Fake Universities: ಕರ್ನಾಟಕದ ಈ ವಿಶ್ವವಿದ್ಯಾಲಯವೇ ಫೇಕ್!; ಭಾರತದ 24 ನಕಲಿ ಯುನಿವರ್ಸಿಟಿಗಳ ಪಟ್ಟಿ ಇಲ್ಲಿದೆ
Karnataka Fake University: ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ 24 ನಕಲಿ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕದ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ ಕೂಡ ಸೇರಿದೆ.
ನವದೆಹಲಿ: ಭಾರತದ 24 ಸ್ವಯಂಘೋಷಿತ (Self Styled) ವಿಶ್ವವಿದ್ಯಾಲಯಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಗುರುತಿಸಲಾಗಿದ್ದು, ಆ ಪಟ್ಟಿಯನ್ನು ಯುಜಿಸಿ (University Grants Commission) ಬಿಡುಗಡೆ ಮಾಡಿದೆ. ಈ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ಒಂದು ವಿಶ್ವವಿದ್ಯಾಲಯವೂ ಸೇರಿದೆ ಎಂಬುದು ಆತಂಕಕಾರಿ ಸಂಗತಿ. ಹೀಗಾಗಿ, ನೀವೇನಾದರೂ ಈ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ ಎಚ್ಚರವಾಗಿರುವುದು ಅಗತ್ಯ. ಹಾಗೇ, ಈ ಯುನಿವರ್ಸಿಟಿಯಲ್ಲಿ ಸೀಟ್ ಪಡೆಯಲು ಬಯಸಿದವರು ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳುವುದು ಒಳಿತು. ಏಕೆಂದರೆ ಈ 24 ನಕಲಿ ವಿಶ್ವವಿದ್ಯಾಲಯಗಳಿಗೆ ಯಾವುದೇ ಮಾನ್ಯತೆಯೂ ಇಲ್ಲ.
ಈ ಬಗ್ಗೆ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ಯುಜಿಸಿ 24 ಸ್ವಯಂ ಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ. ಇದರ ಜೊತೆಗೆ ಯುಜಿಸಿಯ ನಿಯಮಗಳನ್ನು ಉಲ್ಲಂಘನೆ ಮಾಡಿದ ಇನ್ನೂ ಎರಡು ಸಂಸ್ಥೆಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಮತ್ತು ಮಾಧ್ಯಮದ ಮೂಲಕ ಪಡೆದ ದೂರುಗಳ ಆಧಾರದ ಮೇಲೆ ಯುಜಿಸಿ 24 ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಿದೆ ಎಂದು ತಿಳಿಸಿದ್ದಾರೆ.
ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ 24 ನಕಲಿ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕದ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ ಕೂಡ ಸೇರಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿವೆ. ಉತ್ತರ ಪ್ರದೇಶದ 8 ವಿಶ್ವವಿದ್ಯಾಲಯಗಳಾದ ವಾರಾಣಸಿಯ ಸಂಸ್ಕೃತ ವಿಶ್ವವಿದ್ಯಾಲಯ, ಅಲಹಾಬಾದ್ನ ಮಹಿಳಾ ಗ್ರಾಮ ವಿದ್ಯಾಪೀಠ, ಮತ್ತು ಗಾಂಧಿ ಹಿಂದಿ ವಿದ್ಯಾಪೀಠ, ಕಾನ್ಪುರದ ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಅಲಿಗಢದ ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಮಥುರಾದ ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಪ್ರತಾಪಗಢದ ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ ಮತ್ತು ನೊಯ್ಡಾದ ಇಂದ್ರಪ್ರಸ್ಥ ಶಿಕ್ಷಾ ಪರಿಷತ್ ಇವುಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಗುರುತಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7 ನಕಲಿ ವಿಶ್ವವಿದ್ಯಾಲಯಗಳಿದ್ದು, ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್ ಸೆಂಟ್ರಿಕ್ ಜುರಿಡಿಕಲ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್, ಮತ್ತು ಅಧ್ಯಾತ್ಮಿಕ್ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ)ಗಳನ್ನು ನಕಲಿ ಯುನಿವರ್ಸಿಟಿಗಳೆಂದು ಘೋಷಿಸಲಾಗಿದೆ.
ಪಶ್ಚಿಮ ಬಂಗಾಳಗಳಲ್ಲಿ ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರಿಸರ್ಚ್ ಕೂಡ ನಕಲಿಯಾಗಿದೆ. ಒರಿಸ್ಸಾದ ರೂರ್ಕೆಲಾದ ನವಭಾರತ್ ಶಿಕ್ಷಾ ಪರಿಷತ್ ಮತ್ತು ಉತ್ತರ ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ನಕಲಿ ವಿವಿಗಳ ಪಟ್ಟಿಯಲ್ಲಿದೆ. ಪುದುಚೆರಿಯ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಆಂಧ್ರಪ್ರದೇಶದ ಕ್ರೈಸ್ಟ್ ಟೆಸ್ಟ್ಮೆಂಟ್ ಡೀಮ್ಡ್ ವಿಶ್ವವಿದ್ಯಾಲಯ, ನಾಗ್ಪುರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ, ಕೇರಳದ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಷನ್ ಸೊಸೈಟಿಗಳು ನಕಲಿ ವಿಶ್ವವಿದ್ಯಾಲಯಗಳಾಗಿವೆ.
ಇದಲ್ಲದೆ ದೆಹಲಿಯ ಕುತುಬ್ ಎನ್ಕ್ಲೇವ್ನ ಭಾರತೀಯ ಶಿಕ್ಷಣ ಪರಿಷತ್, ಉತ್ತರ ಪ್ರದೇಶದ ಲಖನೌನಲ್ಲಿರುವ ಭಾರತೀಯ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಐಐಪಿಎಂ) ಎಂಬ ಇನ್ನೆರಡು ಸಂಸ್ಥೆಗಳು ಯುಜಿಸಿ ಕಾಯ್ದೆ 1956ರ ಉಲ್ಲಂಘನೆ ಮಾಡಿದ ಎಂದು ಯುಜಿಸಿ ತಿಳಿಸಿದೆ.
ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್
(UGC declares these 24 Universities as fake including Karnataka Open University Check complete list here)