
ಶ್ರೀನಗರ, (ಏಪ್ರಿಲ್ 22): ಜಮ್ಮುಕಾಶ್ಮೀರದ (jammu kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam) ಇಂದು (ಏಪ್ರಿಲ್ 22) ಪ್ರವಾಸಿಗರ ಮೇಲೆ ಟೆರರ್ ಅಟ್ಯಾಕ್ ನಡೆದಿದೆ. ಹನಿಮೂನ್ಗೆ ಹೋದವರ ಮೇಲೂ ಭಯೋತ್ಪಾದಕರು ಮನಸೋ ಇಚ್ಚೆ ಗುಂಡಿನ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಈ ವರೆಗೆ ಬಂದ ಮಾಹಿತಿ ಪ್ರಕಾರ ಓರ್ವ ಕನ್ನಡಿಗ ಸೇರಿದಂತೆ 20ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಲಷ್ಕರ್ ಉಗ್ರ ಸಂಘಟನೆಯ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಲಷ್ಕರ್-ಎ-ತೊಯ್ಬಾದ ಅಂಗ ಎಂದು ಕರೆಯಲ್ಪಡುವ ಟಿಆರ್‌ಎಫ್ ಅಥವಾ ದಿ ರೆಸಿಸ್ಟೆನ್ಸ್ ಫೋರ್ಸ್ (The Resistance Front) ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬಳಿಕ ಈ ದಿ ರೆಸಿಸ್ಟೆನ್ಸ್ ಫ್ರಂಟ್ ಅಸ್ತಿತ್ವಕ್ಕೆ ಬಂದಿದೆ. ಈ ಭಯೋತ್ಪಾದಕ ಸಂಘಟನೆ ಯಾವುದು? ಏನು? ಎತ್ತ ಎನ್ನುವ ವಿವರ ಈ ಕೆಳಗಿನಂತಿದೆ.
2023ರ ಸೆಪ್ಟೆಂಬರ್ನಲ್ಲಿ ಜಂಟಿ ಸೇನಾ-ಪೊಲೀಸ್ ತಂಡದ ಮೇಲಿ ಇದೇ ಲಷ್ಕರ್‌ನ ರೆಸಿಸ್ಟೆನ್ಸ್ ಫೋರ್ಸ್ ದಾಳಿ ಮಾಡಿತ್ತು.ಈ ಭಯೋತ್ಪಾದಕ ಸಂಘಟನೆಯು 2019 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆಯಾಗಿದೆ. ಈ ಸಂಘಟನೆಯು ಯುವಕರನ್ನು ದಾರಿತಪ್ಪಿಸಿ ಭಯೋತ್ಪಾದಕ ಸಂಘಟನೆಗಳಲ್ಲಿ ತೊಡಗಿಸುವ ಕೆಲಸ ಮಾಡುತ್ತಾ ಬಂದಿದೆ.
ಸಾಜಿದ್ ಜಟ್, ಸಜ್ಜದ್ ಗುಲ್ ಮತ್ತು ಸಲೀಂ ರೆಹಮಾನಿ ಈ ಸಂಘಟನೆಯ ಪ್ರಮುಖರಾಗಿದ್ದಾರೆ. ಇವರೆಲ್ಲರೂ ಎಲ್‌ಇಟಿ ಜೊತೆ ಸಂಬಂಧ ಹೊಂದಿದ್ದಾರೆ. ಪ್ರಾರಂಭದಿಂದಲೂ, ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಪ್ರತಿನಿಧಿ ಎಂದು ಪರಿಗಣಿಸಲಾದ ಟಿಆರ್‌ಎಫ್, ಪ್ರವಾಸಿಗರು, ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರು ಮತ್ತು ಕಣಿವೆಯ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ. ಇದೀಗ ಅಮರನಾಥ ಯಾತ್ರೆ ಜುಲೈನಲ್ಲಿ ಪ್ರಾರಂಭವಾಗುವ ಸಮಯದಲ್ಲೇ ಈ ದಾಳಿ ಕೃತ್ಯ ಎಸಗಿದೆ.
ಈ ಸಂಘಟನೆಯು ಮತ್ತಷ್ಟು ಭಯೋತ್ದಾದಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಆನ್ಲೈನ್ ಮಾಧ್ಯಮವನ್ನು ಬಳಸಿಕೊಂಡು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಜನರನ್ನು ಅವರ ದೇಶದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸುವ ಕೆಲಸವನ್ನು ಟಿಆರ್‌ಎಫ್ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುತ್ತಿದೆ.
ಭದ್ರತಾ ಪಡೆ ಸಿಬ್ಬಂದಿ ಮತ್ತು ಜಮ್ಮು ಕಾಶ್ಮೀರದ ಅಮಾಯಕ ನಾಗರಿಕರ ಹತ್ಯೆ ಯೋಜನೆ, ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವುದಕ್ಕೆ ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ಸಾಗಣೆ ಸೇರಿದಂತೆ ಮುಂತಾದ ವಿಷಯಗಳಲ್ಲಿ ಈ ಟಿಆರ್‌ಎಫ್ ಸದಸ್ಯರು ಮತ್ತು ಸಹಚರರು ಕೆಲಸ ಭಾಗಿಯಾಗಿದ್ದಾರೆ. ಈ ಸಂಬಂಧ ಹಲವು ಪ್ರಕರಣಗಳಿವೆ ಎಂದು ಭಾರತ ಗೃಹ ಇಲಾಖೆ ತಿಳಿಸಿದೆ.
ಪಾಕಿಸ್ತಾನ ಮೂಲದ ಟಿಆರ್‌ಎಫ್ ಸಂಘಟನೆಯನ್ನು ಉಗ್ರ ಸಂಘಟನೆ ಎಂದು 2023ರಲ್ಲೇ ಕೇಂದ್ರ ಸರ್ಕಾರ ಘೋಷಿಸಿತ್ತು. ಮಾತ್ರವಲ್ಲದೆ, ಈ ಸಂಘಟನೆಯ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರನೆಂದು ಕೇಂದ್ರ ಗೃಹ ಇಲಾಖೆ ಘೋಷಿಸಿತ್ತು. ಗೃಹ ವ್ಯವಹಾರಗಳ ಸಚಿವಾಲಯ (MHA) ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (Lashkar-e-Taiba) ನಿಷೇಧಿತ ಭಯೋತ್ಪಾದಕ ಸಂಘಟನೆಯ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಮತ್ತು ಅದರ ಅಡಿ ಇರುವ ಇತರೆ ಸಂಘಟನೆಗಳನ್ನು ನಿಷೇಧಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಸಚಿವಾಲಯವು ಅವುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿತ್ತು. ಕಾಶ್ಮೀರ ಪಂಡಿತರ ಹತ್ಯೆಗೆ ಟಿಆರ್‌ಎಫ್ ಉಗ್ರ ಸಂಘಟನೆ ಬೆದರಿಕೆ ಹಾಕಿತ್ತು.ಈ ಸಂಘಟನೆ ಒಂದಲ್ಲ ಒಂದು ದುಷ್ಕೃತ್ಯ ಎಸಗುತ್ತಲೇ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Tue, 22 April 25