Tamil Nadu: ರಾಮಮಂದಿರ ಕಾರ್ಯಕ್ರಮ ನೇರ ಪ್ರಸಾರ ರದ್ದು ಮಾಡಿದ ತಮಿಳುನಾಡು ಸರ್ಕಾರ: ನಿರ್ಮಲಾ ಸೀತಾರಾಮನ್, ಅಣ್ಣಾಮಲೈ ಖಂಡನೆ

Ram Mandir Prana Pratishta Programme: ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಡಿಎಂಕೆ ನೇತೃತ್ವದ ಸರ್ಕಾರದ ಈ ಕ್ರಮವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ನೇರ ಪ್ರಸಾರ ಮಾತ್ರವಲ್ಲ, ಸರ್ಕಾರಿ ಇಲಾಖೆಯಿಂದ ನಿರ್ವಹಿಸಲಾಗುವ ದೇವಸ್ಥಾನದಲ್ಲಿ ರಾಮನ ಹೆಸರಿನಲ್ಲಿ ಪೂಜೆ, ಪ್ರಸಾದ ಹಂಚಿಕೆ ಇವೂ ಕೂಡ ನಡೆಯುವಂತಿಲ್ಲ ಎನ್ನಲಾಗಿದೆ.

Tamil Nadu: ರಾಮಮಂದಿರ ಕಾರ್ಯಕ್ರಮ ನೇರ ಪ್ರಸಾರ ರದ್ದು ಮಾಡಿದ ತಮಿಳುನಾಡು ಸರ್ಕಾರ: ನಿರ್ಮಲಾ ಸೀತಾರಾಮನ್, ಅಣ್ಣಾಮಲೈ ಖಂಡನೆ
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 21, 2024 | 4:34 PM

ಚೆನ್ನೈ/ನವದೆಹಲಿ, ಜನವರಿ 21: ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ (Ram Mandir Pran Pratishta) ನಡೆಯಲಿದ್ದು ದೇಶದ ವಿವಿಧೆಡೆಯೂ ಪೂಜಾ ಕಾರ್ಯಕ್ರಮ, ಭಜನೆಗಳು ನಡೆಯುತ್ತಿವೆ. ಅಯೋಧ್ಯೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನೂ ದೇಶದ ವಿವಿಧೆಡೆ ಆಯೋಜಿಸಲಾಗಿದೆ. ತಮಿಳುನಾಡು ಸರ್ಕಾರ ನೇರ ಪ್ರಸಾರವನ್ನು (live telecast) ನಿಷೇಧಿಸಿದೆ. ನೇರ ಪ್ರಸಾರ ಮಾತ್ರವಲ್ಲ, ದೇವಸ್ಥಾನಗಳಲ್ಲಿ ರಾಮನ ಹೆಸರಲ್ಲಿ ವಿಶೇಷ ಪೂಜೆ, ಅನ್ನ ದಾನ ಇತ್ಯಾದಿ ಕಾರ್ಯಕ್ರಮವನ್ನೂ ನಡೆಸುವಂತಿಲ್ಲ. ತಮಿಳುನಾಡು ಸರ್ಕಾರದ (tamil nadu government) ಈ ಕ್ರಮವನ್ನು ಬಿಜೆಪಿ ನಾಯಕರು ಬಲವಾಗಿ ಖಂಡಿಸಿದ್ದಾರೆ. ಇದು ಸನಾತನ ಧರ್ಮ ವಿರೋಧಿ ನಿಲುವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಮೊದಲಾದವರು ಟೀಕಿಸಿದ್ದಾರೆ.

‘ತಮಿಳುನಾಡಿನಲ್ಲಿ 200ಕ್ಕೂ ಹೆಚ್ಚು ರಾಮ ಮಂದಿರಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ನಿರ್ವಹಣೆ ಆಗುವ ದೇವಸ್ಥಾನಗಳಲ್ಲಿ ಶ್ರೀ ರಾಮನ ಹೆಸರಿನಲ್ಲಿ ಯಾವುದೇ ಪೂಜೆ, ಭಜನೆ, ಪ್ರಸಾದ ಹಂಚಿಕೆ, ಅನ್ನ ದಾನಕ್ಕೆ ಅವಕಾಶ ಕೊಟ್ಟಿಲ್ಲ. ಖಾಸಗಿಯಿಂದ ನಿರ್ವಹಣೆಯಾಗುವ ದೇವಸ್ಥಾನಗಳಿಗೂ ಪೊಲೀಸರು ನಿರ್ಬಂಧ ಹಾಕಿದ್ದಾರೆ. ಪೆಂಡಾಲ್​ಗಳನ್ನು ಕಿತ್ತುಹಾಕುವುದಾಗಿ ಪೊಲೀಸರು ಬೆದರಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ, ದ್ವೇಷದ ಕ್ರಮವಾಗಿದ್ದ ಬಲವಾಗಿ ಖಂಡಿಸುತ್ತೇನೆ’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವುದಿಲ್ಲ: ನಿಲುವು ಪ್ರಕಟಿಸಿದ ಸಿದ್ದರಾಮಯ್ಯ

ಅಣ್ಣಾಮಲೈ ಖಂಡನೆ

ರಾಮ ಮಂದಿರ ಕಾರ್ಯಕ್ರಮಗಳನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ಖಂಡಿಸಿದ್ದಾರೆ. ತಮಿಳುನಾಡು ಸರ್ಕಾರದ ಸನಾತನ ಧರ್ಮ ವಿರೋಧದ ಅತಿರೇಕದ ನಿಲುವು ಎಂದು ಅವರು ಕಿಡಿಕಾರಿದ್ದಾರೆ.

‘ತಮಿಳುನಾಡು ಬಿಜೆಪಿ ಪಕ್ಷ ಹಾಗೂ ಇತರ ಸಂಘಟನೆಗಳು ರಾಮ ಭಕ್ತರಿಗಾಗಿ ಎಲ್​ಇಡಿ ಪರದೆಯಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ಕೊಡುವಂತೆ ಮಾಡಿಕೊಳ್ಳಲಾಗಿರುವ ಮನವಿಯನ್ನು ಹಿಂದೂ ಧರ್ಮ ಮತ್ತು ದತ್ತಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕ್ಷುಲ್ಲಕ ಕಾರಣಗಳೊಡ್ಡಿ ನಿರಾಕರಿಸುತ್ತಿವೆ.

‘ರಾಮಾಯಣದಲ್ಲಿ ತಮಿಳುನಾಡಿಗೆ ಐತಿಹಾಸಿಕ ಮಹತ್ವ ಇದೆ. ಆದರೆ, ಸಣ್ಣ ಮನಸ್ಸಿನ ಆಡಳಿತಗಾರರಿಂದ ರಾಜ್ಯದ ಘನತೆಗೆ ಕುಂದಾಗಿದೆ. ಈ ಕ್ರಮಕ್ಕೆ ತೀಕ್ಷ್ಣ ವಿರೋಧ ಬಂದ ಬಳಿಕ ಸಚಿವರು ಈಗ ತಮ್ಮ ನಿರ್ಧಾರ ಹಿಂಪಡೆದಿದ್ದಾರೆ,’ ಎಂದು ಅಣ್ಣಾಮಲೈ ಕೂಡ ಟ್ವೀಟ್​ನಲ್ಲಿ ಆರ್ಭಟಿಸಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲಿ ರಾಮಭಕ್ತಿ ಮೆರೆದ ಕನ್ನಡಿಗರು, ಸೊಗಸಾದ ರಾಮಾಯಣ ರೂಪಕ

ಜನವರಿ 22, ನಾಳೆ ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sun, 21 January 24