ಅಯ್ಯೋ ವಿಧಿಯೇ..! ಪಿಸ್ತಾ ಸಿಪ್ಪೆ ನುಂಗಿ 2 ವರ್ಷದ ಬಾಲಕ ದುರಂತ ಸಾವು
ಪಿಸ್ತಾ, ಈ ಡ್ರೈ ಪ್ರೂಟ್‌ನ ಹೆಸರನ್ನು ಬಹುತೇಕರು ಕೇಳಿಯೇ ಇರುತ್ತೀರಾ. ಇದರ ಪ್ರಯೋಜನ ಮಾತ್ರ ಅಷ್ಟಿಷ್ಟಲ್ಲ. ಪಿಸ್ತಾ ಬೀಜಗಳು ರುಚಿಕರ ಮಾತ್ರವಲ್ಲದೇ, ಆರೋಗ್ಯಕ್ಕೂ ಸಹ ಬಹಳ ಒಳ್ಳೆಯದು. ರುಚಿಯಾದ ಒಣಬೀಜವಾದ ಈ ಪಿಸ್ತಾದಲ್ಲಿ ಭರ್ಜರಿ ಪೋಷಕಾಂಶಗಳಿವೆ. ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಪಿಸ್ತಾದ ಸಿಪ್ಪೆ ನುಂಗಿ ಎರಡು ವರ್ಷದ ಬಾಲಕ ದುರಂತ ಸಾವು ಕಂಡಿದೆ.
ಕಾಸರಗೋಡು, (ಜನವರಿ 13): ಪಿಸ್ತಾ ಸಿಪ್ಪೆ ನುಂಗಿ 2 ವರ್ಷದ ಬಾಲಕ ದುರಂತ ಸಾವು ಕಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದಲ್ಲಿ ನಡೆದಿದೆ. ಅನಸ್ ಮೃತ ಬಾಲಕ. ಶನಿವಾರ ಪಿಸ್ತಾ ಸಿಪ್ಪೆ ನುಂಗಿದ್ದ. ತಕ್ಷಣ ಪೋಷಕರು, ಸಿಪ್ಪೆಯ ಒಂದು ಭಾಗ ಹೊರ ತೆಗೆದಿದ್ದರು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ತಪಾಸಣೆ ಮಾಡಿ ಮಗುವಿನ ಗಂಟಲಿನಲ್ಲಿ ಏನು ಸಿಕ್ಕಿ ಹಾಕಿಕೊಂಡಿಲ್ಲ ಎಂದಿದ್ದಾರೆ. ಆದ್ರೆ, ಭಾನುವಾರ ಶ್ವಾಸಕೋಶದಲ್ಲಿ ಸಿಪ್ಪೆ ಸಿಲುಕಿಕೊಂಡು ಉಸಿರಾಟದ ತೊಂದರೆಯಾಗಿ ಮಗು ಮೃತಪಟ್ಟಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರ್ ನಗರ ನಿವಾಸಿ ಅನ್ವರ್ ಹಾಗೂ ಮೆಹರೂಫ ಎಂಬುವರ ಮಗ ಅನಸ್ ಶನಿವಾರ ಪಿಸ್ತಾದ ಸಿಪ್ಪೆ ನುಂಗಿದ್ದ. ಕೂಡಲೇ ಸಿಪ್ಪೆಯ ಒಂದು ಭಾಗ ಹೊರ ತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವಿನ ತಪಾಸಣೆ ಮಾಡಿದ ವೈದ್ಯರು, ಗಂಟಲಿನಲ್ಲಿ ಏನು ಸಿಕ್ಕಿ ಹಾಕಿಕೊಂಡಿಲ್ಲ ಎಂದು ಹೇಳಿದ್ದರು. ಆದ್ರೆ, ಮರುದಿನ ಅಂದರೆ ನಿನ್ನೆ ಭಾನುವಾರ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇದರಿಂದ ಭಯಗೊಂಡ ಪೋಷಕರು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದ್ರೆ ಶ್ವಾಸಕೋಶದಲ್ಲಿ ಸಿಪ್ಪೆ ಸಿಲುಕಿಕೊಂಡು ಉಸಿರಾಟದ ತೊಂದರೆಯಾಗಿ ಮಗು ಕೊನೆಯುಸಿರೆಳೆದಿದೆ.
ಇದನ್ನೂ ಓದಿ: 4 ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಹಾರಿದ ಮಹಿಳೆ: ಕಾರಣ ಕೇಳಿದ್ರೆ ಕರುಳು ಚುರ್ ಅನ್ನುತ್ತೆ!
ಬಾಟಲಿಗಳ ಮುಚ್ಚಳ, ನಾಣ್ಯಗಳನ್ನು ನುಂಗಿ ಮಕ್ಕಳು ಮೃತಪಟ್ಟಿರುವ ಉದಾಹರಣೆಗಳು ಇವೆ. ನವಜಾತ ಶಿಶುವಿನಿಂದ ಐದಾರು ವರ್ಷದವರೆಗೆ ಮಕ್ಕಳ ಲಾಲನೆ ಪಾಲನೆ ಅತ್ಯಂತ ನಾಜೂಕಾಗಿರುತ್ತೆ. ಆಗಾಗಿ ಚಿಕ್ಕ ಮಕ್ಕಳನ್ನು ಪೋಷಕರು ಭಾರೀ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನುಂಗುವಂತ ವಸ್ತು, ಆಹಾರ ಪದಾರ್ಥವಾಗಲಿ ಮಕ್ಕಳ ಮುಂದೆ ಇಡಬಾರದರು.
ಮಕ್ಕಳಿಗೆ ಯಾವುದು ಏನು ಅಂತ ತಿಳಿಯಲ್ಲ. ಕೈಗೆ ಸಿಕ್ಕಿದ್ದನ್ನು ಮೊದಲು ಬಾಯಿಗೆ ಹಾಕಿಕೊಳ್ಳುತ್ತವೆ. ಹಲ್ಲು ಮಾಡುವ ಸಂದರ್ಭದಲ್ಲಿ ವಸಡು ಚುಟು ಚುಟು ಎನ್ನುತ್ತಿರುತ್ತೆ. ಹೀಗಾಗಿ ಮಕ್ಕಳು ಕೈಗೆ ಸಿಕ್ಕಿದ್ದನ್ನು ಮೊದಲು ಬಾಯಿಗೆ ಇಟ್ಟುಕೊಳ್ಳುತ್ತವೆ. ಇದರಿಂದ ಪೋಷಕರು ನಿರ್ಲಕ್ಷ್ಯ ಮಾಡದೇ ತಮ್ಮ ತಮ್ಮ ಮಕ್ಕಳ ಬಗ್ಗೆ ಫುಲ್ ಕೇರ್ ತೆಗೆದುಕೊಳ್ಳಬೇಕು. ಒಂದು ಸಲ ಮೈಮರೆತರೇ ಅನಾಹುತ ಸಂಭವಿಸುತ್ತವೆ. ಈ ರೀತಿಯ ಅನಾಹುತಗಳು ಆಗದಂತೆ ನೋಡಿಕೊಳ್ಳುವುದು ಒಳಿತು.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ