
ಚೆನ್ನೈ, ಅಕ್ಟೋಬರ್ 9: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಅಧಿಕಾರಕ್ಕೆ ಬಂದ ಕೇವಲ 5 ತಿಂಗಳಲ್ಲಿ ಲಭಿಸಿದ ಈ ಗೆಲುವು ಆಡಳಿತಾರೂಢ ಟಿವಿಕೆಗೆ ದೊಡ್ಡ ಬಲ ತಂದುಕೊಟ್ಟಿದೆ. ಮತ್ತೊಂದೆಡೆ, ತನ್ನ ಹಳೆಯ ಮೈತ್ರಿಕೂಟದ ಪಾಲುದಾರರಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಡಿಎಂಕೆ ಎರಡೂ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ತನ್ನ ಜನಪ್ರಿಯತೆ ಮತ್ತು ಮೂಲ ಮತಬಲ ಇನ್ನು ಕುಸಿದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಧಾರಾಪುರಂ ಕ್ಷೇತ್ರ:
ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮಾ ಅವರು 66,841 ಮತಗಳನ್ನು ಪಡೆದು, ತಮ್ಮ ಸಮೀಪದ ಎದುರಾಳಿ ಡಿಎಂಕೆ ಅಭ್ಯರ್ಥಿ ಎಸ್. ಸುಗುಣ್ಯಾ ವಿರುದ್ಧ 9,471 ಮತಗಳ ಅಂತರದಿಂದ ಜಯ ಗಳಿಸಿದರು. ಎಐಎಡಿಎಂಕೆ ಅಭ್ಯರ್ಥಿ ಕೆ. ಭಾನುಮತಿ 45,280 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಇದನ್ನೂ ಓದಿ: ‘ಈ ಜನಾದೇಶ ಹೊಸ ಬಲ ತುಂಬಿದೆ’; ಬಂಗಾಳ, ಅಸ್ಸಾಂ ಉಪಚುನಾವಣೆಯ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ
ಮಧುರಾಂತಕಂ ಕ್ಷೇತ್ರ:
ಟಿವಿಕೆ ಅಭ್ಯರ್ಥಿ ಕೆ. ಮರಗತಂ ಕುಮಾರವೇಲ್ 74,048 ಮತಗಳನ್ನು (ಶೇ. 40) ಪಡೆಯುವ ಮೂಲಕ ಡಿಎಂಕೆ ಅಭ್ಯರ್ಥಿ ಐ. ಪಾರಂದಾಮನ್ ವಿರುದ್ಧ 20,040 ಮತಗಳ ಅಂತರದ ದೊಡ್ಡ ಗೆಲುವು ಸಾಧಿಸಿದರು. ಎಐಎಡಿಎಂಕೆ ಅಭ್ಯರ್ಥಿ ಎಸ್. ಕಣಿತಾ ಸಂಪತ್ ಮೂರನೇ ಸ್ಥಾನ ಪಡೆದರೆ, ನೋಟಾಗೆ 652 ಮತಗಳು ಬಿದ್ದವು.
ಉಪಚುನಾವಣೆಗೆ ಹಿನ್ನೆಲೆ:
ಕಳೆದ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಟಿಕೆಟ್‌ನಿಂದ ಗೆದ್ದಿದ್ದ ಶಾಸಕರಾದ ಮರಗತಂ ಕುಮಾರವೇಲ್ ಮತ್ತು ಸತ್ಯಭಾಮಾ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತಾರೂಢ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದರಿಂದಾಗಿ ಈ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ಅನಿವಾರ್ಯವಾಗಿತ್ತು. ಮುಖ್ಯಮಂತ್ರಿ ವಿಜಯ್ ಅವರು ಎರಡೂ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ