ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸರಣಿ ಸ್ಫೋಟ; ಸಾವಿನ ಸಂಖ್ಯೆ 16ಕ್ಕೆ ಏರಿಕೆ
Tamil Nadu cracker blast kills many in Virudhunagar: ತಮಿಳುನಾಡಿನ ವಿರುದುನಗರ್ ಜಿಲ್ಲೆಯಲ್ಲಿ ಏಪ್ರಿಲ್ 19ರಂದು ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಸಂಜೆ 6ರವರೆಗೆ ಬಂದಿರುವ ವರದಿಗಳ ಪ್ರಕಾರ ಸಾವಿನ ಸಂಖ್ಯೆ 16ಕ್ಕೆ ಏರಿದೆ. ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಬಹುದು.

ವಿರುದುನಗರ: ತಮಿಳುನಾಡಿನ ಪಟಾಕಿ ತಯಾರಿಕಾ ಹಬ್ ಎಂದೇ ಕರೆಯಲ್ಪಡುವ ವಿರುದುನಗರ ಜಿಲ್ಲೆಯಲ್ಲಿ ಇಂದು ಭಾನುವಾರ ಸರಣಿ ಸ್ಫೋಟ (cracker blast) ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ (Kattanarpatti) ಎಂಬ ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದೆ.
ಪಟಾಕಿ ಘಟಕದ ಒಳಗಿನ ರಾಸಾಯನಿಕ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಕಾರ್ಖಾನೆಯ ಇತರ ಭಾಗಗಳಿಗೆ ವ್ಯಾಪಿಸಿ, ನಾಲ್ಕೈದು ಭಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ 10ಕ್ಕೂ ಹೆಚ್ಚು ಕೊಠಡಿಗಳು ಸಂಪೂರ್ಣವಾಗಿ ಧ್ವಂಸವಾಗಿವೆ.
ಘಟನೆಯಲ್ಲಿ ಇದುವರೆಗೆ 16 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ನೋಯ್ಡಾ ಹಿಂಸಾಚಾರದ ಮಾಸ್ಟರ್ಮೈಂಡ್ ಆದಿತ್ಯ ಆನಂದ್ ಅರೆಸ್ಟ್
ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮುಖ್ಯಮಂತ್ರಿಗಳ ಸಾಂತ್ವನ ಮತ್ತು ಪರಿಹಾರ
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
“ವಿರುದುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ವಾರ್ತೆ ಕೇಳಿ ನನಗೆ ಅತೀವ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು,” ಎಂದು ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಕ್ಷಣವೇ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಲು ಸಚಿವರಾದ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ತಕ್ಷಣದ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!
ಕಳೆದ ವಾರವಷ್ಟೇ (ಏಪ್ರಿಲ್ 13) ವಿರುದುನಗರ ಜಿಲ್ಲೆಯ ಸಾತ್ತೂರು ಸಮೀಪದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ದೊಡ್ಡ ದುರಂತ ಸಂಭವಿಸಿರುವುದು ಸ್ಥಳೀಯ ಕಾರ್ಮಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಈ ಅವಘಡಗಳಿಗೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




