TRF Terrorist organization: ಟಿಆರ್‌ಎಫ್ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿದ ಕೇಂದ್ರ ಸರ್ಕಾರ
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸಲಾಗಿದೆ. ಈ ಉಗ್ರ ಸಂಘಟನೆಯು ಎಲ್‌ಇಟಿ ಭಯೋತ್ಪಾದಕ ಸಂಘಟನೆಯ ಒಂದು ಶಾಖೆಯಾಗಿದೆ.
ದೆಹಲಿ: ಪಾಕಿಸ್ತಾನ ಮೂಲದ ಟಿಆರ್‌ಎಫ್ (The Resistance Front) ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಮಾತ್ರವಲ್ಲದೆ, ಈ ಸಂಘಟನೆಯ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರನೆಂದು ಕೇಂದ್ರ ಗೃಹ ಇಲಾಖೆ ಘೋಷಿಸಿದೆ. ಗೃಹ ವ್ಯವಹಾರಗಳ ಸಚಿವಾಲಯ (MHA) ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (Lashkar-e-Taiba) ನಿಷೇಧಿತ ಭಯೋತ್ಪಾದಕ ಸಂಘಟನೆಯ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಮತ್ತು ಅದರ ಅಡಿ ಇರುವ ಇತರೆ ಸಂಘಟನೆಗಳನ್ನು ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಸಚಿವಾಲಯವು ಅವುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿದೆ. ಕಾಶ್ಮೀರ ಪಂಡಿತರ ಹತ್ಯೆಗೆ ಟಿಆರ್‌ಎಫ್ ಉಗ್ರ ಸಂಘಟನೆ ಬೆದರಿಕೆ ಹಾಕಿತ್ತು.
“TRFನ ಚಟುವಟಿಕೆಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಹಾನಿಕಾರಕವಾಗಿದೆ” ಎಂದು ಉಲ್ಲೇಖಿಸಿ ಗೃಹ ವ್ಯವಹಾರಗಳ ಸಚಿವಾಲಯವು ಅಧಿಸೂಚನೆಯ ಮೂಲಕ ಘೋಷಣೆ ಮಾಡಿದೆ. ಅಧಿಸೂಚನೆಯ ಪ್ರಕಾರ, ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು, ಭಯೋತ್ಪಾದಕರ ನೇಮಕಾತಿ, ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಆನ್‌ಲೈನ್ ಮಾಧ್ಯಮದ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Air India ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆ ಬೆಳಕಿಗೆ
1967 ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಾಲ್ಕನೇ ಶೆಡ್ಯೂಲ್ ಅಡಿಯಲ್ಲಿ TRFನ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾಗಿ 2019 ರಲ್ಲಿ ಅಸ್ತಿತ್ವಕ್ಕೆ ಬಂದ TRF, ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳಿಗೆ ಆನ್‌ಲೈನ್ ಮಾಧ್ಯಮವನ್ನು ಬಳಸಿಕೊಂಡು ಯುವಕರನ್ನು ನೇಮಿಸಿಕೊಳ್ಳುತ್ತಿದೆ ಎಂದು ಸಚಿವಾಲಯವು ತಿಳಿಸಿದೆ.
“ಜಮ್ಮು ಮತ್ತು ಕಾಶ್ಮೀರದ ಜನರನ್ನು ಭಾರತೀಯ ರಾಜ್ಯದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ TRF ಮಾನಸಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ. ಭದ್ರತಾ ಪಡೆ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಅಮಾಯಕ ನಾಗರಿಕರ ಹತ್ಯೆಗಳ ಯೋಜನೆ, ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಲು ಶಸ್ತ್ರಾಸ್ತ್ರಗಳನ್ನು ಸಹ-ಸಂಯೋಜಕ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಟಿಆರ್‌ಎಫ್ ಸದಸ್ಯರು ಮತ್ತು ಸಹಚರರ ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Fri, 6 January 23