Maharashtra Crisis: ಏಕನಾಥ್ ಶಿಂದೆಯನ್ನು ಶಿವಸೇನಾ ನಾಯಕ ಸ್ಥಾನದಿಂದ ಕಿತ್ತೊಗೆದ ಉದ್ಧವ್ ಠಾಕ್ರೆ
ಪಕ್ಷದ ವಿರುದ್ಧವೇ ತಂತ್ರ ಹೆಣೆದು ಇದೀಗ ಮುಖ್ಯಮಂತ್ರಿ ಪಟ್ಟ ಏರಿರುವ ಏಕನಾಥ್ ಶಿಂದೆಯವರನ್ನು ಉದ್ಧವ್ ಠಾಕ್ರೆ ಶಿವಸೇನಾ ನಾಯಕ ಸ್ಥಾನದಿಂದ ತೆಗೆದುಹಾಕಿದ್ದಾರೆ. ಶಿಂದೆ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಠಾಕ್ರೆ ಸರ್ಕಾರ ಬುಡಮೇಲಾಗಿತ್ತು, ಆ ಕೋಪವನ್ನು ಠಾಕ್ರೆ ಈ ರೀತಿ ತೋರಿಸಿಕೊಂಡಿದ್ದಾರೆ.
ಮುಂಬೈ: ಪಕ್ಷದ ವಿರುದ್ಧವೇ ತಂತ್ರ ಹೆಣೆದು ಇದೀಗ ಮುಖ್ಯಮಂತ್ರಿ ಪಟ್ಟ ಏರಿರುವ ಏಕನಾಥ್ ಶಿಂದೆಯವರನ್ನು ಉದ್ಧವ್ ಠಾಕ್ರೆ ಶಿವಸೇನಾ ನಾಯಕ ಸ್ಥಾನದಿಂದ ತೆಗೆದುಹಾಕಿದ್ದಾರೆ. ಶಿಂದೆ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಠಾಕ್ರೆ ಸರ್ಕಾರ ಬುಡಮೇಲಾಗಿತ್ತು, ಆ ಕೋಪವನ್ನು ಠಾಕ್ರೆ ಈ ರೀತಿ ತೋರಿಸಿಕೊಂಡಿದ್ದಾರೆ.
ಶಿವಸೇನೆಯಲ್ಲಿ ಅಧ್ಯಕ್ಷರ ನಂತರದ ಸ್ಥಾನವನ್ನು ಸಂಘಟನೆಯ ನಾಯಕನಿಗೆ ನೀಡಲಾಗುತ್ತಿತ್ತು, ‘ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ, ನೀವಾಗಿಯೇ ಶಿವಸೇನೆಯ ಸದಸ್ಯತ್ವದಿಂದ ಹೊರಬಂದಿದ್ದೀರಿ, ಹಾಗಾಗಿ ನಾನು ನಿಮ್ಮನ್ನು ಶಿವಸೇನೆ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕುತ್ತಿದ್ದೇನೆ’ ಎಂದು ಠಾಕ್ರೆ ನೀಡಿರುವ ನೋಟಿಸ್ನಲ್ಲಿ ಬರೆಯಲಾಗಿದೆ.
ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ ನಿರ್ಧರಿಸಿದೆ. ಆದರೆ, ಅಭ್ಯರ್ಥಿ ಯಾರು ಎಂಬುದಿನ್ನೂ ನಿರ್ಧಾರವಾಗಿಲ್ಲ.
ಏಕನಾಥ್ ಶಿಂದೆ 39 ಶಾಸಕರ ಜೊತೆಗೂಡಿ ಶಿವಸೇನಾ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. ಬಹುಮತ ಸಾಬೀತುಪಡಿಸಲು ಸಾಧ್ಯವಾಗದು ಎಂಬುದನ್ನು ಅರಿತ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಬಿಜೆಪಿಗೆ 165 ಶಾಸಕರ ಬೆಂಬಲವಿದೆ. ಬಿಜೆಪಿಯು 106 ಶಾಸಕರ ಬಲ ಹೊಂದಿದೆ, ಶಿವಸೇನಾದ 39 ಶಾಸಕರ ಬೆಂಬಲವಿದೆ. 10 ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲವು ಪಕ್ಷಗಳು ಬೆಂಬಲ ಸೂಚಿಸಿವೆ.
ಎರಡು ದಿನಗಳ ವಿಶೇಷ ಅಧಿವೇಶನ ಭಾನುವಾರ ಆರಂಭವಾಗಲಿದ್ದು, ಚುನಾವಣೆ ನಡೆಸಬೇಕಾದ ಅಗತ್ಯ ಬಿದ್ದರೆ ಭಾನುವಾರ ಚುನಾವಣೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Published On - 9:44 am, Sat, 2 July 22