ಭಾರತೀಯ ಸೇನೆಯ ದಿಟ್ಟ ಹೆಜ್ಜೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 35ರಷ್ಟು ಕಡಿಮೆಯಾದ ಉಗ್ರರ ಸಂಖ್ಯೆ

2019ಕ್ಕೆ ಹೋಲಿಸಿದರೆ 2020ರಲ್ಲಿ ಪಾಕಿಸ್ತಾನದಿಂದಾದ ಕದನ ವಿರಾಮ ಉಲ್ಲಂಘನೆ ಪ್ರಮಾಣ ಶೇ.27ರಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುವ ಸಲುವಾಗಿಯೇ ಕದನ ವಿರಾಮ ಉಲ್ಲಂಘಿಸುತ್ತಿದೆ ಎನ್ನುವುದೂ ಸ್ಪಷ್ಟ. ಆದರೆ, ಇಲ್ಲಿ ಪಾಕಿಸ್ತಾನ ಎಷ್ಟೇ ಹರಸಾಹಸಪಟ್ಟರೂ ಉಗ್ರರನ್ನು ಭಾರತಕ್ಕೆ ಕಳುಹಿಸಲು ನಮ್ಮ ಯೋಧರು ಅವಕಾಶ ನೀಡುತ್ತಿಲ್ಲ.

  • TV9 Web Team
  • Published On - 18:06 PM, 15 Jan 2021
ಭಾರತೀಯ ಸೇನೆಯ ದಿಟ್ಟ ಹೆಜ್ಜೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 35ರಷ್ಟು ಕಡಿಮೆಯಾದ ಉಗ್ರರ ಸಂಖ್ಯೆ
ಭಾರತೀಯ ಸೇನೆ

ದೆಹಲಿ: ಕಳೆದ ವರ್ಷ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯ ಪ್ರಮಾಣ ಹೆಚ್ಚಿದೆಯಾದರೂ ಅದಕ್ಕೆ ವ್ಯತಿರಿಕ್ತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ 2019ರಲ್ಲಿ ಇರುವುದಕ್ಕಿಂತಲೂ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸೇನೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

2019ಕ್ಕೆ ಹೋಲಿಸಿದರೆ 2020ರಲ್ಲಿ ಪಾಕಿಸ್ತಾನದಿಂದಾದ ಕದನ ವಿರಾಮ ಉಲ್ಲಂಘನೆ ಪ್ರಮಾಣ ಶೇ. 27ರಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುವ ಸಲುವಾಗಿಯೇ ಕದನ ವಿರಾಮ ಉಲ್ಲಂಘಿಸುತ್ತಿದೆ ಎನ್ನುವುದೂ ಸ್ಪಷ್ಟ. ಆದರೆ, ಇಲ್ಲಿ ಪಾಕಿಸ್ತಾನ ಎಷ್ಟೇ ಹರಸಾಹಸಪಟ್ಟರೂ ಉಗ್ರರನ್ನು ಭಾರತಕ್ಕೆ ಕಳುಹಿಸಲು ನಮ್ಮ ಯೋಧರು ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದಾಗಿಯೇ ಭಾರತದ ನೂತನ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ 2019ಕ್ಕಿಂತ 2020ರಲ್ಲಿ ಉಗ್ರರ ಪ್ರಮಾಣ ಶೇ. 35ರಷ್ಟು ಕಡಿಮೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 421 ಉಗ್ರರು ಇದ್ದರು. 2020ರಲ್ಲಿ ಉಗ್ರರ ಸಂಖ್ಯೆ 274ಕ್ಕೆ ಇಳಿದಿದೆ. 2019ರಲ್ಲಿ 3,824ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನ 2020ರಲ್ಲಿ 5,246ಬಾರಿ ಈ ದುಸ್ಸಾಹಸಕ್ಕೆ ಕೈಹಾಕಿದೆ ಎಂಬುದನ್ನೂ ಹೇಳಿದೆ.

ಭಾರತೀಯ ಸೇನೆ 2020ರಲ್ಲಿ 221ಜನ ಉಗ್ರರನ್ನು ಸದೆಬಡಿದಿದ್ದು, 47 ಜನರನ್ನು ಸೆರೆಹಿಡಿದಿದೆ. 2019ರಲ್ಲಿ ಹತರಾದ ಉಗ್ರರ ಸಂಖ್ಯೆ152 ಮತ್ತು ಸೆರೆ ಸಿಕ್ಕವರ ಸಂಖ್ಯೆ 43ರಷ್ಟಿತ್ತು. ಅಂತೆಯೇ, ಕಳೆದ ಬಾರಿ 11 ಜನ ಉಗ್ರರು ಸೇನೆಗೆ ಶರಣಾಗಿದ್ದು, 2019ರಲ್ಲಿ ಕೇವಲ ಮೂವರು ಶರಣಾಗಿದ್ದರು ಎನ್ನುವುದೂ ತಿಳಿದುಬಂದಿದೆ.

ತಾಳ್ಮೆ ಪರಿಶೀಲಿಸುವವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು: ಸೇನಾ ಮುಖ್ಯಸ್ಥ ಜ. ಮನೋಜ್​ ಮುಕುಂದ್​ ನರವಾಣೆ ಎಚ್ಚರಿಕೆ