Tirupati Security Breach: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ, ಗೋಪುರ ಏರಿ ಕುಡುಕನಿಂದ ಅವಾಂತರ
ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಕುಡುಕನೊಬ್ಬ ಕಂಪೌಂಡ್ ಹಾರಿ ಒಳನುಗ್ಗಿ ಗೋಪುರ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುಮಾರು ಮೂರು ಗಂಟೆಗಳ ಕಾರ್ಯಾರಣೆ ನಡೆಸಿ ಭದ್ರತಾ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ವಶಕ್ಕೆ ಪಡೆದಿದ್ದಾರೆ. ಈ ಭದ್ರತಾ ಲೋಪ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಿರುಪತಿ, ಜನವರಿ 3: ತಿರುಪತಿ ದೇಗುಲದಲ್ಲಿ (Tirupati Temple) ಭಾರಿ ಭದ್ರತಾ ಲೋಪ ಉಂಟಾಗಿದ್ದು, ಕುಡುಕನೊಬ್ಬ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿದ್ದಲ್ಲದೆ ಗೋಪುರ ಏರಿ ಅವಾಂತರ ಸೃಷ್ಟಿಸಿದ್ದಾನೆ. ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ (Govindaraja Swamy Temple) ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೀಪುರ ಏರಿದ್ದಾನೆ. ನಂತರ ಅಲ್ಲಿದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಇದು ದೇಗುಲದ ಸಿಬ್ಬಂದಿ ಮತ್ತು ಭಕ್ತರಲ್ಲಿ ಭಯ ಹುಟ್ಟಿಸಿತು. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು.
ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಪೊಲೀಸರ ಬಳಿ ಮದ್ಯದ ಬಾಟಲ್ ಕೇಳಿದ ಕುಡುಕ!
ಮದ್ಯದ ಅಮಲಿನಲ್ಲಿ ದೇಗುಲದ ಗೋಪುರವನ್ನು ಏರಿದ ವ್ಯಕ್ತ ಕೆಳಗಿಳಿಯಲು ನಿರಾಕರಿಸಿದ್ದಾನೆ. ಅಲ್ಲದೆ, ಪೊಲೀಸರು ತನಗೆ ಮದ್ಯದ ಬಾಟಲ್ ನೀಡಬೇಕೆಂದು ಒತ್ತಾಯಿಸಿದ್ದಾನೆ. ತಿರುಪತಿ ಪೂರ್ವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಸಲು ಶ್ರಮಿಸಿದರು. ಅಪಾಯಕಾರಿ ಪರಿಸ್ಥಿತಿಯ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳನ್ನು ಬಳಸಿ, ಹಗ್ಗಗಳ ಸಹಾಯದಿಂದ ಆತನನ್ನು ಗೋಪುರದ ಮೇಲಿನಿಂದ ಕೆಳಕ್ಕೆ ಕರೆತಂದರು. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.
ಇದನ್ನೂ ಓದಿ: ಹಿಮಾಚಲ ಪ್ರದೇಶದ ಪೊಲೀಸ್ ಸ್ಟೇಷನ್ ಬಳಿ ಭಾರೀ ಸ್ಫೋಟ
ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Sat, 3 January 26




