AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುಣೆ ಮರೆತ ಕಲ್ಲೆದೆಯ ಪೋಷಕರು, ಕೌನ್ಸೆಲಿಂಗ್ ವೇಳೆ ಗಲಾಟೆ ಮಾಡಿ ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲೇ ಬಿಟ್ಟು ಹೋದ ದಂಪತಿ

ಕರೀಮ್​ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ, ಕೌಟುಂಬಿಕ ಕಲಹ ತಾರಕಕ್ಕೇರಿ ಪೊಲೀಸ್ ಕೌನ್ಸೆಲಿಂಗ್ ವೇಳೆ ದಂಪತಿ ತಮ್ಮಿಬ್ಬರು ಹೆಣ್ಣುಮಕ್ಕಳನ್ನು ಠಾಣೆಯಲ್ಲೇ ತ್ಯಜಿಸಿ ಹೊರನಡೆದಿದ್ದಾರೆ. 10 ವರ್ಷಗಳ ಪ್ರೇಮವಿವಾಹದ ಈ ದಂಪತಿಯ ಜಗಳಕ್ಕೆ ಮಕ್ಕಳು ಬಲಿಯಾಗಿದ್ದಾರೆ. ಪೊಲೀಸರ ಮಧ್ಯಸ್ಥಿಕೆ ಮತ್ತು ಅಜ್ಜಿಯ ಆರೈಕೆಯಿಂದ ಮಕ್ಕಳು ಸದ್ಯ ಸುರಕ್ಷಿತವಾಗಿದ್ದು, ಪೋಷಕರ ಬೇಜವಾಬ್ದಾರಿ ವರ್ತನೆ ಸಮಾಜದ ಆತಂಕಕ್ಕೆ ಕಾರಣವಾಗಿದೆ.

ಕರುಣೆ ಮರೆತ ಕಲ್ಲೆದೆಯ ಪೋಷಕರು, ಕೌನ್ಸೆಲಿಂಗ್ ವೇಳೆ ಗಲಾಟೆ ಮಾಡಿ ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲೇ ಬಿಟ್ಟು ಹೋದ ದಂಪತಿ
ಮಕ್ಕಳುImage Credit source: NDTV
ನಯನಾ ರಾಜೀವ್
|

Updated on: Apr 29, 2026 | 11:21 AM

Share

ಕರೀಮ್​ನಗರ, ಏಪ್ರಿಲ್ 29: ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ(Marriage)ಯಾಗಿದ್ದ ರವಿ ಕುಮಾರ್ ಮತ್ತು ಲಲಿತಾ ಅವರ ಬದುಕು ಈಗ ಬೀದಿಗೆ ಬಂದಿದೆ. ಅಂಗಡಿ ಮಾಲೀಕ ರವಿ ಮತ್ತು  ಲಲಿತಾ ಅವರ ಹತ್ತು ವರ್ಷಗಳ ಸಂಸಾರದಲ್ಲಿ ಇತ್ತೀಚೆಗೆ ಕಲಹದ ಕಿಡಿ ಹೊತ್ತಿಕೊಂಡಿತ್ತು. ಈ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ನಡೆಸಿದ ಕೌನ್ಸೆಲಿಂಗ್ ಬಳಿಕ ನಡೆದ ಘಟನೆ ಇಡೀ ಪೊಲೀಸ್ ಠಾಣೆಯನ್ನೇ ಸ್ತಬ್ದಗೊಳಿಸಿತ್ತು.

ಏಪ್ರಿಲ್ 28ರಂದು ಲೋವರ್ ಮನೇರ್ ಡ್ಯಾಮ್ (LMD) ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ನಡೆಯುತ್ತಿತ್ತು. ವಾಗ್ವಾದ ತಾರಕಕ್ಕೇರಿದಾಗ ಪತ್ನಿ ಲಲಿತಾ ಅವರು ಮಾಡಿದ ಕೃತ್ಯ ಕಂಡು ಪೊಲೀಸರೇ ದಂಗಾದರು. ತಾನು ಧರಿಸಿದ್ದ ಮಂಗಳಸೂತ್ರ ಮತ್ತು ಕಾಲುಂಗುರವನ್ನು ಕಳಚಿ ಪೊಲೀಸರ ಮೇಜಿನ ಮೇಲಿಟ್ಟ ಲಲಿತಾ, ನನಗೆ ಈ ಸಂಸಾರವೂ ಬೇಡ, ಈ ಮಕ್ಕಳೂ ಬೇಡ ಎಂದು ಹೇಳಿ ಠಾಣೆಯಿಂದ ಹೊರನಡೆದರು.

ಪತ್ನಿ ಹೊರಹೋದ ಬೆನ್ನಲ್ಲೇ ಪತಿ ರವಿ ಕುಮಾರ್ ಕೂಡ ತನ್ನಿಬ್ಬರು ಹೆಣ್ಣುಮಕ್ಕಳನ್ನು ಅಲ್ಲೇ ಬಿಟ್ಟು ಠಾಣೆಯಿಂದ ಹೊರಬಂದರು. ತಾಯಿ ಹೋದರೆ ತಂದೆಯಾದರೂ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎಂಬ ಪೊಲೀಸರ ನಿರೀಕ್ಷೆ ಹುಸಿಯಾಯಿತು. ಅಹಂಕಾರದ ಹೋರಾಟದಲ್ಲಿ ಹೆತ್ತವರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದರು.

ಹೆತ್ತವರು ಕಣ್ಣೆದುರೇ ಹೊರಹೋಗುವುದನ್ನು ಕಂಡ ಇಬ್ಬರು ಮಕ್ಕಳು ಭಯಭೀತರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಸಬ್-ಇನ್ಸ್‌ಪೆಕ್ಟರ್ ಅನ್ವರ್ ಮತ್ತು ಇತರ ಸಿಬ್ಬಂದಿ ಕೂಡಲೇ ಬಂದು ಮಕ್ಕಳ ಕಣ್ಣೀರು ಒರೆಸಿ, ಊಟ ಕೊಟ್ಟು ಸಮಾಧಾನ ಮಾಡಿದರು. ಪೋಷಕರಿಗೆ ಹಲವು ಬಾರಿ ಫೋನ್ ಮಾಡಿದರೂ ಅವರು ಸ್ಪಂದಿಸಲಿಲ್ಲ.

ಮತ್ತಷ್ಟು ಓದಿ: ಉರಿಯುವ ಚಿತೆಗಳ ನಡುವೆ ಸಪ್ತಪದಿ, ಸ್ಮಶಾನದಲ್ಲೊಂದು ಮದುವೆ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಮಕ್ಕಳ ತಂದೆಯ ಕಡೆಯ ಅಜ್ಜಿಯನ್ನು ಸಂಪರ್ಕಿಸಿದರು. ಕೂಡಲೇ ಠಾಣೆಗೆ ಓಡೋಡಿ ಬಂದ ಅಜ್ಜಿ, ತಂದೆ-ತಾಯಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೊಮ್ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಸದ್ಯಕ್ಕೆ ಯಾವುದೇ ಕಾನೂನು ಕೇಸು ದಾಖಲಾಗಿಲ್ಲವಾದರೂ, ಪೊಲೀಸರು ಮತ್ತು ಸಮುದಾಯದ ಹಿರಿಯರು ದಂಪತಿಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ದಶಕದ ಪ್ರೇಮ ವಿವಾಹವು ಇಂದು ದ್ವೇಷವಾಗಿ ಮಾರ್ಪಟ್ಟಿದೆ. ಆದರೆ, ಪೋಷಕರ ಜಗಳದಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದರೂ ಠಾಣೆಯಲ್ಲಿ ಅನಾಥರಂತೆ ನಿಂತಿದ್ದ ಆ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಈಗ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us