
ಉಧಂಪುರ, ಸೆಪ್ಟೆಂಬರ್ 17: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ಪಡೆ (SOG) ಮತ್ತು ಭಾರತೀಯ ಸೇನೆಯ ಜಂಟಿ ತಂಡ ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ತಡರಾತ್ರಿ ಎನ್‌ಕೌಂಟರ್: ಉಧಂಪುರದ ದುರ್ಗಮ ಕಾಡು ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಜಂಟಿ ಕೂಂಬಿಂಗ್ ಆರಂಭಿಸಿದವು. ಈ ವೇಳೆ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಿದಾಗ ಎನ್‌ಕೌಂಟರ್ ಆರಂಭವಾಗಿ, ಭದ್ರತಾ ಪಡೆಗಳ ಪ್ರತಿದಾಳಿಗೆ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತರಾದ ಉಗ್ರರು ಯಾವ ಸಂಘಟನೆಗೆ ಸೇರಿದವರು ಮತ್ತು ಅವರ ವಿವರಗಳೇನು ಎಂಬುದನ್ನು ಭದ್ರತಾ ಪಡೆಗಳು ಖಚಿತಪಡಿಸಿಕೊಳ್ಳುತ್ತಿವೆ.
ಎನ್‌ಕೌಂಟರ್ ಸ್ಥಳದಿಂದ ಎಕೆ ಸರಣಿಯ ರೈಫಲ್‌ಗಳು, ಮದ್ದುಗುಂಡುಗಳು ಹಾಗೂ ಸುಧಾರಿತ ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಉಗ್ರರಿಗಾಗಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ.
ಮತ್ತಷ್ಟು ಓದಿ: ಜಾಗತಿಕ ಸಮುದಾಯವನ್ನು ಮತ್ತೊಮ್ಮೆ ದಾರಿತಪ್ಪಿಸಲು ಪಾಕಿಸ್ತಾನ ಯತ್ನ: ಉಗ್ರ ಮಸೂದ್ ಅಜರ್ ತಲೆಗೆ 70 ಲಕ್ಷ ಬಹುಮಾನ ಘೋಷಣೆ
ಬುದ್ಗಾಮ್‌ನಲ್ಲಿ ಲಷ್ಕರ್ ಕಮಾಂಡರ್ ಯಾಸಿರ್ ಹತ್ಯೆ: ಇದೇ ತಿಂಗಳ ಆರಂಭದಲ್ಲಿ ಬುದ್ಗಾಮ್ ಜಿಲ್ಲೆಯ ಯುಸ್ಮಾರ್ಗ್ ಅರಣ್ಯ ಪ್ರದೇಶದಲ್ಲಿ ಸೇನೆಯ 53 ರಾಷ್ಟ್ರೀಯ ರೈಫಲ್ಸ್ (RR) ಹಾಗೂ ವಿಶೇಷ ಪಡೆಗಳು ನಡೆಸಿದ ‘ಆಪರೇಷನ್ ಅಶ್ದರ್’ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್, ಪಾಕಿಸ್ತಾನ ಮೂಲದ ಯಾಸಿರ್ ಎಂಬಾತನನ್ನು ಹೊಡೆದುರುಳಿಸಲಾಗಿತ್ತು. ಈ ಹಿಂದೆ ಸುಲೈಮಾನ್ ಮೂಸಾ ಗ್ಯಾಂಗ್‌ನಲ್ಲಿದ್ದ ಯಾಸಿರ್, ನಂತರ ಪ್ರತ್ಯೇಕವಾಗಿ ತನ್ನದೇ ಜಾಲ ನಿರ್ಮಿಸಿಕೊಂಡು ಕಾಶ್ಮೀರದ ಎತ್ತರದ ಅರಣ್ಯ ಪ್ರದೇಶಗಳಲ್ಲಿ ಸಕ್ರಿಯನಾಗಿದ್ದ. ಆತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪಡೆಗಳು ಆತನನ್ನು ಯಶಸ್ವಿಯಾಗಿ ಮಟ್ಟಹಾಕಿದ್ದವು.
ಕಾಶ್ಮೀರ ಕಣಿವೆಯ ಜತೆಗೆ ಜಮ್ಮು ವಲಯದ ದೋಡಾ, ಕಿಶ್ತ್ವಾರ್ ಮತ್ತು ಉಧಂಪುರದ ಕಣಿವೆ ಮಾರ್ಗಗಳನ್ನು ನುಸುಳುವಿಕೆಗೆ ಬಳಸಿಕೊಳ್ಳಲು ಗಡಿಯಾಚೆಗಿನ ಉಗ್ರ ಗುಂಪುಗಳು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಸೇನೆ ಮತ್ತು ಪೊಲೀಸರು ಪರ್ವತ ಶ್ರೇಣಿಗಳಲ್ಲಿ ‘ಸರ್ಚ್ ಅಂಡ್ ಡೆಸ್ಟ್ರಾಯ್’ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ