
2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (Income Tax Return) ಸಲ್ಲಿಕೆಗೆ ಡಿ.31 ಕೊನೇ ದಿನವಾಗಿದೆ. ಆದರೆ ಸೋಷಿಯಲ್ ಮೀಡಿಯಾ(Social Media)ದಲ್ಲಿ #Extend_Due_Date_Immediately ಎಂಬ ಹ್ಯಾಷ್ಟ್ಯಾಗ್ ಸಿಕ್ಕಾಪಟೆ ಟ್ರೆಂಡ್ ಆಗುತ್ತಿದೆ. ಅಂದರೆ ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ನೀಡಲಾದ ಗಡುವನ್ನು ಕೂಡಲೇ ಮುಂದೂಡಬೇಕು ಎಂದು ಆದಾಯ ತೆರಿಗೆ ಪಾವತಿದಾರರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ, ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ತೀವ್ರ ಕಷ್ಟಪಡುತ್ತಿದ್ದಾರೆ.
ವಾಸ್ತವದಲ್ಲಿ 2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ 2021ರ ಜುಲೈ 31ನ್ನು ಕೊನೇದಿನವೆಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಕೊರೊನಾ ಎರಡನೇ ಅಲೆ ಮತ್ತು ಆಗಲೂ ಕೂಡ ಐಆರ್ಟಿ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಗಡುವನ್ನು 2021ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಆದರೆ ಕೊನೇ ದಿನ ಇನ್ನೆರಡು ದಿನ ಇರುವಾಗ ಮತ್ತೆ ಗಡುವು ಮುಂದೂಡುವಂತೆ ಆದಾಯ ತೆರಿಗೆ ಪಾವತಿದಾರರು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.
ಡಿಸೆಂಬರ್ 31 ಕೊನೇ ದಿನ ಎಂಬ ಕಾರಣಕ್ಕೆ ಇದೀಗ ವೆಬ್ಸೈಟ್ನಲ್ಲಿ ಒಂದೇ ಬಾರಿಗೆ ಲಾಗಿನ್ ಆಗುವವರ ಸಂಖ್ಯೆ ಅಧಿಕವಾಗಿದೆ. ಹೀಗೆ ಒಂದೇ ಸಲಕ್ಕೆ ಸಾವಿರಾರು, ಲಕ್ಷ ಜನರು ಒಂದು ವೆಬ್ಸೈಟ್ಗೆ ಲಾಗಿನ್ ಆದರೆ ಅಲ್ಲಿ ತಾಂತ್ರಿಕ ದೋಷ ಆಗುವುದು ಸಾಮಾನ್ಯ. ಈಗ ಕಳೆದ ಎರಡು ಮೂರು ದಿನಗಳಿಂದಲೂ ಐಆರ್ಟಿ ವೆಬ್ಸೈಟ್ ಲಾಗಿನ್ ಸಾಧ್ಯವಾಗುತ್ತಿಲ್ಲ ಎಂದು ಟ್ಯಾಕ್ಸ್ ಪಾವತಿದಾರರು ದೂರುತ್ತಿದ್ದಾರೆ. ಈ ಡಿಸೆಂಬರ್ 31 ಎಂಬುದು ತೆರಿಗೆಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೇ ದಿನವೋ ಅಥವಾ ವೆಬ್ಸೈಟ್ ಸಾಫ್ಟ್ವೇರ್ ಡೆವಲಪರ್ಗಳಿಗೆ ಕೊನೇ ದಿನವೋ? ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ಗಡುವನ್ನು ವಿಸ್ತರಿಸಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಸ್ಟಕ್ ಆಗಿರುವ ಐಟಿಆರ್ ವೆಬ್ಸೈಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪ್ರತಿದಿನ ಇಂಥ ದೋಷ, ಎರರ್ ತೋರಿಸುವಂಥ ವೆಬ್ಸೈಟ್ ಡೆವಲಪ್ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದವರೂ ಇದ್ದಾರೆ.
ಇದನ್ನೂ ಓದಿ: 85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್; ವೇದಿಕೆಯಲ್ಲಿ ನಡೆದಿದ್ದೇನು?
Published On - 9:47 am, Wed, 29 December 21