ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ತೆಲಂಗಾಣದಲ್ಲಿ ಮಿತಿಮೀರಿದ ಉಷ್ಣಗಾಳಿ ಮತ್ತು ತೀವ್ರ ಬಿಸಿಲಿಗೆ 16 ಜನರು ಸಾವನ್ನಪ್ಪಿದ್ದಾರೆ. ಸರ್ಕಾರ ಹೈ ಅಲರ್ಟ್ ಘೋಷಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ಎಲ್‌ನಿನೋ ಪರಿಣಾಮದಿಂದ ಮೇ 26ರವರೆಗೆ ಉಷ್ಣಗಾಳಿ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರು ಮತ್ತು ಮಕ್ಕಳನ್ನು ಮನೆಯಲ್ಲೇ ಇರುವಂತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸರ್ಕಾರ ಸೂಚಿಸಿದೆ.

ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು
ಸಾಂದರ್ಭಿಕ ಚಿತ್ರ

Updated on: May 23, 2026 | 8:18 PM

ಹೈದರಾಬಾದ್, ಮೇ.23: ದೇಶದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಮಿತಿಮೀರುತ್ತಿದ್ದು, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿ (Heatwave) ಮತ್ತು ತೀವ್ರ ಬಿಸಿಲಿಗೆ (Heatstroke) ಕಳೆದ ಕೆಲವು ದಿನಗಳಲ್ಲಿ ಒಟ್ಟು 16 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

ರಾಜ್ಯದ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಹೈದರಾಬಾದ್‌ನ ಸೆಕ್ರೆಟೇರಿಯಟ್‌ನಲ್ಲಿ ತುರ್ತು ಪರಿಶೀಲನಾ ಸಭೆ ನಡೆಸಿದ ಬಳಿಕ ಈ ಆಘಾತಕಾರಿ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ವರದಿಯ ಪ್ರಕಾರ, ಜಯಶಂಕರ್ ಭೂಪಾಲಪಲ್ಲಿಯಲ್ಲಿ 4, ವಾರಂಗಲ್ ಅರ್ಬನ್, ಕರೀಮನಗರ ಮತ್ತು ನಿಜಾಮಾಬಾದ್‌ನಲ್ಲಿ ತಲಾ 3, ಹಾಗೂ ಜೋಗುಲಾಂಬ ಗದ್ವಾಲ್, ರಂಗಾರೆಡ್ಡಿ ಮತ್ತು ಸೂರ್ಯಪೇಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಬಿಸಿಲಿನ ಬೇಗೆಗೆ ಬಲಿಯಾಗಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ತಕ್ಷಣವೇ ವಿತರಿಸಲು ಸಚಿವರು ಆದೇಶಿಸಿದ್ದಾರೆ.

ಎಲ್‌ನಿನೋ ಭೀತಿ, ಮುಂದಿನ 3 ದಿನ ಹೈ ಅಲರ್ಟ್!:

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಎಲ್‌ನಿನೋ ಎಫೆಕ್ಟ್‌ನಿಂದಾಗಿ ಮೇ 26 ರವರೆಗೆ ಹೈದರಾಬಾದ್, ಕರೀಮನಗರ, ಪೆದ್ದಪಲ್ಲಿ, ಮುಳುಗು, ಖಮ್ಮಂ, ನಲ್ಗೊಂಡ ಮತ್ತು ಮಹಬೂಬ್‌ನಗರ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಉಷ್ಣಗಾಳಿ ಮತ್ತಷ್ಟು ತೀವ್ರಗೊಳ್ಳಲಿದೆ. ಹೀಗಾಗಿ, ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಕೇರಳ ಸಿಎಂ ಕಾರ್ಯದರ್ಶಿಯಾಗಿ ರತನ್ ಕೇಳ್ಕರ್ ನೇಮಕ: ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ

ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ತಂಪಾದ ಕುಡಿಯುವ ನೀರು, ಮಜ್ಜಿಗೆ ಹಾಗೂ ಒಆರ್‌ಎಸ್ (ORS) ಪ್ಯಾಕೆಟ್‌ಗಳನ್ನು ಕಡ್ಡಾಯವಾಗಿ ಲಭ್ಯವಾಗುವಂತೆ ಮಾಡಲು ಆದೇಶಿಸಲಾಗಿದೆ. ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ತುರ್ತು ಕೆಲಸಗಳಿಲ್ಲದೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರಗೆ ಬರದಂತೆ ಸರ್ಕಾರ ಕಟ್ಟುನಿಟ್ಟಿನ ಸಲಹೆ (Advisory) ನೀಡಿದೆ. ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಪಕ್ಷಿ-ಪ್ರಾಣಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us