
ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸುವೇಂದು ಅಧಿಕಾರಿ (Suvendu Adhikari) ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಿಲು ಹುಟ್ಟಿಸುವ ಮಾಹಿತಿ ಬಯಲಾಗಿದೆ. ಈ ಹತ್ಯೆಯನ್ನು ಯೋಜಿತವಾಗಿ ನಡೆಸಲು ಬಿಹಾರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಲಾಗಿತ್ತು ಹಾಗೂ ಬರೋಬ್ಬರಿ 40 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಚಂದ್ರನಾಥ್ ರಥ್ ಅವರ ಚಲನವಲನದ ಮೇಲೆ ಹಂತಕರು ಕಳೆದ ಐದು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದರು. ಜೂನ್ 5ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಚಂದ್ರನಾಥ್ ಅವರು ಜೆಸೋರ್ ರಸ್ತೆಯ ಮೂಲಕ ಹಿಂತಿರುಗುತ್ತಿದ್ದಾಗ, ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಅವರ ಕಾರಿನ ವೇಗ ಕಡಿಮೆಯಾಗಿತ್ತು. ಇದನ್ನೇ ಕಾಯುತ್ತಿದ್ದ ಇಬ್ಬರು ಬೈಕ್ ಸವಾರರು, ಕಾರಿನ ಕಿಟಕಿಯ ಬಳಿ ಬಂದು ಅತಿ ಸಮೀಪದಿಂದ ಹಲವು ಸುತ್ತು ಗುಂಡಿನ ದಾಳಿ ನಡೆಸಿ ಚಂದ್ರನಾಥ್ ಅವರನ್ನು ಹತ್ಯೆಗೈದಿದ್ದಾರೆ.
ಬಿಹಾರದಿಂದ ಬಂದಿದ್ದ ಶೂಟರ್‌ಗಳಿಗೆ ತಂಗಲು ವ್ಯವಸ್ಥೆ ಮತ್ತು ಓಡಾಡಲು ವಾಹನಗಳನ್ನು ಸ್ಥಳೀಯ ಕ್ರಿಮಿನಲ್ ಒಬ್ಬ ಒದಗಿಸಿದ್ದ ಎನ್ನಲಾಗಿದೆ. ಕೃತ್ಯಕ್ಕೆ ಬಳಸಲಾದ ಬೈಕ್ ಅನ್ನು ಬಿಧಾನ್‌ನಗರದ ಹಳೆಯ ವಾಹನಗಳ ಶೋರೂಮ್‌ನಿಂದ ಕಳವು ಮಾಡಲಾಗಿತ್ತು ಮತ್ತು ಅದರ ಇಂಜಿನ್ ಸಂಖ್ಯೆಯನ್ನು ತಿದ್ದಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಹತ್ಯೆ ನಡೆದ ಕೇವಲ 45 ಸೆಕೆಂಡುಗಳ ಮೊದಲು ಒಂದು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಅಲ್ಲಿಗೆ ಬಂದು ಹೋಗಿರುವುದು ತನಿಖಾಧಿಕಾರಿಗಳ ಸಂಶಯಕ್ಕೆ ಕಾರಣವಾಗಿದೆ.
ಪ್ರಸ್ತುತ ಸಿಐಡಿ ಮತ್ತು ಎಸ್‌ಐಟಿ (SIT) ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಿಂದ ರಕ್ತದ ಮಾದರಿ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಂತಕರು ಕೋಲ್ಕತ್ತಾ ವಿಮಾನ ನಿಲ್ದಾಣದ ಮೂಲಕ ಪರಾರಿಯಾಗಲು ಮೊದಲೇ ಸಂಚು ರೂಪಿಸಿ ನಕಲಿ ಐಡಿ ಕಾರ್ಡ್‌ಗಳನ್ನು ಹೊಂದಿದ್ದಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಇದೊಂದು ಪೂರ್ವ ಯೋಜಿತ ಕೊಲೆ, ಆಪ್ತ ಚಂದ್ರನಾಥ್ ರಥ್ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಮಾತು
ಚಂದ್ರನಾಥ್ ಅವರ ಆಪ್ತ ವಲಯದವರೇ ಹಂತಕರಿಗೆ ಮಾಹಿತಿ ಸೋರಿಕೆ ಮಾಡಿರಬಹುದು ಎಂಬ ಅನುಮಾನದ ನಿಟ್ಟಿನಲ್ಲಿ ಪೊಲೀಸರು ಫೋನ್ ರೆಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಹತ್ಯೆಗೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಶೂಟರ್‌ಗಳಿಗಾಗಿ ಶೋಧ ಮುಂದುವರಿದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ