ಮತ್ತಷ್ಟು 4 ಕೇಂದ್ರೀಯ ವಿದ್ಯಾಲಯಗಳು, 800ಕ್ಕೂ ಅಧಿಕ ಪಿಎಂ ಶ್ರೀ ಶಾಲೆಗಳು; ತೆಲಂಗಾಣ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದ ಕೊಡುಗೆ
Telangana gets 4 additional Kendriya Vidyalayas: ತೆಲಂಗಾಣದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ನೆರವಾಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. ತೆಲಂಗಾಣದಲ್ಲಿ 4 ಹೆಚ್ಚುವರಿ ಕೇಂದ್ರೀಯ ವಿದ್ಯಾಲಯ ಶಾಲೆಗಳಿಗೆ ಕೇಂದ್ರದಿಂದ ಅನುಮೋದನೆ ಕೊಡಲಾಗಿದೆ. ಇದರೊಂದಿಗೆ ತೆಲಂಗಾಣದಲ್ಲಿ ಕೆವಿ ಶಾಲೆಗಳ ಸಂಖ್ಯೆ 39ಕ್ಕೆ ಏರಿದಂತಾಗುತ್ತದೆ. ಸಚಿವ ಕಿಶನ್ ರೆಡ್ಡಿ ಪಿಎಂ ಶ್ರೀ ಶಾಲೆಗಳ ಯೋಜನೆಯನ್ನೂ ಉಲ್ಲೇಖಿಸಿದ್ದಾರೆ.

ಹೈದರಾಬಾದ್, ಅಕ್ಟೋಬರ್ 1: ತೆಲಂಗಾಣ ರಾಜ್ಯದಲ್ಲಿ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವನ್ನೂ ನೀಡುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಹೇಳಿದ್ದಾರೆ. ಪತ್ರಿಕಾಹೇಳಿಕೆ ಬಿಡುಗಡೆ ಮಾಡಿದ ತೆಲಂಗಾಣ ಬಿಜೆಪಿ ಮುಖಂಡರೂ ಆದ ಕಿಶನ್ ರೆಡ್ಡಿ, ಇತ್ತೀಚೆಗೆ ತಮ್ಮ ರಾಜ್ಯಕ್ಕೆ 4 ಹೆಚ್ಚುವರಿ ಕೇಂದ್ರೀಯ ವಿದ್ಯಾಲಯಗಳ (Kendriya Vidyalayas) ಸ್ಥಾಪನೆಗೆ ಅನುಮೋದನೆ ಸಿಕ್ಕಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಈಗಾಗಲೇ 35 ಕೇಂದ್ರೀಯ ವಿದ್ಯಾಲಯಗಳಿವೆ. ಈ ನಾಲ್ಕನ್ನು ಸೇರಿಸಿದರೆ ಈ ಶಾಲೆಗಳ ಸಂಖ್ಯೆ 39ಕ್ಕೆ ಏರುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ಮಕ್ಕಳ ಶಿಕ್ಷಣಕ್ಕೆಂದು ಈ ಕೇಂದ್ರೀಯ ವಿದ್ಯಾಲಯಗಳು ಮುಡಿಪಾಗಿವೆ. ಇತರ ಸಾಮಾನ್ಯ ಮಕ್ಕಳಿಗೂ ಸೀಮಿತ ಸಂಖ್ಯೆಯಲ್ಲಿ ಈ ಶಾಲೆಗಳಲ್ಲಿ ಅವಕಾಶ ಇರುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಗಣನೀಯ ಹೆಚ್ಚಳ; NCRBಯ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ
ತೆಲಂಗಾಣದಲ್ಲಿ ಹೊಸದಾಗಿ ಕೇಂದ್ರೀಯ ವಿದ್ಯಾಲಯಗಳು ಸ್ಥಾಪನೆಯಾಗುವ ಪ್ರದೇಶಗಳು
- ಭದ್ರಾದ್ರಿ ಕೊತ್ತಗುಡೆಂ
- ಮುಳುಗು ಜಿಲ್ಲೆ
- ಜಗಿತ್ಯಾಲ ಜಿಲ್ಲೆ
- ವಾನಪರ್ತಿ ಜಿಲ್ಲೆ
ನಕ್ಸಲ್ ಉಪಟಳದ ನಡುವೆ ಜನರಿಗೆ ಉತ್ತಮ ಶಿಕ್ಷಣ
ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಲಿರುವ ಭದ್ರಾದ್ರಿ ಕೊತ್ತಗುಡೆಂ ಮತ್ತು ಮುಲುಗು ಪ್ರದೇಶಗಳು ನಕ್ಸಲ್ ಹಾವಳಿಗೆ ಒಳಗಾಗಿದ್ದನ್ನು ಪ್ರಸ್ತಾಪಿಸಿ, ಇಲ್ಲಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಅವಕಾಶಗಳನ್ನು ಕೇಂದ್ರ ಒದಗಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಹಲ್ಲುಗಳು ನಾಲಿಗೆಯನ್ನು ಕಚ್ಚಿದಾಕ್ಷಣ ಹಲ್ಲನ್ನು ನಾವು ಮುರಿಯುವುದಿಲ್ಲ: ಪ್ರಧಾನಿ ಮೋದಿ
ತೆಲಂಗಾಣದಲ್ಲಿ ಪಿಎಂ ಶ್ರೀ ಶಾಲೆಗಳು…
ಕಳೆದ ಎರಡು ವರ್ಷದಲ್ಲಿ ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯದಲ್ಲಿ 800ಕ್ಕೂ ಅಧಿಕ ಪಿಎಂ ಶ್ರೀ ಶಾಲೆಗಳಿಗಾಗಿ ಬಜೆಟ್ನಲ್ಲಿ 400 ಕೋಟಿ ರೂ ಹಣ ಕೊಟ್ಟಿದೆ. ದೇಶಾದ್ಯಂತ ಪಿಎಂ ಶ್ರೀ ಶಾಲೆಗಳಿಗೆ ನೀಡಲಾಗಿರುವ ಬಜೆಟ್ನಲ್ಲಿ ಅತಿಹೆಚ್ಚು ಪಾಲು ತೆಲಂಗಾಣಕ್ಕೆ ಸಿಕ್ಕಿದೆ ಎಂದು ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಸಮಗ್ರ ಶಿಕ್ಷಣ ಅಭಿಯಾನದಲ್ಲಿ ತೆಲಂಗಾಣಕ್ಕೆ 2,000 ಕೋಟಿ ರೂ
ಕೇಂದ್ರ ಸರ್ಕಾರ ಇದೇ ವೇಳೆ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ತೆಲಂಗಾಣಕ್ಕೆ 2,000 ಕೋಟಿ ರೂ ನೀಡಿದೆ. ಮುಲುಗು ಜಿಲ್ಲೆಯಲ್ಲಿ 1,000 ಕೋಟಿ ರೂ ಬಜೆಟ್ನಲ್ಲಿ ಸಮ್ಮಕ್ಕ ಸಾರಕ್ಕ ಬುಡಕಟ್ಟು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಕಿಶನ್ ರೆಡ್ಡಿ ಅವರು ತೆಲಂಗಾಣಕ್ಕೆ ಕೇಂದ್ರದ ಕೊಡುಗೆಗಳನ್ನು ಪ್ರಸ್ತಾಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




