ದುರ್ಗಾ ದೇವಿಯ ಅವತಾರದಲ್ಲಿ ಮಮತಾ ಬ್ಯಾನರ್ಜಿ; ಸಿದ್ಧವಾಗುತ್ತಿದೆ ಲಕ್ಷಾಂತರ ರೂ. ವೆಚ್ಚದ ‘ದುರ್ಗಾ ದೀದಿ’ ಕಲಾಕೃತಿ

ಈ ದುರ್ಗಾ ದೇವಿಯ ಕಲಾಕೃತಿಯ ಕೈಯಲ್ಲಿ ಆಯುಧಗಳನ್ನು ನೀಡುವ ಬದಲು ಮಮತಾ ಬ್ಯಾನರ್ಜಿ ಸರ್ಕಾರದ ಜನಪ್ರಿಯ 10 ಯೋಜನೆಗಳ ಬಗ್ಗೆ ತಿಳಿಸುವ ಮಾಹಿತಿ ಫಲಕ ಇರಲಿದೆ ಎಂದು 54 ವರ್ಷ ವಯಸ್ಸಿನ ಕಲಾವಿದ ಮಿಂಟು ಪಾಲ್ ತಿಳಿಸಿದ್ದಾರೆ.

ದುರ್ಗಾ ದೇವಿಯ ಅವತಾರದಲ್ಲಿ ಮಮತಾ ಬ್ಯಾನರ್ಜಿ; ಸಿದ್ಧವಾಗುತ್ತಿದೆ ಲಕ್ಷಾಂತರ ರೂ. ವೆಚ್ಚದ ‘ದುರ್ಗಾ ದೀದಿ’ ಕಲಾಕೃತಿ
ಮಮತಾ ಕಲಾಕೃತಿಗಳ ರಚನೆ ಬಗ್ಗೆ ಮಾಹಿತಿ ನೀಡಿದ ಕ್ರೌಡ್​ ನೆಕ್ಸ್ಟ್​​​ ಮೀಡಿಯಾ ಆರ್ಟ್​ ಸಂಸ್ಥೆಯ ನಿರ್ದೇಶಕಿ ದೀಪಾನ್ವಿತಾ ಬಾಗ್ಚಿ
Follow us
TV9 Web
| Updated By: Skanda

Updated on:Sep 03, 2021 | 10:39 AM

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ದುರ್ಗಾ ದೇವಿಯ ಅವತಾರ ತಾಳಲಿದ್ದಾರೆ. ನವರಾತ್ರಿ ಉತ್ಸವಕ್ಕೆ ಇನ್ನೇನು ತಿಂಗಳು ಬಾಕಿ ಇದೆ ಎನ್ನುವ ಹೊತ್ತಿನಲ್ಲೇ ಈ ಸುದ್ದಿ ಹರಿದಾಡಲಾರಂಭಿಸಿದ್ದು, ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅಂದಹಾಗೆ, ಮಮತಾ ಬ್ಯಾನರ್ಜಿಯನ್ನು ದುರ್ಗಾ ದೇವಿಯ ರೂಪದಲ್ಲಿ ಕಾಣಿಸಲು ಸಿದ್ಧತೆ ಭರದಿಂದ ಸಾಗಿದ್ದು ಸಮಿತಿಯೊಂದನ್ನೂ ರಚಿಸಲಾಗಿದೆ. ಕೆಲ ವರ್ಷಗಳ ಹಿಂದಷ್ಟೇ ಜಗತ್ತಿನ ಅತೀ ಎತ್ತರದ ದುರ್ಗಾ ದೇವಿ ವಿಗ್ರಹವನ್ನು ಕೆತ್ತಿ ಜಗತ್ತಿನ ಗಮನ ಸೆಳೆದಿದ್ದ ಕಲಾವಿದ ಮಿಂಟು ಪಾಲ್​ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಮಮತಾ ಬ್ಯಾನರ್ಜಿಯನ್ನು ದುರ್ಗಾ ದೇವಿಯ ಸ್ವರೂಪದಲ್ಲಿ ಪರಿಚಯಿಸಲು ಸಿದ್ಧರಾಗಿದ್ದಾರೆ.

ಸದರಿ ಪುತ್ಥಳಿಯು ಫೈಬರ್​ ಗ್ಲಾಸ್​ನಿಂದ ತಯಾರಾಗಲಿದ್ದು, ಕೋಲ್ಕತ್ತಾದ ನಜ್ರುಲ್​ಪುರ್​ ಉನ್ನಾಯನ್​ ಸಮಿತಿಯು ಪೆಂಡಾಲ್​ನಲ್ಲಿಟ್ಟು ಆರಾಧಿಸಲಿದೆ. ಈ ಕಲಾಕೃತಿಯ ಬಗ್ಗೆ ಮಾತನಾಡಿದ ಕಲಾವಿದ ಮಿಂಟು ಪಾಲ್​, ದುರ್ಗಾದೇವಿಯ ಕಲಾಕೃತಿಯು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ಹೋಲುವಂತೆ ಇರಲಿದ್ದು, ಎತ್ತರವೂ ಅವರಷ್ಟೆಯೇ ಅಂದರೆ ಐದು ಅಡಿ ನಾಲ್ಕು ಅಂಗುಲ ಇರಲಿದೆ. ದೀದಿ ತೊಡುವ ಸೀರೆಯನ್ನೇ ಹೋಲುವಂತೆ ತೆಳು ಅಂಚಿನ ಬಿಳಿ ಬಣ್ಣದ ಸೀರೆಯನ್ನು ಕಲಾಕೃತಿಗೆ ತೊಡಿಸಲಾಗುವುದು ಎಂದಿದ್ದಾರೆ.

ಗಮನಾರ್ಹ ವಿಚಾರವೆಂದರೆ 2.10ಲಕ್ಷ ರೂ ವೆಚ್ಚದ ಈ ದುರ್ಗಾ ದೇವಿಯ ಕಲಾಕೃತಿಯ ಕೈಯಲ್ಲಿ ಆಯುಧಗಳನ್ನು ನೀಡುವ ಬದಲು ಮಮತಾ ಬ್ಯಾನರ್ಜಿ ಸರ್ಕಾರದ ಜನಪ್ರಿಯ 10 ಯೋಜನೆಗಳ ಬಗ್ಗೆ ತಿಳಿಸುವ ಮಾಹಿತಿ ಫಲಕ ಇರಲಿದೆ ಎಂದು 54 ವರ್ಷ ವಯಸ್ಸಿನ ಕಲಾವಿದ ಮಿಂಟು ಪಾಲ್ ತಿಳಿಸಿದ್ದಾರೆ. ಅವರೇ ಹೇಳಿರುವಂತೆ ಕಲಾಕೃತಿಯ ನಿರ್ಮಾಣ ಈಗಾಗಲೇ ಎರಡು ದಿನಗಳ ಹಿಂದೆ ಆರಂಭವಾಗಿದ್ದು, 15 ದಿನಗಳೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ.

ಈ ಹಿಂದೆ ಅಂದರೆ 2015ನೇ ಇಸವಿಯಲ್ಲಿ ಕಲಾವಿದ ಮಿಂಟು ಪಾಲ್ ಅತಿ ಎತ್ತರದ (88 ಅಡಿ) ದುರ್ಗಾ ದೇವಿ ಮೂರ್ತಿಯನ್ನು ರಚಿಸಿ ಜಗತ್ತಿನ ಗಮನ ಸೆಳೆದಿದ್ದರು. ಕೋಲ್ಕತ್ತಾದ ದೇಶಪ್ರಿಯ ಪಾರ್ಕ್​ ಸರ್ವಜನ ಪೂಜಾ ಕಮಿಟಿ ಆ ಮೂರ್ತಿಯನ್ನು ದರ್ಶನಕ್ಕೆ ಇರಿಸಿದಾಗ ನೂಕು ನುಗ್ಗಲು ಉಂಟಾಗಿ ಕೊನೆಗೆ ಒತ್ತಾಯಪೂರ್ವಕವಾಗಿ ಜನರನ್ನು ಆಚೆ ತಳ್ಳಿ ದರ್ಶನವನ್ನೇ ನಿಲ್ಲಿಸಲಾಗಿತ್ತು.

ಇನ್ನು, ಈ ಕಲಾಕೃತಿ ರಚನೆಯ ಉಸ್ತುವಾರಿ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದ್ದು, ಅದರ ಅಧ್ಯಕ್ಷತೆ ವಹಿಸಿರುವ ಇಂದ್ರನಾಥ್ ಬಾಗೂ ಈ ಬಗ್ಗೆ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಓರ್ವ ತಾಯಿ ತನ್ನ ಮಕ್ಕಳ ಏಳಿಗೆಗೆ  ಚಿಂತಿಸುವಂತೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡೇ ಕಲಾಕೃತಿ ರಚಿಸಲಾಗುತ್ತಿದೆ ಎಂದಿದ್ದಾರೆ. ಜತೆಗೆ, ಇದನ್ನು ಮುಖ್ಯಮಂತ್ರಿ ಬ್ಯಾನರ್ಜಿ ಅವರ ಕೈಯಿಂದಲೇ ಅನಾವರಣಗೊಳಿಸುವ ಮಹದಾಸೆ ಇದ್ದು, ಸದ್ಯದಲ್ಲೇ ಅವರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ

‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ

(Statue of West Bengal CM Mamata Banerjee representing Goddess Durga is getting Ready in Kolkata)

Published On - 9:46 am, Fri, 3 September 21