ಟಿಎಂಸಿ ಜೊತೆಗೆ ಸಂಬಂಧ ಸುಧಾರಣೆಗೆ ಕಾಂಗ್ರೆಸ್ ಯತ್ನ: ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾನಾಯಕ ಸ್ಥಾನದಿಂದ ಆಧಿರ್​ ಚೌಧರಿ ಸ್ಥಾನಚ್ಯುತಿ?

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮೊದಲು ಪಕ್ಷದ ಸಂಘಟನೆಯನ್ನು ಬಲಗಪಡಿಸಲು ಕಾಂಗ್ರೆಸ್ ನಾಯಕಿ ಸೊನಿಯಾ ಗಾಂಧಿ ತೆಗೆದುಕೊಳ್ಳಬಹುದು ಎನ್ನಲಾದ ಹಲವು ನಿರ್ಧಾರಗಳ ಪೈಕಿ ಇದು ಮೊದಲನೆಯದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟಿಎಂಸಿ ಜೊತೆಗೆ ಸಂಬಂಧ ಸುಧಾರಣೆಗೆ ಕಾಂಗ್ರೆಸ್ ಯತ್ನ: ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾನಾಯಕ ಸ್ಥಾನದಿಂದ ಆಧಿರ್​ ಚೌಧರಿ ಸ್ಥಾನಚ್ಯುತಿ?
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 04, 2021 | 5:34 PM

ದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾ ನಾಯಕರಾಗಿರುವ ಆಧಿರ್ ರಂಜನ್ ಚೌಧರಿ ಅವರ ಸ್ಥಾನಚ್ಯುತಿ ಸಾಧ್ಯತೆ ನಿಚ್ಚಳವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮೊದಲು ಪಕ್ಷದ ಸಂಘಟನೆಯನ್ನು ಬಲಗಪಡಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೆಗೆದುಕೊಳ್ಳಬಹುದು ಎನ್ನಲಾದ ಹಲವು ನಿರ್ಧಾರಗಳ ಪೈಕಿ ಇದು ಮೊದಲನೆಯದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಹರಾಂಪುರ ಲೋಕಸಭಾ ಕ್ಷೇತ್ರದ ಸದಸ್ಯ ಅಧೀರ್ ಚೌಧರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಕಟ್ಟಾ ಬೆಂಬಲಿಗರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದು ಅವರೇ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದ ಜಿ-23 ಎಂದೇ ಹೆಸರುವಾಸಿಯಾದ ತಂಡದ ಕಟು ವಿಮರ್ಶಕರಾಗಿದ್ದರು ಚೌಧರಿ. ಈ ಸಂದರ್ಭದಲ್ಲಿಯೂ ಚೌಧರಿ ನಾಯಕತ್ವದ (ಗಾಂಧಿ) ಬೆನ್ನಿಗೆ ಬಲವಾಗಿ ನಿಂತಿದ್ದರು. ಸಂಸತ್ತಿನ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲು ಅನುಭವಿಸಿದ ನಂತರ ಚೌಧರಿ ಬಹಿರಂಗವಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದರು. ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದರೆ ಸಾಲದು, ಬೀದಿಗಳಿಗೆ ಇಳಿದು ಜನರ ಬೆಂಬಲಗಳಿಸಬೇಕು ಎಂದು ಚೌಧರಿ ಸಲಹೆ ಮಾಡಿದ್ದರು. ಕೊವಿಡ್ ರೋಗಿಗಳಿಗೆ ಪರಿಹಾರ ದೊರಕಿಸಲು ಎಲ್ಲರೂ ಸಕ್ರಿಯರಾಗಿ ಕೆಲಸ ಮಾಡಬೇಕು ಎಂಬ ಸೋನಿಯಾ ಗಾಂಧಿ ಸೂಚನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು.

ಅಧೀರ್ ರಂಜನ್ ಚೌಧರಿ ಅವರ ಸ್ಥಾನಚ್ಯುತಿ ಪ್ರಯತ್ನದ ಹಿಂದೆ ಟಿಎಂಸಿಯೊಂದಿಗೆ ನಂಟು ಬೆಸೆಯುವ ಆಸೆಯಿದೆ. ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​ಗೆ ಈಗ ಟಿಎಂಸಿಯ ನೆರವು ಬೇಕಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲ. ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್​ ಪಕ್ಷವು ಚುನಾವಣೆ ಎದುರಿಸಿತ್ತು. ಆದರೂ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಠಿಣ ಪದಗಳನ್ನು ಬಳಸಿರಲಿಲ್ಲ. ಮಮತಾ ಗೆಲುವನ್ನು ಕಾಂಗ್ರೆಸ್ ಸ್ವಾಗತಿಸಿತ್ತು.

ಆದರೆ ಅಧೀರ್ ರಂಜನ್ ಚೌಧರಿ ಮಾತ್ರ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ಕಟು ವಿಮರ್ಶಕರಾಗಿದ್ದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಹಲವು ಬಾರಿ ಕಾಂಗ್ರೆಸ್ ಪಕ್ಷವು ಮಮತಾ ಬ್ಯಾನರ್ಜಿ ಅವರ ಬೆನ್ನಿಗೆ ನಿಂತಿತ್ತು. ಚೌಧರಿ ಅವರ ಸ್ಥಾನಚ್ಯುತಿಯ ಹಿಂದೆಯೂ ಇಂಥದ್ದೇ ಉದ್ದೇಶವಿರುವಂತೆ ಭಾಸವಾಗುತ್ತದೆ. ಸಂಸತ್ತಿನ ತೃಣಮೂಲ ಕಾಂಗ್ರೆಸ್​​ ಮತ್ತು ಕಾಂಗ್ರೆಸ್​ ಸದಸ್ಯರ ನಡುವಣ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್​ಕರ್​ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಸಂಸತ್ತಿನಲ್ಲಿಯೂ ಮುಂದುವರಿಸಲು ಕಾಂಗ್ರೆಸ್ ಮುಂದಾಗಿದೆ. ಟಿಎಂಸಿಯ ಈ ಯತ್ನವನ್ನು ಕಾಂಗ್ರೆಸ್ ಸಹ ತನ್ನ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್​ಕರ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳನ್ನು ಆಗ್ರಹಿಸಲು ಟಿಎಂಸಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಯತ್ನಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಟಿಎಂಸಿ ಕೋರಬಹುದು. ಸಂಸತ್ತಿನಲ್ಲಿ ಚೌಧರಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಪ್ರಶ್ನೆ ಇದೀಗ ಉದ್ಭವವಾಗಿದೆ.

ತಿರುವನಂತಪುರದ ಸಂಸದ ಶಶಿ ತರೂರ್ ಮತ್ತು ಆನಂದ್​ಪುರ್ ಸಾಹಿಬ್ ಕ್ಷೇತ್ರದ ಸಂಸದ ಮನೀಶ್ ತಿವಾರಿ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಇವರಿಬ್ಬರೂ ಜಿ-23 ಪತ್ರಕ್ಕೆ ಸಹಿ ಹಾಕಿದ್ದವರು. ವಯನಾಡ್ ಸಂಸದ ಮತ್ತು ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಪಕ್ಷವನ್ನು ಮುನ್ನಡೆಸುವ ಬಗ್ಗೆ ಆಸಕ್ತಿಯಿದೆಯೋ ಇಲ್ಲವೋ ಎಂಬುದು ಈವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ತಿವಾರಿ ಅವರೇ ಪಂಜಾಬ್​ನ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಬೇಕು ಎಂಬ ಅಭಿಪ್ರಾಯವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಂದಿದ್ದಾರೆ.

ಕಾಂಗ್ರೆಸ್ ಒಂದು ವೇಳೆ ಶಶಿ ತರೂರ್ ಅಥವಾ ತಿವಾರಿ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದರೆ ಅದ್ಕೆ ಬೆರೆಯೇ ಅರ್ಥ ಬರುತ್ತದೆ. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸದರು ಮತ್ತು ನಾಯಕರೊಂದಿಗೆ ಅವರ ಬಾಂಧವ್ಯ ಸುಧಾರಿಸಲು ಇದು ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.

ಲೋಕಸಭೆಯ ಸಾರ್ವಜನಿಕ ಹಣಕಾಸು ಸಮಿತಿ ಮುಖ್ಯಸ್ಥರಾದ ಚೌಧರಿ ತಳಮಟ್ಟದಿಂದ ಬೆಳೆದುಬಂದ ಬೆಂಕಿಯುಗುಳುವ ನಾಯಕ. ಕೊವಿಡ್-19 ಲಸಿಕೆ ಅಭಿಯಾನ ಮತ್ತು ವಿವಿಧ ಕ್ಷೇತ್ರಗಳ ಮೇಲೆ ಕೊವಿಡ್ ಪಿಡುಗಿನ ಪರಿಣಾಮಗಳ ಬಗೆಗಿನ ಚರ್ಚೆಯ ವಿಚಾರದಲ್ಲಿ ಇವು ಬಿಜೆಪಿಯೊಂದಿಗೆ ಸಂಘರ್ಷಕ್ಕಿಳಿದಿದ್ದರು.

(Trinamool Congress and Congress warm up Sonia Gandhi set to replace Adhir Ranjan Chowdhury as Lok Sabha leader)

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು, ಮೂರನೇ ಅಲೆ ಎದುರಿಸಲು ಸಿದ್ಧರಾಗಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ವಿನಂತಿ

ಇದನ್ನೂ ಓದಿ: ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್ ಸೊರೆನ್​ಗೆ 4 ದಿನ ಕಾದರೂ ಸೋನಿಯಾ ಮತ್ತು ರಾಹುಲ್​ರ ದರ್ಶನ ಭಾಗ್ಯ ಸಿಗಲಿಲ್ಲ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada