AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಅವನ ಸಹಚರನನ್ನು ಸಿನಿಮೀಯ ಶೈಲಿಯಲ್ಲಿ ಸುತ್ತುವರಿದು ಕೊಂದ ಪೊಲೀಸರು

ಕಾಶ್ಮೀರ ಪೊಲೀಸ್ ಮೂಲಗಳ ಪ್ರಕಾರ ಶೇಖ್ ಮತ್ತವನ ಸಹಚರ ಸಾಕಿಬ್ ಮಂಜೂರ್ ಅಲೂಚಿ ಬಾಗ್ ಪ್ರದೇಶದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಫ್ತಿಯಲ್ಲಿ ಅಲ್ಲಿಗೆ ಧಾವಿಸಿ ಉಗ್ರರು ದಿಗ್ಭ್ರಮೆಗೊಳ್ಳುವಂತೆ ಮಾಡಿದರು.

ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಅವನ ಸಹಚರನನ್ನು ಸಿನಿಮೀಯ ಶೈಲಿಯಲ್ಲಿ ಸುತ್ತುವರಿದು ಕೊಂದ ಪೊಲೀಸರು
ಅಬ್ಬಾಸ್ ಶೇಖ್​ ಮತ್ತು ಸಾಕಿಬ್ ಮಂಜೂರ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 24, 2021 | 12:08 AM

Share

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರದಂದು ನಡೆಸಿದ ಸಿನಿಮೀಯ ಶೈಲಿ ಕಾರ್ಯಾಚರಣೆಯೊಂದರಲ್ಲಿ ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಅಬ್ಬಾಸ್ ಶೇಖ್ ಹಾಗೂ ಅವನ ಸಹರನೊಬ್ಬನನ್ನು ಕೊಂದಿದ್ದಾರೆ. ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಅಗಿದ್ದ ಶೇಖ್ ಮತ್ತು ಅವನೊಂದಿಗಿದ್ದ ಮತ್ತೊಬ್ಬನನ್ನು ಮಫ್ತಿಯಲ್ಲಿದ್ದ ಪೊಲೀಸರು ಗುಂಡಿಟ್ಟು ಕೊಂದರು. ಕೇಂದ್ರಾಡಳಿತ ಪ್ರದೇಶ ರಾಜಧಾನಿಯ ಅಲೂಚಿ ಬಾಗ್ ಪ್ರದೇಶದಲ್ಲಿ ಸಾದಾ ಉಡುಪಿನಲ್ಲಿದ್ದ 10 ಜನ ಪೊಲೀಸರು ಉಗ್ರರನ್ನು ಸುತ್ತುವರಿದು ಕೊಂದು ಹಾಕಿದರು.

ಕಾಶ್ಮೀರ ಪೊಲೀಸ್ ಮೂಲಗಳ ಪ್ರಕಾರ ಶೇಖ್ ಮತ್ತವನ ಸಹಚರ ಸಾಕಿಬ್ ಮಂಜೂರ್ ಅಲೂಚಿ ಬಾಗ್ ಪ್ರದೇಶದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಫ್ತಿಯಲ್ಲಿ ಅಲ್ಲಿಗೆ ಧಾವಿಸಿ ಉಗ್ರರು ದಿಗ್ಭ್ರಮೆಗೊಳ್ಳುವಂತೆ ಮಾಡಿದರು. ಅವರು ಪ್ರತಿಕ್ರಿಯೆ ತೋರುವ ಮೊದಲೇ ಪೊಲೀಸರು ಗುಂಡು ಹಾರಿಸಿ ಅವರನ್ನು ನೆಲಕ್ಕುರುಳಿಸಿದರು.

ಅಬ್ಬಾಸ್ ಶೇಖ್, ‘ದಿ ರೆಸಿಸ್ಟನ್ಸ್ ಫ್ರಂಟ್ನ’ ಸ್ವಘೋಷಿತ ನಾಯಕನಾಗಿದ್ದ. ‘ಅವನ ಬಗ್ಗೆ ನಮಗೆ ಮಾಹಿತಿ ಸಿಕ್ಕ ಕೂಡಲೇ, ಸಾದಾ ಉಡುಪಿನಲ್ಲಿದ್ದ ಶ್ರೀನಗರ ಪೊಲೀಸ್​ನ 10 ಜವಾನರು ಅವರನ್ನು ಸುತ್ತುವರಿದರು. ಅವರನ್ನು ಮೊದಲು ಪ್ರಚೋದಿಸಿ ನಂತರ ಗುಂಡು ಹಾರಿಸಿ ಕೊಲ್ಲಲಾಯಿತು,’ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ವಿಜಯ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ವರದಿಗಳ ಪ್ರಕಾರ ದಿ ರೆಸಿಸ್ಟನ್ಸ್ ಫ್ರಂಟ್ ಸಂಘಟನೆಯು ಲಷ್ಕರ್-ಎ-ತೊಯ್ಬಾದ ಪ್ರತಿರೂಪ ಔಟ್ಫಿಟ್ ಆಗಿದೆ. ಕಾರ್ಯಾಚರಣೆಯನ್ನು ‘ಭರ್ಜರಿ ಯಶಸ್ಸು’ ಎಂದು ಬಣ್ಣಿಸಿದ ಪೊಲೀಸರು ಶೇಖ್ ಮತ್ತು ಮಂಜೂರ್ ಸದರಿ ಪ್ರದೇಶದಲ್ಲಿ ಅವ್ಯಾಹತವಾಗಿ ಉಗ್ರ ಚಟುವಟಿಕಗಳನ್ನು ನಡೆಸುತ್ತಿದ್ದರು. ಅನೇಕ ಜನರನ್ನು ಕೊಂದಿದ್ದೂ ಅಲ್ಲದೆ, ಅಲ್ಲಿನ ಯುವಕರನ್ನು ದಾರಿ ತಪ್ಪಿಸಿ ತಮ್ಮ ಸಂಘಟನೆ ಸೇರುವಂತೆ ಪ್ರೇರೇಪಿಸುತ್ತಿದ್ದರು, ಅಂತ ಹೇಳಿದ್ದಾರೆ.

46 ವರ್ಷ ವಯಸ್ಸಿನವನಾಗಿದ್ದ ಶೇಖ್ ಸುದೀರ್ಘ ಕಾಲದಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಮತ್ತ್ತು ಪೊಲೀಸ್ ಹಾಗೂ ಭದ್ರತಾ ದಳದ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವಲ್ಲಿ ಯಶ ಕಂಡಿದ್ದ. ಮೊದಲು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಕೆಲಸ ಮಾಡುತ್ತಿದ್ದ ಅವನು ಬಳಿಕ ಲಷ್ಕರ್-ಎ ತೊಯ್ಬಾಗೆ ಸೇರಿ ಸುಮಾರು ಎರಡು ವರ್ಷಗಳ ಹಿಂದೆ ದಿ ರೆಸಿಸ್ಟನ್ಸ್ ಫ್ರಂಟ್ ಹುಟ್ಟು ಹಾಕಿ ತಾನೇ ಅದರ ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದ.

ಸ್ನಾತಕೋತ್ತರ ಪದವೀಧರನಾಗಿದ್ದ ಮಂಜೂರ್ ದಿ ರೆಸಿಸ್ಟನ್ಸ್ ಫ್ರಂಟ್ನಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದನೆಂದು ಹೇಳಲಾಗುತ್ತದೆ. ಶೇಕ್ನ ಅಣತಿ ಮೇರೆಗೆ ಶ್ರೀನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಜನರನ್ನು ಅವನು ಕೊಂದಿದ್ದ.

ಇದನ್ನೂ ಓದಿ: ಭಯೋತ್ಪಾದಕರ ಗುಂಡಿಗೆ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಕಾರ್ಯಕರ್ತ ಬಲಿ, ಹೆಚ್ಚುತ್ತಿವೆ ಉಗ್ರರ ದಾಳಿಗಳು