ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ ಇಲ್ಲಿ ಸ್ವಲ್ಪವೂ ಮಾಲಿನ್ಯ ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗಿದೆ ಎಂದು ಇಂದು ಸುಪ್ರೀಂಕೋರ್ಟ್ ಹೇಳಿದೆ. ಅಷ್ಟೇ ಅಲ್ಲ, ಕೈಗಾರಿಕಾ ಮತ್ತು ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯದ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಮತ್ತು ದೆಹಲಿ ಆಪ್ ಸರ್ಕಾರಕ್ಕೆ 24 ಗಂಟೆಗಳ ಡೆಡ್ಲೈನ್ನ್ನೂ ನೀಡಿದೆ. ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದಲೂ ಮಾಲಿನ್ಯ ಮಟ್ಟ ಏರಿಕೆಯಾಗಿದ್ದು, ವಾಯುಗುಣಮಟ್ಟ ಸೂಚ್ಯಂಕ 500ಕ್ಕೆ ತಲುಪಿದ್ದು, ಮಾಲಿನ್ಯ ಅತ್ಯಂತ ಗಂಭೀರ ಸ್ವರೂಪದ ಹಂತ ತಲುಪಿದೆ.
ಇನ್ನು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪಿಐಎಲ್ಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಇಂದು ಕೂಡ ದೆಹಲಿ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಮಾಲಿನ್ಯ ತಡೆಗಟ್ಟಲು ಏನೇನೂ ಮಾಡಲಾಗಿಲ್ಲ. ಹಾಗಾಗಿ ಮಾಲಿನ್ಯ ಹೆಚ್ಚುತ್ತಲೇ ಇದೆ..ಕೇವಲ ಸಮಯ ಹಾಳು ಮಾಡಲಾಗುತ್ತಿದೆಯಷ್ಟೇ ಎಂಬುದು ನಮ್ಮ ಭಾವನೆ ಎಂದು ಸಿಜೆಐ ಎನ್.ವಿ ರಮಣ ಇಂದು ಹೇಳಿದ್ದಾರೆ. ಅಂದಹಾಗೆ, ದೆಹಲಿ ಮತ್ತು ಸುತ್ತಲಿನ ನಗರಗಳಲ್ಲಿ ಮಾಲಿನ್ಯ ಮಟ್ಟ ಏರಿಕೆಯಾಗುತ್ತಿರುವ ಕಾರಣಕ್ಕೆ ಸುಪ್ರೀಂಕೋರ್ಟ್ ನಿರಂತರವಾಗಿ ಕಳೆದ ನಾಲ್ಕು ವಾರಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದೆ.
ಇಂದಿನ ವಿಚಾರಣೆ ವೇಳೆ ಎನ್.ವಿ.ರಮಣ ಇನ್ನೂ ಖಡಕ್ ಆಗಿಯೇ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನೀವು ಆನ್ಲೈನ್ ಕ್ಲಾಸ್ಗಳು, ವರ್ಕ್ ಫ್ರಂ ಹೋಂ ಪದ್ಧತಿ ಮೂಲಕ ಮಾಲಿನ್ಯ ಮಟ್ಟ ನಿಯಂತ್ರಣ ಮಾಡುವುದಾಗಿ ಹೇಳಿದ್ದಿರಿ. ಆದರೆ ಅದೂ ಕೂಡ ಆಯ್ಕೆ ಎಂದು ಹೇಳುತ್ತೀರಿ. ಹೀಗೆ ಹೇಳಿದರೆ ಯಾರು ಮನೆಯಲ್ಲಿ ಇರುತ್ತಾರೆ? ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ನಾಳೆಯೊಳಗೆ ಕಠಿಣ ಕ್ರಮ ವಹಿಸಬೇಕು. ನಾವು ನಿಮಗೆ 24 ತಾಸುಗಳ ಗಡುವು ಕೊಡುತ್ತಿದ್ದೇವೆ. ಅದಾಗದೆ ಇದ್ದರೆ, ಮುಂದಿನ ಆದೇಶ ನಾವೇ ಹೊರಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ದೀಪಾವಳಿ ನಂತರದ ದಿನಗಳಿಂದ ವಾಯುಮಾಲಿನ್ಯ ಏರುತ್ತಿದೆ. ರೈತರು ಕೊಯ್ಲಿನ ಬಳಿಕ ಕಳೆಗೆ ಬೆಂಕಿ ಹಾಕುವುದರಿಂದ ಮಾಲಿನ್ಯ ಹೆಚ್ಚುತ್ತದೆ ಎಂದು ಸರ್ಕಾರಗಳು ಸುಪ್ರೀಂಕೋರ್ಟ್ಗೆ ಹೇಳಿದ್ದವು. ಆದರೆ ಇದನ್ನು ಸಂಪೂರ್ಣವಾಗಿ ಒಪ್ಪಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಪಟಾಕಿ ನಿಷೇಧವಾಗಿದೆ..ದೀಪವಾಳಿ ಮುಗಿದಿದೆ ಆದರೂ ಅನೇಕರು ಪಟಾಕಿ ಹೊಡೆಯುತ್ತಿದ್ದಾರೆ. ಆದರೆ ನೀವು ರೈತರ ಮೇಲೆ ತಪ್ಪು ಹೊರೆಸುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳು ತಿರುಗೇಟು ನೀಡಿದ್ದರು. ವಾಹನದ ಹೊಗೆ, ಕೈಗಾರಿಕೆಗಳಿಂದ ಹೊರಸೂಸುವ ವಿಷಾನಿಲಯ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಹಿಂದಿನ ವಿಚಾರಣೆ ವೇಳೆಯೂ ಸರ್ಕಾರಗಳಿಗೆ ಮಾರ್ಗದರ್ಶನ ನೀಡಲಾಗಿತ್ತು. ಇನ್ನು ಸುಪ್ರೀಂಕೋರ್ಟ್ನಲ್ಲಿ ದೆಹಲಿ ಸರ್ಕಾರದ ಪರ ಅಭಿಷೇಕ್ ಮನು ಸಿಂಘ್ವಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡುತ್ತಿದ್ದಾರೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಇದನ್ನೂ ಓದಿ: ರಸ್ತೆ ಗುಂಡಿಗೆ ಸವಾರ ಬಲಿ? ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ನಡುವೆ ಆರೋಪ ಪ್ರತ್ಯಾರೋಪ, ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲು
Published On - 12:45 pm, Thu, 2 December 21