ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ: ಟಿಟಿವಿ ದಿನಕರನ್ ಜೊತೆ ಅಸಾದುದ್ದೀನ್ ಓವೈಸಿ ಮೈತ್ರಿ
Tamil Nadu Assembly Elections 2021: ಎರಡೂ ಪಕ್ಷಗಳ ಸೀಟು ಹಂಚಿಕೆ ವಿವರದಂತೆ ಅಸಾದುದ್ದೀನ್ ಓವೈಸಿಯ AIMIM ಪಕ್ಷ ತಮಿಳುನಾಡಿನ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಚೆನ್ನೈ: ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಗೆ ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ AIMIM ಪಾರ್ಟಿ AMMK ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯನ್ನು ಜತೆಯಾಗಿ ಎದುರಿಸುವುದು ಖಚಿತವಾಗಿದೆ. ಎರಡೂ ಪಕ್ಷಗಳ ಸೀಟು ಹಂಚಿಕೆ ವಿವರದಂತೆ ಅಸಾದುದ್ದೀನ್ ಓವೈಸಿಯ AIMIM ಪಕ್ಷ ತಮಿಳುನಾಡಿನ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. 234 ಸೀಟ್ಗಳ ಪೈಕಿ ವನಿಯಂಬಾಡಿ, ಕೃಷ್ಣಗಿರಿ ಹಾಗೂ ಶಂಕರಪುರಂನಲ್ಲಿ AIMIM ಸ್ಪರ್ಧಿಸಲಿದೆ.
ವಿ.ಕೆ.ಶಶಿಕಲಾ ಇತ್ತೀಚೆಗಷ್ಟೇ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಹಾಗಾಗಿ, ಸದ್ಯ ಒಬ್ಬಂಟಿಯಾಗಿದ್ದ ಟಿಟಿವಿ ದಿನಕರನ್ಗೆ ಓವೈಸಿ ಬಲ ಜತೆಯಾಗಿದೆ. ಟಿಟಿವಿ ದಿನಕರನ್ರ AMMK ಪಕ್ಷವನ್ನು ಜತೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು. AIADMK ಮತಗಳು ಹಂಚಿಹೋಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲು ಹೊರಟಿತ್ತು. ಆದರೆ, ಎಡಪ್ಪಡಿ ಪಳನಿಸ್ವಾಮಿ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು. ದಿನಕರನ್ AIADMK ಜತೆಯಾದರೆ, ಶಶಿಕಲಾ ಪಕ್ಷದ ಉನ್ನತ ಸ್ಥಾನ ಹೊಂದಬಹುದು ಎಂಬ ಕಾರಣಕ್ಕೆ AMMKಯನ್ನು ದೂರವಿರಿಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಬಿಜೆಪಿ ಲೆಕ್ಕಾಚಾರದಂತೆ AMMK ಸುಮಾರು 40 ಕ್ಷೇತ್ರಗಳಲ್ಲಿ ಮತಗಳಿಕೆ ಮೇಲೆ ಪ್ರಭಾವ ಬೀರಬಹುದು.
ಆಸಾದುದ್ದೀನ್ ಓವೈಸಿಯ AIMIM ಪಕ್ಷ DMK-Congress ಜತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಾಂಗ್ರೆಸ್ ಜತೆಗೆ ಇಂಡಿಯನ್ ಮುಸ್ಲಿಂ ಲೀಗ್ನಂಥಾ ಇತರ ಮುಸ್ಲಿಂ ಪಕ್ಷಗಳು ಇರುವ ಕಾರಣ ಕಾಂಗ್ರೆಸ್ ಜತೆಯಾಗುವ ನಿರ್ಧಾರವನ್ನು AIMIM ಕೈಬಿಟ್ಟಿತು ಎಂದು ಹೇಳಲಾಗುತ್ತಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: Tamil Nadu Assembly Elections 2021: ಸಿಪಿಎಂ-ಡಿಎಂಕೆ ಮೈತ್ರಿ ಘೋಷಣೆ; 6 ಕ್ಷೇತ್ರಗಳಲ್ಲಿ ಸಿಪಿಎಂ ಸ್ಪರ್ಧೆ
Published On - 8:39 pm, Mon, 8 March 21