ಚೆನ್ನೈ: ಮೇಕೆದಾಟು (Mekedagtu) ಬಗ್ಗೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ (Supreme Court) ಮತ್ತೊಂದು ಅರ್ಜಿ ಸಲ್ಲಿಸಿದೆ. ಮೇಕೆದಾಟು ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ನಿರ್ಣಯ ಪರಿಗಣಿಸಬಾರದು. ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಬಾರದು. ಕಾವೇರಿ ಪ್ರಾಧಿಕಾರ ನೀರು ನಿರ್ವಹಣೆ ಬಗ್ಗೆ ಮಾತ್ರ ಚರ್ಚೆ ಮಾಡಬೇಕು. ಈ ಯೋಜನೆ ಬಗ್ಗೆ ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣ ಕುರಿತು ಚರ್ಚಿಸಲು ದೆಹಲಿಯಲ್ಲಿ ನಡೆಯಲಿರುವ ಕಾವೇರಿ ಪ್ರಾಧಿಕಾರದ ಸಭೆಗೆ ತಮಿಳುನಾಡು ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ. ಕಾವೇರಿ ಪ್ರಾಧಿಕಾರದ ಸಭೆ ಜೂನ್ 17ರಂದು ನಡೆಯಲಿದೆ. ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕುರಿತು ಕರ್ನಾಟಕದ ಯೋಜನಾ ವರದಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಕಾವೇರಿ ಆಯೋಗದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟಿನ ಚರ್ಚೆಗೆ ತಮಿಳುನಾಡು ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಈ ಕುರಿತಂತೆ ಹೇಳಿಕೆ ನೀಡಿದ್ದ ಪಿಎಂಎಂ ಸಂಸ್ಥಾಪಕ ಡಾ ರಾಮದಾಸ್, ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಮೇಕೆದಾಟು ಅಣೆಕಟ್ಟಿನ ಬಗ್ಗೆ ಚರ್ಚಿಸಲು ಅಥವಾ ಅನುಮೋದಿಸಲು ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ನಡೆಯಲಿರುವ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಬಗ್ಗೆ ಚರ್ಚಿಸುವಂತಿಲ್ಲ. 17ನೇ ತಾರೀಖಿನಂದು ನಡೆಯಲಿರುವ ಸಭೆಯ ಅಜೆಂಡಾದಿಂದ ಮೇಕೆದಾಟು ವಿಷಯವನ್ನು ತೆಗೆದುಹಾಕಬೇಕು. ಅಗತ್ಯಬಂದರೆ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಬೇಕು ಎಂದಿದ್ದಾರೆ
ಕಳೆದ ವರ್ಷ ಜೂನ್‌ನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಮೇಕೆದಾಟು ಅಣೆಕಟ್ಟು ಯೋಜನೆ ಕೈಬಿಡುವ ಕುರಿತು ಕರ್ನಾಟಕಕ್ಕೆ ಸಲಹೆ ಕೇಳಿದ್ದರು. ನಂತರ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದಾಗ ಮೇಕೆದಾಟು ಅಣೆಕಟ್ಟೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದೆ ಎಂದು ದುರೈಮುರುಗನ್ ಹೇಳಿದ್ದಾರೆ.
ಕಳೆದ ವರ್ಷ ಜುಲೈ 12 ರಂದು ಚೆನ್ನೈನಲ್ಲಿ ನಡೆದ ಶಾಸಕರ ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡದಂತೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಕಳೆದ ವರ್ಷ ಜೂನ್ 16ರಂದು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಸರ್ವಪಕ್ಷ ಸದಸ್ಯರು ಖುದ್ದಾಗಿ ಮಂಡಿಸಿದ್ದರು. ಆಗ ತಮಿಳುನಾಡಿನ ಅನುಮೋದನೆ ಇಲ್ಲದೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಲಾಯಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:33 pm, Tue, 7 June 22