ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಮೂರನೇ ಸಭೆ
ಇಂದು ಮುಂಬೈನಲ್ಲಿ ನಡೆದ ಮಹಾ ವಿಕಾಸ್ ಅಘಾಡಿ ಸಭೆಯ ನಂತರ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ಗ್ರ್ಯಾಂಡ್ ಹಯಾತ್‌ನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಕನಿಷ್ಠ ಐವರು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಕೂಡ ಉಪಸ್ಥಿತರಿರುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಆಗಸ್ಟ್ 05: ಹೊಸದಾಗಿ ರೂಪುಗೊಂಡಿರುವ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾದ (I.N.D.I.A) ಮೂರನೇ ಸಭೆಯು ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ ಎಂದು ಕಾಂಗ್ರೆಸ್ (Congress) ಮತ್ತು ಶಿವಸೇನಾ ಉದ್ಧವ್ ಠಾಕ್ರೆ (Uddhav Thackeray) ಬಣ ಇಂದು (ಶನಿವಾರ) ಘೋಷಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸಂಸದ ಸ್ಥಾನವನ್ನು ಮರುಸ್ಥಾಪಿಸಲು ಸುಪ್ರೀಂಕೋರ್ಟ್ ದಾರಿ ಮಾಡಿಕೊಟ್ಟ ಒಂದು ದಿನದ ನಂತರ ಈ ಘೋಷಣೆ ಬಂದಿದ್ದು, ಈ ಸಭೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಪಕ್ಷ ಹೇಳಿದೆ.
ಇಂದು ಮುಂಬೈನಲ್ಲಿ ನಡೆದ ಮಹಾ ವಿಕಾಸ್ ಅಘಾಡಿ ಸಭೆಯ ನಂತರ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, “ಗ್ರ್ಯಾಂಡ್ ಹಯಾತ್‌ನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಕನಿಷ್ಠ ಐವರು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಕೂಡ ಉಪಸ್ಥಿತರಿರುತ್ತಾರೆ. ಸಭೆಯು ಆಗಸ್ಟ್ 31 ರಂದು ಪ್ರಾರಂಭವಾಗುತ್ತದೆ. ಅಂದು ಸಂಜೆ ಭೋಜನವನ್ನು ಆಯೋಜಿಸಲಾಗುವುದು. ಇದನ್ನು ಉದ್ಧವ್ ಠಾಕ್ರೆ ಆಯೋಜಿಸುತ್ತಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದು ಎಂದು ಕಾಂಗ್ರೆಸ್ ಮಹಾರಾಷ್ಟ್ರ ಮುಖ್ಯಸ್ಥ ನಾನಾ ಪಟೋಲೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಸಭೆ ಹೆಚ್ಚಿನ ಮಹತ್ವ ಪಡೆದಿದೆ.
ಜೂನ್ 23 ರಂದು ಪಾಟ್ನಾದಲ್ಲಿ 16 ವಿರೋಧ ಪಕ್ಷಗಳ ಮೊದಲ ಮೆಗಾ ಸಭೆ ನಡೆಯಿತು. ಅದರ ನಂತರ ಜುಲೈ 17-18 ರಂದು ಬೆಂಗಳೂರಿನಲ್ಲಿ 26 ಪಕ್ಷಗಳ ಸಭೆ ನಡೆಯಿತು, ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ನೀಡಲಾಯಿತು.
ಇದನ್ನೂ ಓದಿ: ಆರ್ಜೆಡಿ ನಾಯಕರನ್ನು ಭೇಟಿ ಮಾಡಿ ಲಾಲು ಪ್ರಸಾದ್ ಯಾದವ್ ತಯಾರಿಸಿದ ಮಟನ್ ಊಟ ಸವಿದ ರಾಹುಲ್ ಗಾಂಧಿ
ಬೆಂಗಳೂರು ಸಭೆಯ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೈತ್ರಿಗಾಗಿ 11 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಮುಂದಿನ ಸಭೆಯಲ್ಲಿ ಸಂಚಾಲಕರನ್ನು ಹೆಸರಿಸಲಾಗುವುದು ಎಂದು ಹೇಳಿದರು.
ಶುಕ್ರವಾರ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಯಾದವ್ ಅವರನ್ನು ಭೋಜನಕ್ಕೆ ಭೇಟಿಯಾದರು. ಇಲ್ಲಿ ಇಂಡಿಯಾದ ಮುಂದಿನ ಹಾದಿಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ