ಶ್ರೀನಗರದಲ್ಲಿ ಹಾಡಹಗಲೇ ಉಗ್ರನ ದಾಳಿ; ಇಬ್ಬರು ಪೊಲೀಸ್ ಸಿಬ್ಬಂದಿ ಬಲಿ

ಉಗ್ರ ದಾಳಿಗೆ ಬಲಿಯಾದ ಪೊಲೀಸ್ ಸಿಬ್ಬಂದಿಗಳನ್ನು ಸುಹೇಲ್ ಮತ್ತು ಮೊಹಮದ್ ಯೂಸುಫ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಸುಹೇಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

  • TV9 Web Team
  • Published On - 17:29 PM, 19 Feb 2021
ಶ್ರೀನಗರದಲ್ಲಿ ಹಾಡಹಗಲೇ ಉಗ್ರನ ದಾಳಿ; ಇಬ್ಬರು ಪೊಲೀಸ್ ಸಿಬ್ಬಂದಿ ಬಲಿ
ಸಿಸಿಟಿವಿಯಲ್ಲಿ ದಾಖಲಾಗಿರುವ ಉಗ್ರನ ಚಿತ್ರ

ಶ್ರೀನಗರ: ಕಣಿವೆ ರಾಜ್ಯದಲ್ಲಿ ನಿರಾಯುಧರಾಗಿದ್ದ ಇಬ್ಬರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಡಹಗಲೇ ಉಗ್ರನೋರ್ವನ ದಾಳಿಗೆ ಬಲಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ನಡೆದಿರುವ ದಾಳಿ ಸಿಸಿಟಿವಿಯಲ್ಲೂ ದಾಖಲಾಗಿದ್ದು ಉಗ್ರನನ್ನು ಸಾಕಿಬ್ ಎಂದು ಗುರುತಿಸಲಾಗಿದೆ. ಉಗ್ರನ ದಾಳಿಗೆ ಬಲಿಯಾದ ಪೊಲೀಸ್ ಸಿಬ್ಬಂದಿಯನ್ನು ಸುಹೇಲ್ ಮತ್ತು ಮೊಹಮದ್ ಯೂಸುಫ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಸುಹೇಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಚಳಿಯಿಂದ ರಕ್ಷಣೆ ಪಡೆಯಲು ಬಳಸುವಂತಹ ದಪ್ಪನೆಯ ಉಡುಗೆಯ ಒಳಗೆ ಪಿಸ್ತೂಲನ್ನು ಅಡಗಿಸಿಟ್ಟುಕೊಂಡಿದ್ದ ಉಗ್ರ ದಿಢೀರ್​ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಇಂತಹದೇ ದಾಳಿ ಶ್ರೀನಗರದ ವರ್ತಕರೋರ್ವರ ಮಗನ ಮೇಲೆ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ನೆನೆಸಿಕೊಂಡಿದ್ದಾರೆ. ಎರಡೇ ದಿನಗಳ ತರುವಾಯ ಮತ್ತೊಮ್ಮೆ ಉಗ್ರರು ಏಕಾಕಿ ದಾಳಿ ನಡೆಸಿರುವುದು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುವದರ ಕುರಿತು ಭೀತಿ ಹುಟ್ಟಿಸಿದೆ.

‘ದಾಳಿ ನಡೆಸಿದ ಉಗ್ರನನ್ನು ಗುರುತಿಸಿದ್ದು, ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ನಿರ್ದೇಶಕ ದಿಲ್​ಬಾಗ್ ಸಿಂಗ್ ತಿಳಿಸಿದ್ದಾರೆ. ಉಗ್ರ ದಾಳಿಗೆ ಬಲಿಯಾದ ಪೊಲೀಸ್ ಸಿಬ್ಬಂದಿಗಳನ್ನು ಸುಹೇಲ್ ಮತ್ತು ಮೊಹಮದ್ ಯೂಸುಫ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಸುಹೇಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮದ್ ಯೂಸುಫ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ಮಾರ್ಗಮಧ್ಯೆಯೇ ಅವರು ಅಸುನೀಗಿದರು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ವಾಸ್ತವ ಪರಿಸ್ಥಿತಿ ಪರಿಶೀಲಿಸಲು 24 ವಿದೇಶಿ ಪ್ರತಿನಿಧಿಗಳು ಭೇಟಿ ನೀಡಿದ ಕೆಲ ದಿನಗಳ ಬೆನ್ನಲ್ಲೇ ಎರಡು ಗುಂಡಿನ ದಾಳಿ ನಡೆದಿದೆ ಎಂದು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Two Years of Pulwama Attack: ಫೆಬ್ರವರಿ14ರಂದು ಏನಾಗಿತ್ತು? ಉಗ್ರರ ದಾಳಿಗೆ ಭಾರತ ಹೇಗೆ ಪ್ರತ್ಯುತ್ತರ ನೀಡಿತು?

ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗುತ್ತದೆ: ಲೋಕಸಭೆಯಲ್ಲಿ ಅಮಿತ್ ಶಾ ಪ್ರತ್ಯುತ್ತರ