
ಚೆನ್ನೈ, ಜೂನ್ 22: ತಮಿಳುನಾಡಿನ ವಿಜಯ್ (CM Vijay) ನೇತೃತ್ವದ ನೂತನ ಟಿವಿಕೆ ಸರ್ಕಾರವು ಹಿಂದಿನ ಡಿಎಂಕೆ (DMK) ಸರ್ಕಾರದ ಅವಧಿಯ ಯೋಜನೆಗಳಿಗೆ ಬ್ರೇಕ್ ಹಾಕಿದೆ. ತಮಿಳುನಾಡು ಸರ್ಕಾರವು ದೇವಸ್ಥಾನದ ಹಣವನ್ನು ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳಂತಹ ಇತರೆ ಉದ್ದೇಶಗಳಿಗೆ ಬಳಸುವುದಕ್ಕೆ ನಿಷೇಧ ಹೇರಿದೆ. ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ದೇವಸ್ಥಾನದ ನಿಧಿಯಿಂದ ಘೋಷಿಸಲಾಗಿದ್ದ 246 ಕೋಟಿ ರೂ. ಮೌಲ್ಯದ 46 ಯೋಜನೆಗಳನ್ನು ಸರ್ಕಾರ ರದ್ದುಗೊಳಿಸಿದೆ. ತಮಿಳುನಾಡಿನ ದೇವಸ್ಥಾನದ ಹಣವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಭಕ್ತರ ಕಲ್ಯಾಣಕ್ಕೆ ಮಾತ್ರ ಬಳಸಲು ಟಿವಿಕೆ ಸರ್ಕಾರ ತೀರ್ಮಾನಿಸಿದೆ.
ದೇವಾಲಯಗಳ ಆಸ್ತಿ ಮತ್ತು ಆದಾಯವನ್ನು ಕೇವಲ ಧಾರ್ಮಿಕ ಉದ್ದೇಶಗಳು ಮತ್ತು ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಸಬೇಕೆಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಆದೇಶಿಸಿದೆ. ಹಿಂದಿನ ಡಿಎಂಕೆ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ 29 ಮದುವೆ ಮಂಟಪಗಳು ಮತ್ತು 17 ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ದೇವಾಲಯಗಳ ಆಸ್ತಿಪಾಸ್ತಿಗಳ ಸಮಗ್ರ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆಯ ಚಿನ್ನವನ್ನು ಕರಗಿಸಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗುತ್ತಿದ್ದು, ಅದರಿಂದ ಬರುವ ಬಡ್ಡಿಯನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ
ಅಧಿಕೃತ ವಿವರಗಳ ಪ್ರಕಾರ, 115.77 ಕೋಟಿ ರೂ. ಬಜೆಟ್‌ನ 29 ಕಲ್ಯಾಣ ಮಂಟಪ ಯೋಜನೆಗಳ ಅನುಮೋದನೆಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ. ಇದರೊಂದಿಗೆ, 130.08 ಕೋಟಿ ರೂ. ವೆಚ್ಚದ 17 ಯೋಜಿತ ವಾಣಿಜ್ಯ ಸಂಕೀರ್ಣಗಳ ನಿರ್ಮಾಣವನ್ನು ಸಹ ಕೈಬಿಡಲಾಗಿದೆ. ಈ ರದ್ದತಿ ಆದೇಶ ಹೊರಬೀಳುವ ಮುನ್ನ ಈ 46 ಯೋಜನೆಗಳ ಪೈಕಿ ಯಾವುದೇ ಯೋಜನೆಯ ಕಾಮಗಾರಿ ಅಥವಾ ನಿರ್ಮಾಣ ಕಾರ್ಯಗಳು ಪ್ರಾಯೋಗಿಕವಾಗಿ ಆರಂಭವಾಗಿರಲಿಲ್ಲ ಎಂಬುದನ್ನು ಸರ್ಕಾರಿ ವರದಿಗಳು ಖಚಿತಪಡಿಸಿವೆ.
ತಮಿಳುನಾಡಿನಲ್ಲಿ ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಮೂಲಕ ದೇವಸ್ಥಾನಗಳ ಹೆಚ್ಚುವರಿ ಹಣವನ್ನು ವಿವಿಧ ಸಾರ್ವಜನಿಕ ಯೋಜನೆಗಳು ಮತ್ತು ಕಾಲೇಜುಗಳ ಸ್ಥಾಪನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ದೇವಸ್ಥಾನದ ಹಣವನ್ನು ಕೇವಲ ಧಾರ್ಮಿಕ ಮತ್ತು ಭಕ್ತರ ಸೌಕರ್ಯಗಳಿಗೆ ಮಾತ್ರ ಬಳಸಬೇಕು ಎಂದು ಹಿಂದೂ ಸಂಘಟನೆಗಳು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ
ವಿಜಯ್ ನೇತೃತ್ವದ ತಮಿಳುನಾಡಿನ ನೂತನ ಸರ್ಕಾರವು ಭಕ್ತರ ಭಾವನೆಗಳಿಗೆ ಮನ್ನಣೆ ನೀಡಿದ್ದು, ಡಿಎಂಕೆ ಅವಧಿಯ ಆ ಯೋಜನೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಸ್ಥಗಿತಗೊಂಡ ಯೋಜನೆಗಳಿಗಾಗಿ ಕಾಯ್ದಿರಿಸಲಾಗಿದ್ದ 245.85 ಕೋಟಿ ರೂ.ಗಳನ್ನು ದೇವಸ್ಥಾನಗಳ ಖಾತೆಗೆ ಮರುಜಮೆ ಮಾಡಲಾಗಿದೆ.
ಈ ಬೃಹತ್ ಮೊತ್ತವನ್ನು ದೇವಸ್ಥಾನಗಳಿಗೆ ಬರುವ ಭಕ್ತರ ಮೂಲಸೌಕರ್ಯ ಅಭಿವೃದ್ಧಿ, ಉಚಿತ ಅನ್ನದಾಸೋಹ, ಧರ್ಮಶಾಲೆಗಳ ನವೀಕರಣ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಟಿವಿಕೆ ಸರ್ಕಾರದ ಈ ನಡೆಗೆ ಹಿಂದೂ ಧಾರ್ಮಿಕ ಮುಖಂಡರು ಮತ್ತು ಭಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದರೆ, ಇತ್ತ ವಿರೋಧ ಪಕ್ಷವಾಗಿರುವ ಡಿಎಂಕೆ ಈ ನಿರ್ಧಾರವನ್ನು ಟೀಕಿಸಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ತರಲಾಗಿದ್ದ ಯೋಜನೆಗಳನ್ನು ರಾಜಕೀಯ ದ್ವೇಷಕ್ಕಾಗಿ ರದ್ದುಗೊಳಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದೆ.
“ದೇವಸ್ಥಾನದ ಹಣವನ್ನು ದೇವಸ್ಥಾನದ ಕಾರ್ಯಾಚರಣೆ ಮತ್ತು ಭಕ್ತರ ಸೇವೆಗಾಗಿಯೇ ಬಳಸಬೇಕು” ಎಂಬ ಸುಪ್ರೀಂ ಕೋರ್ಟ್‌ನ ಆಶಯಕ್ಕೆ ನೂತನ ಸರ್ಕಾರ ಗೌರವ ನೀಡಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ