ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

ಪಶ್ಚಿಮ ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ ನಡೆದಿದೆ. ಈ ಘಟನೆಗೆ ಭಾರತೀಯ ಜನತಾ ಪಾರ್ಟಿ (BJP) ನೇರ ಕಾರಣ ಎಂದು ಮಹುವಾ ಮೊಯಿತ್ರಾ ಗಂಭೀರವಾಗಿ ಆರೋಪಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ಕೃಷ್ಣನಗರದ ವ್ಯಾಪ್ತಿಯಲ್ಲಿ ಸ್ಥಳೀಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ. ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ
Mahua Moitra
Image Credit source: PTI

Updated on: Jul 01, 2026 | 9:16 PM

ಕೊಲ್ಕತ್ತಾ, ಜುಲೈ 1: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಇಂದು ತಮ್ಮ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ತಾವು ಇದ್ದ ರೆಸ್ಟೋರೆಂಟ್‌ವೊಂದರ ಹೊರಗೆ ನೆರೆದಿದ್ದ ಗುಂಪೊಂದು ತಮ್ಮ ಮೇಲೆ ಮೊಟ್ಟೆಗಳನ್ನು ಎಸೆದಿದೆ ಎಂದು ಆರೋಪಿಸಿದ್ದಾರೆ. ಮಹುವಾ ಮೊಯಿತ್ರಾ ತಮ್ಮ ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಈ ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ಕೃತ್ಯಕ್ಕಾಗಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಪೊಲೀಸರು ಮೂಕಪ್ರೇಕ್ಷಕರಾಗಿ ಅಲ್ಲೇ ನಿಂತುಕೊಂಡು ನೋಡುತ್ತಿದ್ದಾಗ ಈ ದಾಳಿಯನ್ನು ಬಿಜೆಪಿ ನಡೆಸಿದೆ ಎಂದು ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

ತಮ್ಮ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ರೆಸ್ಟೋರೆಂಟ್​​ನಿಂದ ಹೊರಗೆ ಬರುವಾಗ ಅವರ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ. ಬಳಿಕ ಮಹುವಾ ಮೊಯಿತ್ರಾ ಅವರು ರೆಸ್ಟೋರೆಂಟ್ ಒಳಗೆ ಸ್ಥಳೀಯ ಟಿಎಂಸಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಕುಳಿತು ರೆಸ್ಟೋರೆಂಟ್‌ನ ಕಿಟಕಿಗಳಿಗೆ ಮೊಟ್ಟೆಗಳು ಬಂದು ಅಪ್ಪಳಿಸುತ್ತಿರುವುದನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ. ಕಿಟಕಿ ಗಾಜುಗಳಿಗೆ ಮೊಟ್ಟೆಗಳು ಬಂದು ಬೀಳುತ್ತಿದ್ದಂತೆ, ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದು ಮೊಯಿತ್ರಾ ಆರೋಪಿಸುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಆದರೆ ಈ ಆರೋಪಗಳಿಗೆ ಬಿಜೆಪಿ ತಕ್ಷಣದ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಬಿಜೆಪಿ ವಿರುದ್ಧ ಮಹುವಾ ಆಕ್ರೋಶ:

ಈ ದಾಳಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹುವಾ ಮೊಯಿತ್ರಾ, “ಇದು ಬಿಜೆಪಿಯ ಹತಾಶೆಯ ಪರಮಾವಧಿ. ಸಂಸತ್ತಿನಲ್ಲಾಗಲಿ ಅಥವಾ ಬೀದಿಯಲ್ಲಾಗಲಿ ನನ್ನ ಧ್ವನಿಯನ್ನು ಅಡಗಿಸಲು ಅವರಿಂದ ಸಾಧ್ಯವಿಲ್ಲ. ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದ ಹೇಡಿಗಳು ಇಂತಹ ಕೀಳು ಮಟ್ಟದ ದಾಳಿಗಳಿಗೆ ಇಳಿದಿದ್ದಾರೆ. ಪಶ್ಚಿಮ ಬಂಗಾಳದ ಜನತೆ ಇಂತಹ ಗೂಂಡಾಗಿರಿಯನ್ನು ಸಹಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.


ಘಟನೆ ನಡೆದಿದ್ದು ಹೇಗೆ?:

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹುವಾ ಮೊಯಿತ್ರಾ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ರೆಸ್ಟೋರೆಂಟ್‌ನಿಂದ ಹೊರಬಂದು ಕಾರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಅಲ್ಲಿ ಜಮಾಯಿಸಿದ್ದ ಕೆಲವು ಯುವಕರ ಗುಂಪು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಅವರತ್ತ ಮೊಟ್ಟೆಗಳನ್ನು ಎಸೆಯಲು ಪ್ರಾರಂಭಿಸಿತು. ಕೆಲವು ಮೊಟ್ಟೆಗಳು ಅವರ ವಾಹನಕ್ಕೆ ಮತ್ತು ಅವರ ಭದ್ರತಾ ಸಿಬ್ಬಂದಿಗೆ ತಗುಲಿವೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಟಿಎಂಸಿ ಕಾರ್ಯಕರ್ತರು ತಕ್ಷಣವೇ ಪ್ರತಿರೋಧ ಒಡ್ಡಿದಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ

ಟಿಎಂಸಿ ನಾಯಕರ ಮೇಲೆ ಪದೇಪದೆ ಮೊಟ್ಟೆ ದಾಳಿ:

ಕಳೆದ ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಬಿಜೆಪಿಗೆ ಸೋತು, ಮಮತಾ ಬ್ಯಾನರ್ಜಿ ಅವರ ಸರ್ಕಾರ ಪತನಗೊಂಡ ನಂತರ ಟಿಎಂಸಿ ನಾಯಕರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಭಾಗವಾಗಿ ಈ ಇತ್ತೀಚಿನ ಘಟನೆ ಸಂಭವಿಸಿದೆ.


ಜೂನ್ 7: ಮಿದ್ನಾಪುರದಲ್ಲಿ ಟಿಎಂಸಿ ನಾಯಕ ಸುಜಯ್ ಹಜ್ರಾ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಸ್ಥಳೀಯ ನಿವಾಸಿಗಳು ಮೊಟ್ಟೆಗಳನ್ನು ಎಸೆದಿದ್ದರು. ವಸತಿ ಯೋಜನೆಯಡಿ ಮನೆಗಳನ್ನು ಕೊಡಿಸುವುದಾಗಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಜನರು ಆರೋಪಿಸಿದ್ದರು.

ಅದೇ ದಿನ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಕರೆದೊಯ್ಯುತ್ತಿದ್ದ ಕೊಲ್ಕತ್ತಾದ ಕೌನ್ಸಿಲರ್‌ಗಳಾದ ಬಪ್ಪಾದಿತ್ಯ ದಾಸ್‌ಗುಪ್ತಾ ಮತ್ತು ಮೊಹಮ್ಮದ್ ಜಾಸಿಮುದ್ದೀನ್ ಅವರ ಮೇಲೂ ಮೊಟ್ಟೆಗಳನ್ನು ಎಸೆಯಲಾಗಿತ್ತು.

ಜೂನ್ 18 ಮತ್ತು 19: ಟಿಎಂಸಿ ಸಚಿವ ಉದಯನ್ ಗುಹಾ ಅವರನ್ನೂ ಇದೇ ರೀತಿ ಗುರಿ ಮಾಡಲಾಗಿತ್ತು. ಜೂನ್ 19ರಂದು ಅಸನ್ಸೋಲ್ ನ್ಯಾಯಾಲಯದ ಹೊರಗೆ ಟಿಎಂಸಿ ನಾಯಕ ವಿಜಯ್ ಸಿಂಗ್ ಅವರ ಮೇಲೆ ಪ್ರತಿಭಟನಾಕಾರರು “ಚೋರ್, ಚೋರ್” (ಕಳ್ಳ, ಕಳ್ಳ) ಎಂದು ಘೋಷಣೆ ಕೂಗುತ್ತಾ ಮೊಟ್ಟೆಗಳನ್ನು ಎಸೆದಿದ್ದರು.

ಮೇ 30: ಇದಕ್ಕಿಂತ ಮುಂಚೆ ಮೇ 30ರಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರಕ್ಕೆ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿಯಾಗಲು ತೆರಳಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿತ್ತು. ಪ್ರತಿಭಟನಾಕಾರರು ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ವಾಹನಗಳ ಮೇಲೆ ಮೊಟ್ಟೆ, ಕಲ್ಲು, ಶೂ ಮತ್ತು ಚಪ್ಪಲಿಗಳನ್ನು ಎಸೆದಿದ್ದರು. ಆ ನೂಕಾಟದಲ್ಲಿ ಅವರ ಶರ್ಟ್ ಹರಿದು ಹೋಗಿತ್ತು ಮತ್ತು ಕನ್ನಡಕಕ್ಕೆ ಹಾನಿಯಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us