ಆರ್ಜೆಡಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ
Tejashwi Yadav appointed as RJD national working president: ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಅವರು ರಾಷ್ಟ್ರೀಯ ಜನತಾ ದಳದ ಎಕ್ಸಿಕ್ಯೂಟಿವ್ ಪ್ರೆಸಿಡೆಂಟ್ ಆಗಿ ಜವಾಬ್ದಾರಿ ಪಡೆದಿದ್ದಾರೆ. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಚುಕ್ಕಾಣಿಯನ್ನು ತೇಜಸ್ವಿಗೆ ವಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ತೇಜಸ್ವಿ ಯಾದವ್ ಅವರ ತಂದೆ ಲಾಲೂ ಪ್ರಸಾದ್ ಯಾದವ್, ತಾಯಿ ರಾಬಡಿ ದೇವಿ, ಸೋದರಿ ಮೀಸಾ ಭಾರ್ತಿ ಉಪಸ್ಥಿತರಿದ್ದರು.

ಪಟ್ನಾ, ಜನವರಿ 25: ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗ ಹಾಗು ಮಾಜಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ರಾಷ್ಟ್ರೀಯ ಜನತಾ ದಳದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಲಾಲೂಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಉಪಸ್ಥಿತಿಯಲ್ಲಿ ತೇಜಸ್ವಿ ಯಾದವ್ ಅವರಿಗೆ ಪಕ್ಷದ ಪರಮೋಚ್ಚ ಅಧಿಕಾರ ಕೊಡಲಾಗಿದೆ.
ತೇಜಸ್ವಿ ಯಾದವ್ ಅವರು ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿರುವ ವಿಚಾರವನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ರಾಷ್ಟ್ರೀಯ ಜನತಾ ದಳ, ‘ಹೊಸ ಯುಗದ ಉದಯವಾಗಿದೆ’ ಎಂದು ಬಣ್ಣಿಸಿದೆ.
ಇದನ್ನೂ ಓದಿ: Mann Ki Baat: ಭಾರತೀಯ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಬೇಕು: ಪ್ರಧಾನಿ ಮೋದಿ
ತೇಜಸ್ವಿ ಯಾದವ್ ಅವರು ಅಧ್ಯಕ್ಷರಾಗಿ ನೇಮಕವಾಗುವ ಮುನ್ನವೇ ಪಕ್ಷದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯವಹಿಸಿದ್ದರು. ಬೂತ್ ಮಟ್ಟದಲ್ಲಿ ಪಕ್ಷದ ಸ್ವರೂಪದಲ್ಲಿ ಬದಲಾವಣೆ ಮಾಡಲು ಯೋಜಿಸಿರುವುದಾಗಿ ಆರ್ಜೆಡಿ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಯಾದವ್ ಹೇಳಿದ್ದರು. ಅದಾಗಲೇ ಅವರಿಗೆ ಪಕ್ಷಾಧ್ಯಕ್ಷ ಪಟ್ಟ ದಕ್ಕುವುದು ನಿಶ್ಚಿತವಾಗಿದ್ದಂತಿತ್ತು.
ಪಕ್ಷದ ಸಂಕಷ್ಟ ಕಾಲಘಟ್ಟದಲ್ಲಿ ಜವಾಬ್ದಾರಿ…
ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಪಕ್ಷ ಹೀನಾಯವಾಗಿ ಸೋತಿತ್ತು. ಜೆಡಿಯು ನೇತಾರ ನಿತೀಶ್ ಕುಮಾರ್ ಹಲವು ವರ್ಷಗಳ ಕಾಲ ಸತತವಾಗಿ ಬಿಹಾರ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಸಂಸ್ಥಾಪಿತ ಆರ್ಜೆಡಿ ಪಕ್ಷದ ಶಕ್ತಿ ವರ್ಷದಿಂದ ವರ್ಷಕ್ಕೆ ಕುಂದುತ್ತಾ ಬರುತ್ತಿದೆ. ಈ ಪರಿಸ್ಥಿತಿಯಲ್ಲಿ ಮಾಜಿ ಉಪಮುಖ್ಯಮಂತ್ರಿಯೂ ಆದ ತೇಜಸ್ವಿ ಯಾದವ್ ಅವರು ಪಕ್ಷದ ಹೊಸ ಜೀವ ಕೊಡಲು ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದು ಕುತೂಹಲದ ಸಂಗತಿ.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ
ರೋಹಿಣಿ ಆಚಾರ್ಯ ಟೀಕೆ
ಲಾಲೂ ಪ್ರಸಾದ್ ಯಾದವ್ ಅವರ ಮಗಳು ರೋಹಿಣಿ ಆಚಾರ್ಯ ಅವರು ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆರ್ಜೆಡಿ ಪಕ್ಷದ ನಿಯಂತ್ರಣವು ನುಸುಳುಕೋರರ ಕೈಗೆ ಸಿಕ್ಕಿದೆ. ಲಾಲೂವಾದವನ್ನು ನಾಶ ಮಾಡುವುದೇ ಈ ಸಂಚುಕೋರರ ಏಕೈಕ ಗುರಿ ಎಂದು ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ಸಿಡಿಗುಟ್ಟಿದ್ದಾರೆ.
ರೋಹಿಣಿ ಅವರನ್ನು ಇತ್ತೀಚೆಗಷ್ಟೇ ಲಾಲೂ ಅವರ ಮನೆಯಿಂದ ಹಾಗೂ ಕುಟುಂಬದಿಂದ ಹೊರಹಾಕಲಾಗಿತ್ತು. ರೋಹಿಣಿ ಅವರು ತಮ್ಮ ತಂದೆ ಲಾಲೂ ಅವರ ಅನಾರಾಗ್ಯವನ್ನು ತೇಜಸ್ವಿ ಯಾದವ್ ದುರುಪಯೋಗಪಡಿಸಿಕೊಂಡು ಪಕ್ಷ ಹಾಗು ಕುಟುಂಬವನ್ನು ಹಾಳು ಮಾಡುತ್ತಿದ್ದಾನೆ ಎಂದು ಬಾರಿ ಬಾರಿ ಆರೋಪಿಸುತ್ತಲೇ ಬಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
