ಚಿದಂಬರಂ ಆಗಲೇ ರಾಜೀನಾಮೆ ಕೊಡಬೇಕಿತ್ತಲ್ವ..! ಹಿರಿಯ ಕಾಂಗ್ರೆಸ್ ಮುಖಡ ರಷೀದ್ ಆಲ್ವಿ ತರಾಟೆ
Raashid Alvi reacts on P Chidambaram's 26/11 statement: 2008ರಲ್ಲಿ ನಡೆದ ಮುಂಬೈ ದಾಳಿ ಘಟನೆ ಸಂಬಂಧ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಆಲೋಚನೆ ಬಂದಿತ್ತು ಎಂದು ಪಿ ಚಿದಂಬರಂ ಹೇಳಿಕೆ ನೀಡಿದ್ದರು. ಇದಕ್ಕೆ ಮತ್ತೊಬ್ಬ ಕಾಂಗ್ರೆಸ್ಸಿಗ ರಷೀದ್ ಆಲ್ವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿದಂಬರಂ 16 ವರ್ಷಗಳ ನಂತರ ಈ ಹೇಳಿಕೆ ನೀಡುವ ಔಚಿತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ನವದೆಹಲಿ, ಅಕ್ಟೋಬರ್ 1: ಹದಿನೇಳು ವರ್ಷಗಳ ಹಿಂದಿನ ಮುಂಬೈ ಉಗ್ರ ದಾಳಿ ಘಟನೆ ಸಂಬಂಧ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಗೃಹ ಸಚಿವ ಪಿ ಚಿದಂಬರಂ (P Chidambaram) ನೀಡಿದ ಹೇಳಿಕೆಯನ್ನು ಮತ್ತೊಬ್ಬ ಹಿರಿಯ ಕಾಂಗ್ರೆಸ್ಸಿಗ ರಷೀದ್ ಆಲ್ವಿ (Raashid Alvi) ಆಕ್ಷೇಪಿಸಿದ್ದಾರೆ. 26/11 ಮುಂಬೈ ದಾಳಿ ಘಟನೆ ನಡೆದಾಗ ಪಾಕಿಸ್ತಾನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಆಲೋಚನೆ ಇತ್ತು. ಆದರೆ, ಅಮೆರಿಕದ ಒತ್ತಡದಿಂದ ಆ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಪಿ ಚಿದಂಬರಂ ಹೇಳಿದ್ದರು. ಇದಕ್ಕೆ ತಗಾದೆ ವ್ಯಕ್ತಪಡಿಸಿದ ರಷೀದ್ ಆಲ್ವಿ, ಚಿದಂಬರಂ ಅಷ್ಟು ಒತ್ತಡದಲ್ಲಿದ್ದಿದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತಲ್ವ ಎಂದು ಪ್ರಶ್ನಿಸಿದ್ದಾರೆ.
ಘಟನೆ ನಡೆದು 16 ವರ್ಷದ ಬಳಿಕ ಚಿದಂಬರಂ ಯಾಕೆ ಈಗ ಈ ಹೇಳಿಕೆ ನೀಡುತ್ತಿದ್ದಾರೆ? ಇದರಿಂದ ಬಿಜೆಪಿಗೆಯೇ ಲಾಭ ಆಗುವುದು ಎಂದು ರಷೀದ್ ವಿಷಾದಿಸಿದ್ದಾರೆ.
‘ಅಮೆರಿಕದ ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದಂತೆ ಅನಿಸುವುದಿಲ್ಲವಾ? ಆ ಸಂದರ್ಭದಲ್ಲಿ ಚಿದಂಬರಂಗೆ ಸರಿಬರದೇ ಹೋಗಿದ್ದಲ್ಲಿ ರಾಜೀನಾಮೆ ನೀಡಬಹುದಿತ್ತು’ ಎಂದು ಹೇಳಿದ ರಷೀದ್, ಪಕ್ಷವನ್ನು ಒಳಗಿಂದಲೇ ದುರ್ಬಲಗೊಳಿಸುವ ಪ್ರಯತ್ನ ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್ ಶತಮಾನೋತ್ಸವ: 100 ರೂ ನಾಣ್ಯ, ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ; ಕರೆನ್ಸಿಯಲ್ಲಿ ಭಾರತ ಮಾತೆ ಚಿತ್ರ ಇದೇ ಮೊದಲು
‘ಕಾಂಗ್ರೆಸ್ನೊಳಗೆಯೇ ಹಲವು ಪಕ್ಷಕ್ಕೆ ಕೇಡು ಬಯಸುತ್ತಿದ್ದಾರೆ. ಮನೆಯೊಳಗಿನ ಹಣತೆಯಿಂದಲೇ ಮನೆಗೆ ಬೆಂಕಿ ತಗುಲಿದಂಥ ಪರಿಸ್ಥಿತಿ ಅದು’ ಎಂದು ರಷೀದ್ ಆಲ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿ ಚಿದಂಬರಂ ಹೇಳಿದ್ದೇನು?
2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಬಂದ ಉಗ್ರರ ತಂಡವೊಂದು ಮುಂಬೈನಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿಗಳನ್ನು ನಡೆಸಿತ್ತು. ಈ ಘಟನೆಯಲ್ಲಿ ನೂರಾರು ಮಂದಿ ಬಲಿಯಾಗಿದ್ದರು. ಪಿ ಚಿದಂಬರಂ ಆ ಘಟನೆಯಾಗಿ ಕೆಲ ದಿನಗಳ ಬಳಿಕ ಗೃಹ ಸಚಿವರಾಗಿದ್ದರು. ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಆಲೋಚನೆ ತನಗೆ ಬಂದಿತ್ತು ಎಂದು ಚಿದಂಬರಂ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತಷ್ಟು 4 ಕೇಂದ್ರೀಯ ವಿದ್ಯಾಲಯಗಳು, 800ಕ್ಕೂ ಅಧಿಕ ಪಿಎಂ ಶ್ರೀ ಶಾಲೆಗಳು; ತೆಲಂಗಾಣ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದ ಕೊಡುಗೆ
‘ಯುದ್ಧ ಆರಂಭಿಸಬೇಡಿ ಎಂದು ಇಡೀ ಜಗತ್ತು ಭಾರತದ ಮೇಲೆ ಒತ್ತಡ ಹಾಕಿತು. ಅಂದಿನ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀನ ರೈಸ್ ಭಾರತಕ್ಕೆ ಬಂದು, ಈ ಘಟನೆಗೆ ಪ್ರತಿಕ್ರಿಯಿಸಬೇಡಿ ಎಂದು ಕೇಳಿಕೊಂಡರು’ ಎಂದು ಪಿ ಚಿದಂಬರಂ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




