿಯ ಜನರು ನಮ್ಮ ಭೂಮಿಯನ್ನು ಅತಿಕ್ರಮಣ ಮಾಡಲು ಪ್ರಯತ್ನಿಸಿದರು. ಅಲ್ಲಿಗೆ ನನ್ನ ಕಿರಿಯ ಸಹೋದರ ಅದನ್ನು ತಡೆಯಲು ಹೋಗಿದ್ದ. ಆದರೆ ಸ್ಥಳೀಯರು ಆತನಿಗೆ ಥಳಿಸಿದರು ಎಂದು ಹೇಳಿದರು.

ಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವನ ಪುತ್ರನನ್ನು ಬೆನ್ನಟ್ಟಿ ಹೋಗಿ ಥಳಿಸಿದ ಹಳ್ಳಿಗರು; ಬಿಜೆಪಿ ಸಚಿವರಿಂದ ಪ್ರತ್ಯಾರೋಪ !
ಘರ್ಷಣೆಯ ಚಿತ್ರ
Follow us
| Updated By: Lakshmi Hegde

Updated on: Jan 24, 2022 | 9:28 AM

ಬಿಹಾರದ ಬಿಜೆಪಿ ಸಚಿವ (BJP Minister)ರೊಬ್ಬರ ಪುತ್ರನಿಗೆ ಹಳ್ಳಿಯೊಂದರ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಣ್ಣಿನ ತೋಟವೊಂದರಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಸಚಿವರ ಪುತ್ರ ಮತ್ತು ಆ ಸಚಿವರ ಸಹೋದರ ಸೇರಿ ಗುಂಡು ಹಾರಿಸಿದ್ದಾರೆ. ಈ ಮೂಲಕ ಮಕ್ಕಳನ್ನು ಹೆದರಿಸಲು ನೋಡಿದ್ದಾರೆ ಎಂದು ಆರೋಪಿಸಿರುವ ಜನರ ಗುಂಪು ತಿರುಗಿ ಅವರಿಗೇ ಹೊಡೆದಿದೆ. ಸಚಿವರ ಪುತ್ರನಿಗೆ ಥಳಿಸಿದ ಜನರ ಗುಂಪು, ಆತ ಮಕ್ಕಳ ಮೇಲೆ ಗುಂಡು ಹೊಡೆಯಲು ಬಳಸಿದ ಬಂದೂಕನ್ನು ಕಸಿದುಕೊಂಡಿದೆ.  ಇದಕ್ಕೆ ಸಂಬಂಧಪಟ್ಟ ವಿಡಿಯೋಗಳೂ ಕೂಡ ಸಿಕ್ಕಾಪಟೆ ವೈರಲ್ ಆಗಿವೆ.

ಹೀಗೆ ಮಕ್ಕಳ ಮೇಲೆ ಗುಂಡು ಹಾರಿಸಿ ಜನರಿಂದ ಥಳಿತಕ್ಕೆ ಒಳಗಾದವನ ಹೆಸರು ಬಬ್ಲುಕುಮಾರ್​ ಎಂದಾಗಿದ್ದು, ಬಿಹಾರ ಬಿಜೆಪಿ ಮುಖಂಡ, ರಾಜ್ಯ ಪ್ರವಾಸೋದ್ಯಮ ಸಚಿವ ನಾರಾಯಣ್​ ಶಾ ಅವರ ಪುತ್ರ  ಎಂದು ಸ್ಥಳೀಯರೇ ಹೇಳಿದ್ದಾರೆ. ಮಕ್ಕಳು ಉದ್ಯಾನದಲ್ಲಿ ಆಡುತ್ತಿದ್ದರು, ಈತ ಮಕ್ಕಳಿಗೇ ಗುಂಡು ಹೊಡೆಯದಿದ್ದರೂ, ಅವರನ್ನು ಹೆದರಿಸಲು ಬಂದೂಕನ್ನು ಅವರ ಕಡೆಗೆ ಗುರಿಯಿಟ್ಟು, ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದರಿಂದ ಹೆದರಿ ಕಂಗಾಲಾಗಿ ಮಕ್ಕಳು ಓಡಿದ್ದಾರೆ. ಹೀಗೆ ಓಡುವಾಗ ಕಾಲ್ತುಳಿತಕ್ಕೆ ಒಳಗಾಗಿ ಅನೇಕರು ಬಿದ್ದಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ಬಬ್ಲು ಕುಮಾರ್ ಸರ್ಕಾರಿ ವಾಹನದಲ್ಲಿಯೇ ಬಂದಿದ್ದರು. ಮಕ್ಕಳೆಡೆಗೆ ಗುಂಡು ಹಾರಿಸಿ ಹೆದರಿಸಿ ಅದರಲ್ಲೇ ವಾಪಸ್​ ತೆರಳುತ್ತಿದ್ದ ಅವರನ್ನು ಹಳ್ಳಿಯ ಜನರು ಬೆನ್ನಟ್ಟಿದ್ದಾರೆ. ಮನೆಯ ಬಳಿಯೇ ಬಂದು ಬಬ್ಲು ಅವರನ್ನು ಥಳಿಸಿದ್ದಷ್ಟೇ ಅಲ್ಲದೆ, ಸಚಿವರ ಮನೆಯ ಮುಂದೆ ಇದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

ಹಳ್ಳಿ ಜನರದ್ದೇ ತಪ್ಪೆಂದ ಸಚಿವ  ಆದರೆ ಸಚಿವರು ತನ್ನ ಪುತ್ರನ ತಪ್ಪೇನೂ ಇಲ್ಲ ಎಂದು ಹೇಳಿದ್ದಾರೆ. ಹಳ್ಳಿಯ ಜನರು ನಮ್ಮ ಭೂಮಿಯನ್ನು ಅತಿಕ್ರಮಣ ಮಾಡಲು ಪ್ರಯತ್ನಿಸಿದರು. ಅಲ್ಲಿಗೆ ನನ್ನ ಕಿರಿಯ ಸಹೋದರ ಅದನ್ನು ತಡೆಯಲು ಹೋಗಿದ್ದ. ಆದರೆ ಸ್ಥಳೀಯರು ಆತನಿಗೆ ಥಳಿಸಿದರು. ನನ್ನ ಸಹೋದರನಿಗೆ ಹೊಡೆದಿದ್ದರಿಂದ, ನನ್ನ ಪುತ್ರನೂ ಅಲ್ಲಿಗೇ ಹೋದ. ಹಾಗೆ ಹೋಗುವಾಗ ಲೈಸನ್ಸ್​ ಇರುವ ತನ್ನ ಪಿಸ್ತೋಲ್​ ತೆಗೆದುಕೊಂಡುಹೋಗಿದ್ದ. ಆದರೆ ಆತನ ಮೇಲೆ ಕೂಡ ಹಳ್ಳಿಗರು ಹಲ್ಲೆ ನಡೆಸಿದರು. ನಮ್ಮ ಮನೆ ಸಮೀಪ ಬಂದು ವಾಹನಗಳನ್ನು ಧ್ವಂಸ ಮಾಡಿದರು ಎಂದು ಬಿಹಾರ ಸಚಿವ ನಾರಾಯಣ್​ ಪ್ರಸಾದ್ ಹೇಳಿದ್ದಾರೆ. ಸದ್ಯ ಸಚಿವರ ಪುತ್ರ ಮತ್ತು ಗಾಯಗೊಂಡ ಇತರರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ಜನಸಾಮಾನ್ಯ ಮಹಿಳೆಯರ ಜೊತೆ ನೆಲದಲ್ಲಿ ಕುಳಿತು ಭಜನೆ ಮಾಡಿದ ಮಧ್ಯಪ್ರದೇಶ ಸಿಎಂ; ವಿಡಿಯೋ ವೈರಲ್