ಪ್ರವೇಶ ನಿರಾಕರಿಸಿದ್ದಕ್ಕೆ ತಿರುಪತಿ ಏರ್​ಪೋರ್ಟ್​ಗೆ ನೀರು ಪೂರೈಕೆ ಸ್ಥಗಿತಗೊಳಿಸಿದ ಆಂಧ್ರ ಶಾಸಕನ ಪುತ್ರ?!-ಆರೋಪಕ್ಕಿಲ್ಲ ಪ್ರತಿಕ್ರಿಯೆ

ವೈಎಸ್​ಆರ್​ಸಿಪಿ ಮುಖಂಡರು ರೇಣಿಗುಂಟಾ ಏರ್​ಪೋರ್ಟ್ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ತುಂಬ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಯಾವುದೇ ಶಿಷ್ಟಾಚಾರಗಳನ್ನೂ ಪಾಲನೆ ಮಾಡುತ್ತಿಲ್ಲ ಎಂದಿದ್ದಾರೆ.

ಪ್ರವೇಶ ನಿರಾಕರಿಸಿದ್ದಕ್ಕೆ ತಿರುಪತಿ ಏರ್​ಪೋರ್ಟ್​ಗೆ ನೀರು ಪೂರೈಕೆ ಸ್ಥಗಿತಗೊಳಿಸಿದ ಆಂಧ್ರ ಶಾಸಕನ ಪುತ್ರ?!-ಆರೋಪಕ್ಕಿಲ್ಲ ಪ್ರತಿಕ್ರಿಯೆ
ತಿರುಪತಿ ಏರ್​ಪೋರ್ಟ್

ತಿರುಪತಿ ಏರ್​ಪೋರ್ಟ್​​ನೊಳಗೆ ಹೋಗಲು ತಮಗೆ ಅಲ್ಲಿನ ಸಿಬ್ಬಂದಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕನ ಪುತ್ರನೊಬ್ಬ ವಿಭಿನ್ನ ರೀತಿಯಲ್ಲಿ ಸೇಡುತೀರಿಸಿಕೊಂಡ ಆರೋಪ ಕೇಳಿಬಂದಿದೆ. ಆಂಧ್ರಪ್ರದೇಶದ ಶಾಸಕ ಬಿ.ಕರುಣಾಕರ್​ ರೆಡ್ಡಿ ಪುತ್ರ ಅಭಿನಯ್​ ರೆಡ್ಡಿ ತಿರುಪತಿಯ ಡೆಪ್ಯೂಟಿ ಮೇಯರ್​. ಇವರು ಹಾಗೂ ತಿರುಪತಿ ಏರ್​ಪೋರ್ಟ್ ಮ್ಯಾನೇಜರ್​ ಸುನಿಲ್​ ನಡುವೆ ವಾಗ್ವಾದ ನಡೆದಿತ್ತು. ಅದರ ಮರುದಿನ ತಿರುಪತಿ ಏರ್​ಪೋರ್ಟ್​ ಮತ್ತು ಅಲ್ಲಿನ ಸಿಬ್ಬಂದಿಯ ವಸತಿ ಗೃಹಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.  ತನ್ನನ್ನು ಏರ್​ಪೋರ್ಟ್​​ನೊಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ನೀರು ಪೂರೈಕೆಯನ್ನು ಅಭಿನಯ್​ ರೆಡ್ಡಿಯೇ ಕಡಿತಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರದ್ದೇ ಹೇಳಿಕೆಯೂ ಲಭ್ಯವಾಗಿಲ್ಲ ಎಂದು ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖಿಸಿದೆ. 

ತಿರುಪತಿಯ ರೇಣಿಗುಂಟಾ ವಿಮಾನ ನಿಲ್ದಾಣವನ್ನು ಭಾರತದ ಏರ್​ಪೋರ್ಟ್ ಪ್ರಾಧಿಕಾರ ನಿರ್ವಹಿಸುತ್ತಿದೆ. ಅಭಿನಯ್​ ರೆಡ್ಡಿ ಆಂಧ್ರಪ್ರದೇಶದ ಸಚಿವ ಬೋತ್ಸಾ ಸತ್ಯನಾರಾಯಣರ್​​ರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ತಿರುಪತಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯಮಟ್ಟದ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಈ ಸಚಿವರು ಬಂದಿದ್ದರು. ಸಚಿವರೊಟ್ಟಿಗೆ ತಿರುಪಲ ತಿರುಪತಿ ದೇವಸ್ಥಾನಂ (TTD)ಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಕೂಡ ಇದ್ದರು. ಇವರಿಬ್ಬರನ್ನೂ ಸ್ವಾಗತಿಸಿ, ಕರೆದುಕೊಂಡು ಬರಲು ಅಭಿನಯ್​ ರೆಡ್ಡಿ, ತನ್ನ ಸಹಾಯಕರೊಂದಿಗೆ ಅಲ್ಲಿಗೆ ತೆರಳಿದ್ದರು.

ಆದರೆ ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್​ ಸುನೀಲ್​, ಅಭಿನಯ್​ ಮತ್ತು ಅವರ ಸಹಾಯಕರಿಗೆ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದಾಗಿ ಅಲ್ಲಿ ಜಗಳವೂ ನಡೆಯಿತು. ಅಭಿನಯ್​ ರೆಡ್ಡಿ ಮತ್ತು ಏರ್​ಪೋರ್ಟ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದ ಕೆಲವೇ ಹೊತ್ತಲ್ಲಿ, ಏರ್​ಪೋರ್ಟ್ ಮತ್ತು ಅಲ್ಲಿನ ಸಿಬ್ಬಂದಿ ವಾಸವಾಗಿರುವ ವಸತಿ ಗೃಹಕ್ಕೆ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಇದಕ್ಕೆ ಅಭಿನಯ್​ ರೆಡ್ಡಿಯೇ ಕಾರಣ ಎಂದು ಅಲ್ಲಿನವರು ಆರೋಪಿಸಿದ್ದಾರೆ. ಆದರೆ ಮುನ್ಸಿಪಲ್ ಆಡಳಿತ ಇದನ್ನು ನಿರಾಕರಿಸಿದ್ದು, ನೀರಿನ ಪೈಪ್​ಲೈನ್​ ಬ್ಲಾಕ್​ ಆಗಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ಹೇಳಿದೆ.

ಇನ್ನೊಂದೆಡೆ ವೈಎಸ್​ಆರ್​ಸಿಪಿ ಮುಖಂಡರು ರೇಣಿಗುಂಟಾ ಏರ್​ಪೋರ್ಟ್ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ತುಂಬ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಯಾವುದೇ ಶಿಷ್ಟಾಚಾರಗಳನ್ನೂ ಪಾಲನೆ ಮಾಡುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಟ್ವೀಟ್ ಮಾಡಿರುವ ಆಂಧ್ರ ಪ್ರತಿಪಕ್ಷ ನಾಯಕ ತೆಲುಗು ದೇಸಂ ಪಾರ್ಟಿ (TDP) ಪ್ರಧಾನ ಕಾರ್ಯದರ್ಶಿ ನರ ಲೋಕೇಶ್​, ವಿಮಾನ ನಿಲ್ದಾಣ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿರುವುದು ವೈಎಸ್ ಆರ್ ಸಿಪಿಯ ಅರಾಜಕ ಆಡಳಿತವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಸದ್ಯ ಏರ್​ಪೋರ್ಟ್ ಅಧಿಕಾರಿಗಳಾಗಲಿ, ಮುನ್ಸಿಪಲ್​ ಆಡಳಿತದ ಅಧಿಕಾರಿಗಳಾಗಲೀ ಮೌನವಾಗಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮತ್ತೊಬ್ಬ ಶಾಸಕ; ಮೂರು ದಿನಗಳಲ್ಲಿ ಕಮಲ ಪಕ್ಷ ಕಳೆದುಕೊಂಡಿದ್ದು 7, ಗಳಿಸಿದ್ದು 2 !

Click on your DTH Provider to Add TV9 Kannada