ಶ್ರೀನಿವಾಸ್, ಗೌತಮ್ ಗಂಭೀರ್ ಮತ್ತಿತರರು ಜನರನ್ನು ವಂಚಿಸುತ್ತಿಲ್ಲ.. ಸಹಾಯ ಮಾಡುತ್ತಿದ್ದಾರೆ: ದೆಹಲಿ ಪೊಲೀಸ್
ಕೊವಿಡ್ 19 ಔಷಧ, ಆಕ್ಸಿಜನ್, ಪ್ಲಾಸ್ಮಾ, ಆಸ್ಪತ್ರೆಗಳಲ್ಲಿ ಬೆಡ್ ಅಗತ್ಯ ಇರುವವರಿಗೆ ಯಾವುದೇ ತಾರತಮ್ಯ ಇಲ್ಲದೆ ಸಹಾಯ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಆಲ್ ಇಂಡಿಯಾ ಯೂತ್ ಕಾಂಗ್ರೆಸ್ನ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಬಿಜೆಪಿ ಎಂಪಿ ಗೌತಮ್ ಗಂಭೀರ್, ಆಪ್ ಶಾಸಕ ದಿಲೀಪ್ ಪಾಂಡೆ ಮತ್ತಿತರರ ವಿರುದ್ಧ, ಬ್ಲ್ಯಾಕ್ ಮಾರ್ಕೆಟ್ (ಕಾಳಸಂತೆ)ನಲ್ಲಿ ಕೊವಿಡ್ 19 ಔಷಧಗಳನ್ನು ಮಾರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಈ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ. ಆದರೆ ಇಂದು ದೆಹಲಿ ಪೊಲೀಸರು ಈ ರಾಜಕಾರಣಿಗಳ ಪರ ಕೋರ್ಟ್ಗೆ ವರದಿ ನೀಡಿದ್ದು, ಇವರೆಲ್ಲ ಕಾಳಸಂತೆಯಲ್ಲಿ ಔಷಧ ಮಾರಾಟ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿಲ್ಲ ಎಂದು ತಿಳಿಸಿದ್ದಾರೆ.
ಇವರೆಲ್ಲ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಕೊವಿಡ್ ಔಷಧಗಳ ಮಾರಾಟ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ವಿಚಾರಣೆಗೆ ಒಳಪಡಿಸಲಾಗಿತ್ತು. ನಮಗೆ ಯಾವುದೇ ವಂಚನೆ ಕಂಡುಬಂದಿಲ್ಲ. ಎಲ್ಲರೂ ಸ್ವಯಂಪ್ರೇರಿತರಾಗಿ ಕೊವಿಡ್ 19 ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಕೊವಿಡ್ 19 ಔಷಧ, ಆಕ್ಸಿಜನ್, ಪ್ಲಾಸ್ಮಾ, ಆಸ್ಪತ್ರೆಗಳಲ್ಲಿ ಬೆಡ್ ಅಗತ್ಯ ಇರುವವರಿಗೆ ಯಾವುದೇ ತಾರತಮ್ಯ ಇಲ್ಲದೆ ಸಹಾಯ ಮಾಡುತ್ತಿದ್ದಾರೆ. ಹಾಗೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಹಣವನ್ನೂ ಪಡೆದಿಲ್ಲ ಎಂಬುದು ಗೊತ್ತಾಗಿದೆ ಎಂದು ದೆಹಲಿ ಪೊಲೀಸ್ ಅಪರಾಧ ವಿಭಾಗ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಆಲ್ ಇಂಡಿಯಾ ಯುತ್ ಕಾಂಗ್ರೆಸ್ನ ಅಧ್ಯಕ್ಷ ಶ್ರೀನಿವಾಸ್ ಸೇರಿ ಹಲವು ರಾಜಕಾರಣಿಗಳು ಮೆಡಿಕಲ್ ಮಾಫಿಯಾ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಡಾ. ದೀಪಕ್ ಸಿಂಗ್ ಎಂಬುವರು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಒಮ್ಮೆಲೇ ಅದನ್ನು ಸಿಬಿಐ ತನಿಖೆಗೆ ನೀಡಲು ನಿರಾಕರಿಸಿತ್ತು. ಬದಲಿಗೆ ದೆಹಲಿ ಪೊಲೀಸರಿಗೆ ದೂರು ನೀಡುವಂತೆ ಹೇಳಿತ್ತು. ಈ ದೂರಿನ ಅನ್ವಯ ದೆಹಲಿ ಪೊಲೀಸ್ ವಿಭಾಗದ ಕ್ರೈಂ ಬ್ರ್ಯಾಂಚ್ ಶ್ರೀನಿವಾಸ್, ಗಂಭೀರ್ ಸೇರಿ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಹೈಕೋರ್ಟ್ಗೆ ವರದಿ ಸಲ್ಲಿಸಿ, ಈ ರಾಜಕಾರಣಿಗಳು ಮೆಡಿಕಲ್ ಮಾಫಿಯಾ ನಡೆಸುತ್ತಿರುವ ಬಗ್ಗೆ ಯಾವುದೇ ಸಾಕ್ಷಿಯೂ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ
‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್ ಸುಂದರಿ