ಆರೆಸ್ಸೆಸ್ ಶತಮಾನೋತ್ಸವ: 100 ರೂ ನಾಣ್ಯ, ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ; ಕರೆನ್ಸಿಯಲ್ಲಿ ಭಾರತ ಮಾತೆ ಚಿತ್ರ ಇದೇ ಮೊದಲು
RSS Centenary celebrations: ಆರೆಸ್ಸೆಸ್ ಸ್ಥಾಪನೆಯಾಗಿ 100 ವರ್ಷವಾದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಕುರುಹಾಗಿ 100 ರೂ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ನರೇಂದ್ರ ಮೋದಿ ಅವರು ಈ ವೇಳೆ ಮಾತನಾಡುತ್ತಾ, ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ಇರುವ ನಾಣ್ಯ ಹೊರತರಲಾಗಿದೆ ಎಂದಿದ್ದಾರೆ.

ನವದೆಹಲಿ, ಅಕ್ಟೋಬರ್ 1: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ (RSS Centenary celebrations) ಕುರುಹಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 100 ರೂ ಮುಖಬೆಲೆಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಬುಧವಾರ ಮಾಡಿದ್ದಾರೆ. 100 ರೂ ನಾಣ್ಯದಲ್ಲಿ (Rs 100 coin) ಭಾರತ್ ಮಾತೆ ಹಾಗೂ ಸ್ವಯಂಸೇವಕರ ಚಿತ್ರ ಇರುವುದು ವಿಶೇಷ. ಭಾರತೀಯ ಕರೆನ್ಸಿಯೊಂದರಲ್ಲಿ ಭಾರತ ಮಾತೆಯ ಚಿತ್ರ ಹಾಕಲಾಗಿರುವುದು ಇದೇ ಮೊದಲು.
ಈ ವಿಶೇಷ 100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನದ ಚಿತ್ರ ಇದೆ. ಮತ್ತೊಂದು ಬದಿಯಲ್ಲಿ ಸಿಂಹ ಸಮೇತ ವರದ ಮುದ್ರಾದಲ್ಲಿರುವ ಭಾರತ್ ಮಾತೆ, ಹಾಗೂ ಆಕೆಗೆ ಆರೆಸ್ಸೆಸ್ ಸ್ವಯಂಸೇವಕರು ವಂದಿಸುತ್ತಿರುವ ಚಿತ್ರ ಇದೆ.
ಇದನ್ನೂ ಓದಿ: ಮತ್ತಷ್ಟು 4 ಕೇಂದ್ರೀಯ ವಿದ್ಯಾಲಯಗಳು, 800ಕ್ಕೂ ಅಧಿಕ ಪಿಎಂ ಶ್ರೀ ಶಾಲೆಗಳು; ತೆಲಂಗಾಣ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದ ಕೊಡುಗೆ
‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತೀಯ ಕರೆನ್ಸಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ಮುದ್ರಿಸಲಾಗಿದೆ. ಈ ಕರೆನ್ಸಿಗೆ ಐತಿಹಾಸಿಕ ಮಹತ್ವ ಇದೆ. ಇದು ಹೆಮ್ಮೆಯ ಕ್ಷಣ’ ಎಂದು ನರೇಂದ್ರ ಮೋದಿ ಅವರು ನಾಣ್ಯ ಹಾಗೂ ಪೋಸ್ಟಲ್ ಸ್ಟ್ಯಾಂಪ್ ಅನಾವರಣಗೊಳಿಸಿ ಹೇಳಿದ್ದಾರೆ.

ಆರೆಸ್ಸೆಸ್ ಶತಮಾನೋತ್ಸವ ಸಮಾರಂಭದಲ್ಲಿ ದತ್ತಾತ್ರೇಯ ಹೊಸಬಾಳೆ, ಮೋದಿ ಮತ್ತು ರೇಖಾ ಗುಪ್ತ
ಆರೆಸ್ಸೆಸ್ 1925ರಲ್ಲಿ ಮಹಾರಾಷ್ಟ್ರದ ನಾಗಪುರ್ನಲ್ಲಿ ಸ್ಥಾಪನೆಯಾಗಿದೆ. ಈ ವರ್ಷಕ್ಕೆ ಈ ಸಂಘಟನೆ 100 ವರ್ಷ ಪೂರೈಸಿದಂತಾಗುತ್ತದೆ. ಹೀಗಾಗಿ, ಈ ವರ್ಷ ಆರೆಸ್ಸೆಸ್ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾಣ್ಯ ಮತ್ತು ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ. ಈ ನಾಣ್ಯದಲ್ಲಿ ಭಾರತ್ ಮಾತೆ ಮತ್ತು ಸ್ವಯಂ ಸೇವಕರ ಚಿತ್ರದ ಜೊತೆಗೆ ಆರೆಸ್ಸೆಸ್ನ ಧ್ಯೇಯ ವಾಕ್ಯವೂ ಇದೆ. ‘ರಾಷ್ಟ್ರಾಯ ಸ್ವಾಹ, ಇದಂ ರಾಷ್ಟ್ರಾಯ, ಇದಂ ನಾ ಮಮ’ ಎನ್ನುವ ಸಂಸ್ಕೃತ ಶ್ಲೋಕ ಅದು. ಅದರರ್ಥ, ಪ್ರತಿಯೊಂದೂ ಕೂಡ ದೇಶಕ್ಕೆ ಸಮರ್ಪಿತ. ಎಲ್ಲವೂ ಕೂಡ ದೇಶಕ್ಕೆ ಸೇರಿದ್ದು, ನನ್ನದೆನ್ನುವುದು ಯಾವುದೂ ಇಲ್ಲ.
ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಗಣನೀಯ ಹೆಚ್ಚಳ; NCRBಯ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ
ಪೋಸ್ಟಲ್ ಸ್ಟ್ಯಾಂಪ್ನಲ್ಲೂ ಆರೆಸ್ಸೆಸ್ ಗರಿಮೆ
ಈ ವೇಳೆ ಬಿಡುಗಡೆಯಾದ ವಿಶೇಷ ಅಂಚೆ ಚೀಟಿಯೂ ಕೂಡ ಆರೆಸ್ಸೆಸ್ ಮಹತ್ವವನ್ನು ಪ್ರತಿಬಿಂಬಿಸುತ್ತಿದೆ. 1963ರ ಗಣರಾಜ್ಯೋತ್ಸವದಲ್ಲಿ ಆರೆಸ್ಸೆಸ್ ಪಥ ಸಂಚಲನದ ಚಿತ್ರವು ಈ ಪೋಸ್ಟಲ್ ಸ್ಟ್ಯಾಂಪ್ನಲ್ಲಿದೆ.
ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಬುಧವಾರ ನಡೆದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮೊದಲಾದವರು ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




