ಭದ್ರತಾ ಪಡೆ ನಡೆಸಿದ ಬಹುದೊಡ್ಡ ಕಾರ್ಯಚರಣೆ: ಗುಂಡಿನ ಚಕಮಕಿಯಲ್ಲಿ 14 ಮಾವೋವಾದಿಗಳು ಸಾವು
ದಕ್ಷಿಣ ಛತ್ತೀಸ್‌ಗಢದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಸಶಸ್ತ್ರ ಮಾವೋವಾದಿಗಳು ಹತರಾಗಿದ್ದಾರೆ. ಇದು 2024ರ ಮೊದಲ ಪ್ರಮುಖ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದೆ. ಘಟನಾ ಸ್ಥಳಗಳಿಂದ ಎಕೆ-47 ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ಭದ್ರತಾ ಸಿಬ್ಬಂದಿಗೆ ಹಾನಿಯಾಗಿಲ್ಲ. ಮಾವೋವಾದ ಮುಕ್ತ ಭಾರತದ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ.

ರಾಯ್‌ಪುರ, ಜ.3: ದಕ್ಷಿಣ ಛತ್ತೀಸ್‌ಗಢದ (Chhattisgarh Maoist) ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಸಶಸ್ತ್ರ ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಇದು 2026 ರ ಮೊದಲ ಪ್ರಮುಖ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜಾಪುರದ ಬಸಗುಡ-ಟಾರೆಮ್ ಅರಣ್ಯ ಪ್ರದೇಶ ಮತ್ತು ಸುಕ್ಮಾದ ಕೊಂಟಾ-ಕಿಸ್ತಾರಾಮ್ ಕಾಡುಗಳಲ್ಲಿ ಮಾವೋವಾದಿಗಳ ಓಡಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗುಪ್ತಚರ ಮಾಹಿತಿಯ ನಂತರ ರಾಯ್‌ಪುರದ ದಕ್ಷಿಣಕ್ಕೆ 450 ಕಿ.ಮೀ ದೂರದಲ್ಲಿ ಈ ಎನ್‌ಕೌಂಟರ್‌ಗಳು ನಡೆದಿದೆ.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ)ನ ಪ್ರತ್ಯೇಕ ತಂಡಗಳು ಆಯಾ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಶನಿವಾರ (ಜ.3) ಬೆಳಿಗ್ಗೆಯಿಂದ ನಿರಂತರ ಗುಂಡಿನ ಚಕಮಕಿ ನಡೆದಿದೆ. ಇದುವರೆಗೆ, ಸುಕ್ಮಾ ಎನ್‌ಕೌಂಟರ್ ಸ್ಥಳದಿಂದ 12 ಮಾವೋವಾದಿಗಳ ಮೃತದೇಹಗಳು ಮತ್ತು ಬಿಜಾಪುರದಿಂದ ಎರಡು ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಸ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.ಎನ್‌ಕೌಂಟರ್ ಸ್ಥಳಗಳಿಂದ ಎಕೆ -47, ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್, ಸೆಲ್ಫ್-ಲೋಡಿಂಗ್ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿಯ ಬಂಧನ
ಎರಡೂ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಈ ಕಾರ್ಯಚರಣೆಗಳಲ್ಲಿ ಭದ್ರತಾ ಪಡೆಗಳು ತೊಡಗಿಸಿಕೊಂಡಿರುವ ಕಾರಣ ಅವರ ಸುರಕ್ಷತೆಗಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಬಸ್ತಾರ್ ವಿಭಾಗದಲ್ಲಿ ಸುಕ್ಮಾ ಮತ್ತು ಬಿಜಾಪುರಗಳು ಹೆಚ್ಚು ಮಾವೋವಾದಿ ಪೀಡಿತ ಜಿಲ್ಲೆಗಳಾಗಿವೆ. ಈ ಹಿಂದೆ ದಕ್ಷಿಣ ಛತ್ತೀಸ್‌ಗಢದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುಗಳೆಂದು ಪರಿಗಣಿಸಲಾಗಿತ್ತು. ಈಗಾಗಲೇ 256 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 31, 2026 ರ ವೇಳೆಗೆ ಭಾರತ ಮಾವೋವಾದಿ ಹಿಂಸಾಚಾರದಿಂದ ಮುಕ್ತವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




