AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ! ಇಂದಿನಿಂದ ವಿಜಯ್ ಅಬ್ಬರ ಶುರು

ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ನಟ ದಳಪತಿ ವಿಜಯ್ ಇಂದು ಐತಿಹಾಸಿಕ ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದಶಕಗಳ ಆಡಳಿತವನ್ನು ಅಂತ್ಯಗೊಳಿಸಿರುವ ವಿಜಯ್, ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಅಧಿಕಾರ ವಹಿಸಿಕೊಂಡರು. ಅವರೊಂದಿಗೆ 9 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಯಾವುದೇ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇಂದಿನಿಂದ ತಮಿಳುನಾಡಿನಲ್ಲಿ ದಳಪತಿಯ ಅಬ್ಬರ ಶುರುವಾಗಲಿದೆ.

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ! ಇಂದಿನಿಂದ ವಿಜಯ್ ಅಬ್ಬರ ಶುರು
ತಮಿಳುನಾಡಿನಲ್ಲಿ ಇನ್ನು ಮುಂದೆ ವಿಜಯ್ ಅಬ್ಬರ ಶುರು!
ಭಾವನಾ ಹೆಗಡೆ
|

Updated on:May 10, 2026 | 12:16 PM

Share

ಚೆನ್ನೈ, ಮೇ 10: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದ್ವಿಪಕ್ಷೀಯ ಪ್ರಭುತ್ವವನ್ನು ಅಂತ್ಯಗೊಳಿಸಿ, ನಟ ದಳಪತಿ ವಿಜಯ್ (Thalapathy Vijay) ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ಒಂದು ಹೊಸ ರಾಜಕೀಯ ಯುಗದ ಆರಂಭವಾಗಿದೆ.

ಮುಖ್ಯಾಂಶಗಳು

  • ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ನಟ ದಳಪತಿ ವಿಜಯ್ ಇಂದು ಪ್ರಮಾಣವಚನ ಸ್ವೀಕಾರ.
  • 234 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿ ಡಿಎಂಕೆ-ಎಐಎಡಿಎಂಕೆ ದಶಕಗಳ ಆಡಳಿತಕ್ಕೆ ಅಂತ್ಯ.
  • ಯಾವುದೇ ಉಪಮುಖ್ಯಮಂತ್ರಿ ಇಲ್ಲದೆ ವಿಜಯ್ ಸಂಪುಟದ ಒಂಬತ್ತು ಸಚಿವರಿಂದ ಅಧಿಕಾರ ಸ್ವೀಕಾರ.

ಭವ್ಯ ಪ್ರಮಾಣವಚನ ಸಮಾರಂಭ

ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟಿ ತ್ರಿಶಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರಂತಹ ದಿಗ್ಗಜರು ಆಳಿದ ನೆಲದಲ್ಲಿ ಈಗ ವಿಜಯ್ ಅವರ ಆಡಳಿತ ಶುರುವಾಗಿದೆ.

ಸಂಘರ್ಷದಿಂದ ಸಿಎಂ ಪಟ್ಟದವರೆಗೆ

ವಿಜಯ್ ಅವರ ರಾಜಕೀಯ ಪಯಣವು ಅವರ ಸಿನಿಮಾಗಳಂತೆಯೇ ರೋಚಕವಾಗಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಕಟ್ಟಿ, ಹಳೆ ಮದ್ರಾಸ್‌ನ ರಾಜಕೀಯ ಸಂಪ್ರದಾಯಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. 2026ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರವೂ ಅಧಿಕಾರ ಹಿಡಿಯಲು ಅವರು ಹತ್ತಾರು ಕಾನೂನು ಮತ್ತು ರಾಜಕೀಯ ಅಡೆತಡೆಗಳನ್ನು ಎದುರಿಸಬೇಕಾಯಿತು. ಜನಸಾಮಾನ್ಯರ ಧ್ವನಿಯಾಗಿ ಹೋರಾಡಿದ ವಿಜಯ್, ಅಂತಿಮವಾಗಿ ಭವ್ಯ ಗೆಲುವಿನ ಮೂಲಕ ‘ಸಿಎಂ ವಿಜಯ್’ ಆಗಿ ಹೊರಹೊಮ್ಮಿದ್ದಾರೆ.

ಸುಮಾರು ಏಳು ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಬಲಿಷ್ಠ ದ್ರಾವಿಡ ಪಕ್ಷಗಳ ಎದುರು ಚುನಾವಣಾ ಕಣಕ್ಕೆ ಇಳಿದ ವಿಜಯ್, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಗೆಲುವು ಸುಲಭವಾಗಿ ಸಿಕ್ಕಿದ್ದಲ್ಲ. ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಬಹುಮತಕ್ಕೆ ಬೇಕಾದ 118ರ ಗಡಿ ದಾಟಲು ವಿಜಯ್ ಪ್ರತಿ ಹಂತದಲ್ಲೂ ಹೋರಾಡಬೇಕಾಯಿತು. ಕೊನೆಗೂ ಮ್ಯಾಜಿಕ್ ಸಂಖ್ಯೆ ಪಡೆದ ಅವರು, ಇಂದು ಅಕ್ಷರಶಃ ‘ದಳಪತಿ’ ಎನಿಸಿಸಿಕೊಂಡಿದ್ದಾರೆ.

ಇದನ್ನೂ ಓದಿ Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ

ನೂತನ ಸಚಿವ ಸಂಪುಟ

ವಿಜಯ್ ಅವರೊಂದಿಗೆ ಒಂಬತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವರ ಪಟ್ಟಿ ಇಲ್ಲಿದೆ:

  1. ಎಸ್. ಕೀರ್ತನಾ
  2. ಕೆ.ಎ. ಸೆಂಗೊಟ್ಟೈಯನ್
  3. ಆಧವ್ ಅರ್ಜುನ್
  4. ಬಸ್ಸಿ ಆನಂದ್
  5. ಡಾ. ಅರುಣ್ ರಾಜ್‌
  6. ವೆಂಕಟರಮಣನ್‌
  7. ನಿರ್ಮಲ್‌ ಕುಮಾರ್‌
  8. ರಾಜ್‌ ಮೋಹನ್‌
  9. ಡಾ. ಟಿ.ಕೆ. ಪ್ರಭು

ಡಿಸಿಎಂ ಗೊಂದಲಕ್ಕೆ ತೆರೆ

ಟಿವಿಕೆ (TVK) ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ (DCM) ಹುದ್ದೆಯ ಕುರಿತು ತೀವ್ರ ಚರ್ಚೆಗಳು ನಡೆದಿದ್ದವು. ಮೈತ್ರಿ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಡಿಸಿಎಂ ಹುದ್ದೆಗಾಗಿ ಬೇಡಿಕೆಯಿಟ್ಟಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇವಲ ಮುಖ್ಯಮಂತ್ರಿ ಮತ್ತು ಒಂಬತ್ತು ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸುವ ಮೂಲಕ ಈ ಎಲ್ಲಾ ವದಂತಿಗಳಿಗೆ ವಿಜಯ್ ಪೂರ್ಣವಿರಾಮ ಹಾಕಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಯಾವುದೇ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದ್ದು, ದಳಪತಿ ವಿಜಯ್ ಅವರು ಒಬ್ಬರೇ ಸಾರಥಿಯಾಗಿ ತಮಿಳುನಾಡನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರು ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ತಮಿಳುನಾಡು ಇನ್ನು ಮುಂದೆ ‘ದಳಪತಿ’ಯ ಆಡಳಿತದಲ್ಲಿ ಹೊಸ ದಿಕ್ಕಿನತ್ತ ಸಾಗಲಿದ್ದು, ಜನರ ನಿರೀಕ್ಷೆಗಳು ಗಗನಕ್ಕೇರಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:17 am, Sun, 10 May 26

Follow Us