AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶ: ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇಗುಲದಲ್ಲಿ ಕಾಲ್ತುಳಿತ, 9 ಮಂದಿ ಸಾವು

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ದೇಗುಲದಲ್ಲಿ ಶನಿವಾರ ಘೋರ ದುರಂತ ಸಂಭವಿಸಿದೆ. ಶ್ರೀಕಾಕುಳಂನ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾಗ ಕಾಲ್ತುಳಿತ ಸಂಭವಿಸಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ. ಹತ್ತಾರು ಮಂದಿ ಭಕ್ತರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

ಆಂಧ್ರ ಪ್ರದೇಶ: ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇಗುಲದಲ್ಲಿ ಕಾಲ್ತುಳಿತ, 9 ಮಂದಿ ಸಾವು
ಕಾಶಿಬುಗ್ಗ ಪಟ್ಟಣದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ
Ganapathi Sharma
|

Updated on:Nov 01, 2025 | 2:58 PM

Share

ಹೈದರಾಬಾದ್, ನವೆಂಬರ್ 1: ಕರ್ನೂಲ್ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರ ಪ್ರದೇಶದಲ್ಲಿ (Andhra Pradesh) ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಕನಿಷ್ಠ 9 ಭಕ್ತರು ಮೃತಪಟ್ಟಿದ್ದಾರೆ. 7 ಮಂದಿ ಸ್ಥಳದಲ್ಲೇ ಮರತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಾರ್ತಿಕ ಮಾಸದ ಏಕಾದಶಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಮಯದಲ್ಲಿ ದುರಂತ ಸಂಭವಿಸಿದೆ ಎಂದು ಆಂಧ್ರ ಪ್ರದೇಶ ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನಿಜಕ್ಕೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದಿದ್ದೇನು?

ಕಾರ್ತಿಕ ಮಾಸದ ಏಕಾದಶಿಯ ಕಾರಣ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 15000 ಭಕ್ತರು ದರ್ಶನಕ್ಕಾಗಿ ದೇವಾಲಯದಲ್ಲಿ ಭಕ್ತರು ಜಮಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆರಂಭಿಕ ವರದಿಗಳ ಪ್ರಕಾರ, ದೇವಾಲಯದ ಆವರಣದ ಪ್ರವೇಶದ್ವಾರದ ಬಳಿ ಜನಸಂದಣಿಯ ಒತ್ತಡ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಇದು ಜನರಲ್ಲಿ ಗೊಂದಲವನ್ನು ಉಂಟುಮಾಡಿತು ಮತ್ತು ಕಾಲ್ತುಳಿತಕ್ಕೆ ಕಾರಣವಾಯಿತು. ಅನೇಕ ಜನರು ಕೆಳಗೆ ಬಿದ್ದು ಕಾಲ್ತುಳಿತಕ್ಕೊಳಗಾದರು.

ಪರಿಸ್ಥಿತಿ ನಿಯಂತ್ರಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ತಂಡಗಳು ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕೃಷಿ ಸಚಿವ ಕೆ. ಅಚ್ಚನ್ನಾಯ್ಡು ದೇವಾಲಯಕ್ಕೆ ತಲುಪಿ ಪರಿಸ್ಥಿತಿಯನ್ನು ನಿಭಾಯಿಸಲು ದೇವಾಲಯದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಜನಸಂದಣಿಯನ್ನು ನಿರ್ವಹಿಸಲು ಮತ್ತು ಪರಿಹಾರ ಕಾರ್ಯಗಳಲ್ಲಿ ಸಹಾಯ ಮಾಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಸಿಎಂ ಚಂದ್ರಬಾಬು ನಾಯ್ಡು ಸಂತಾಪ

‘ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಆಘಾತವನ್ನುಂಟು ಮಾಡಿದೆ. ಈ ದುರಂತದಲ್ಲಿ ಭಕ್ತರ ಸಾವು ಅತೀವ ವೇದನೆ ಉಂಟುಮಾಡಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರಿಗೆ ತ್ವರಿತವಾಗಿ ಮತ್ತು ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ವಿನಂತಿಸಿದ್ದೇನೆ’ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಕಾಶಿಬುಗ್ಗ ವೆಂಕಟೇಶ್ವರ ದೇಗುಲ ಸರ್ಕಾರಕ್ಕೆ ಸೇರಿದ ದೇಗುಲ ಅಲ್ಲ. ಹೆಚ್ಚು ಭಕ್ತರು ಸೇರಿದ ಬಗ್ಗೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿರಲಿಲ್ಲ ಎಂದು ಆಂಧ್ರ ಪ್ರದೇಶದ ಮುಜರಾಯಿ ಇಲಾಖೆ ಮಾಹಿತಿ ನೀಡಿದೆ.

ಪುಟ್ಟ ತಿರುಪತಿ ಎಂದೇ ಪ್ರಸಿದ್ಧ ಕಾಶಿಬುಗ್ಗ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ

ಕಾಶಿಬುಗ್ಗದಲ್ಲಿರುವ ಈ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಸುಮಾರು 5 ಎಕರೆಗಳಷ್ಟು ಜಾಗದಲ್ಲಿ ವಿಸ್ತರಿಸಿದೆ. ಸ್ಥಳೀಯರು ಇದನ್ನು ಉತ್ತರಾಂಧ್ರದ ‘ಪುಟ್ಟ ತಿರುಪತಿ’ ಎಂದೇ ಕರೆಯುತ್ತಾರೆ. ಕಾಶಿಬುಗ್ಗದ ‘ಹರಿ ಮುಕುಂದ ಪಾಂಡ’ ಎಂಬ ಭಕ್ತ ಈ ದೇವಾಲಯವನ್ನು ನಿರ್ಮಿಸಿದನು. ಅವನು ತಿರುಮಲ ದೇವಾಲಯದ ಮಾದರಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ದೇವಾಲಯವನ್ನು ನಿರ್ಮಿಸಿದನು. ಹಿಂದೆ ತಿರುಮಲಕ್ಕೆ ಭೇಟಿ ನೀಡಲು ಹೋದಾಗ ಅವನು ಎದುರಿಸಿದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಅದೇ ತಿರುಮಲ ಮಾದರಿಯೊಂದಿಗೆ ಸ್ಥಳೀಯವಾಗಿ ಈ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗಿದೆ.

ಇದನ್ನೂ ಓದಿ: ಕರ್ನೂಲ್ ಬಸ್ ಬೆಂಕಿ ಅಪಘಾತಕ್ಕೂ ಮುನ್ನ ಪೆಟ್ರೋಲ್ ಪಂಪ್‌ಗೆ ಕುಡಿದು ಬಂದಿದ್ದ ಬೈಕ್ ಸವಾರ; ಸಿಸಿಟಿವಿ ವಿಡಿಯೋ ಇಲ್ಲಿದೆ

ಈ ದೇವಾಲಯದ ನಿರ್ಮಾಣವು ಒಂದು ವರ್ಷದ ಹಿಂದಷ್ಟೇ ಪೂರ್ಣಗೊಂಡಿತ್ತು. ಈ ದೇವಾಲಯದಲ್ಲಿ ಪ್ರಸ್ತುತ ಎಲ್ಲ ಚಟುವಟಿಕೆಗಳು ‘ಹರಿ ಮುಕುಂದ ಪಾಂಡ’ ಅವರ ಮೇಲ್ವಿಚಾರಣೆಯಲ್ಲೇ ನಡೆಯುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Sat, 1 November 25