ರೈತರ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು; ಸಚಿವ ಕಿಶನ್ ರೆಡ್ಡಿ ಟೀಕೆ

Kishan Reddy: ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಇಂದು (ಸೋಮವಾರ) ಸಂಸತ್ತಿನಲ್ಲಿ ರೈತರ ಕಲ್ಯಾಣದ ಕುರಿತು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಟೀಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಕಲ್ಯಾಣದ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಸುರಿಸಿದ್ದು ವಿಪರ್ಯಾಸ ಎಂದು ಲೇವಡಿ ಮಾಡಿದ್ದಾರೆ.

ರೈತರ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು; ಸಚಿವ ಕಿಶನ್ ರೆಡ್ಡಿ ಟೀಕೆ
ಕಿಶನ್ ರೆಡ್ಡಿ
Follow us
ಸುಷ್ಮಾ ಚಕ್ರೆ
|

Updated on: Jul 29, 2024 | 9:27 PM

ನವದೆಹಲಿ: ಸಂಸತ್ತಿನಲ್ಲಿ ರೈತರ ಕಲ್ಯಾಣದ ಕುರಿತು ಹೇಳಿಕೆ ನೀಡಿದ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ವಿರುದ್ಧ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಕಲ್ಯಾಣದ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಸುರಿಸಿದ್ದು ವಿಪರ್ಯಾಸ ಎಂದು ಹೇಳಿರುವ ರಾಹುಲ್ ಗಾಂಧಿ 2004ರಿಂದ 2014ರ ಅವಧಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರನ್ನು ನಿರ್ಲಕ್ಷಿಸಲಾಗಿತ್ತು ಎಂದಿದ್ದಾರೆ.

2013ರಲ್ಲಿ ಸಂಸತ್ತಿನ ಸಾಕ್ಷಿಯಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಹೇಳಿದ ಮಾತು ಮರೆತಿದ್ದೀರಾ? ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಂದಿನ ಕೃಷಿ ಸಚಿವ ಶರದ್ ಪವಾರ್ ಅವರು ಸದನದ ವೇದಿಕೆಯಲ್ಲಿ ಹೇಳಿದ್ದು ನೆನಪಿಲ್ಲವೇ? ಎಂದು ಸಚಿವ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಕನಿಷ್ಟ ಬೆಂಬಲ ಬೆಲೆಯನ್ನು ಒದಗಿಸುವುದು ಮಾರುಕಟ್ಟೆಯ ಕುಶಲತೆಗೆ ಕಾರಣವಾಗುತ್ತದೆ ಮತ್ತು MSP ಉತ್ಪಾದನಾ ವೆಚ್ಚದ ನಡುವಿನ ಯಾಂತ್ರಿಕ ಸಂಪರ್ಕವು ಕೆಲವು ಸಂದರ್ಭಗಳಲ್ಲಿ ಪ್ರತಿಕೂಲವಾಗಿದೆ ಎಂದು ಅಂದಿನ ಯುಪಿಎ ಸರ್ಕಾರ ಹೇಳಲಿಲ್ಲವೇ? ಎಂದು ಕೇಳಿದ್ದಾರೆ.

ಈಗ ಕಾಂಗ್ರೆಸ್ ಪಕ್ಷದ ಮೊಸಳೆ ಕಣ್ಣೀರನ್ನು ಜನರು ಮತ್ತು ರೈತರು ನಂಬುವ ಸ್ಥಿತಿಯಲ್ಲಿಲ್ಲ ಎಂದು ಕಟುವಾಗಿ ಟೀಕಿಸಿದ ಕಿಶನ್ ರೆಡ್ಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಲೋಕಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರೈತರಿಗೆ ಕಾನೂನಾತ್ಮಕವಾಗಿ ಎಂಎಸ್‌ಪಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿಶನ್ ರೆಡ್ಡಿ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: 6 ಜನ ರಚಿಸಿರುವ ‘ಚಕ್ರವ್ಯೂಹ’ದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

2004ರ ನವೆಂಬರ್ 18ರಂದು ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ನೇತೃತ್ವದಲ್ಲಿ ‘ನ್ಯಾಷನಲ್ ಕಮಿಷನ್ ಆನ್ ಫಾರ್ಮರ್ಸ್ (ಎನ್‌ಸಿಎಫ್)’ ರಚನೆಯಾಯಿತು ಎಂದು ಕಿಶನ್ ರೆಡ್ಡಿ ಕಾಂಗ್ರೆಸ್‌ಗೆ ನೆನಪಿಸಿದ್ದಾರೆ. ಆಗ ಸ್ವಾಮಿನಾಥನ್ ಸಮಿತಿಯು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇ. 50ರಷ್ಟು ಹೆಚ್ಚಿಗೆ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಇದು ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಾಗಿದೆ. ಆದರೆ, ಅಂದು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಉದ್ದೇಶಪೂರ್ವಕವಾಗಿ ಅದನ್ನು ಬದಿಗೊತ್ತಿರುವುದು ಸುಳ್ಳಲ್ಲವೇ ಎಂದು ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.

2013ರ ಡಿಸೆಂಬರ್ 10ರಂದು ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂದಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ಯುಪಿಎ ಸರಕಾರ ಇದೇ ಸಂಸತ್ತಿನಲ್ಲಿ ಸರಕಾರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿತ್ತು. ಯುಪಿಎ ನೇತೃತ್ವದ ಸರ್ಕಾರ ರೈತರ ಮೇಲಿನ ರಾಷ್ಟ್ರೀಯ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ನೀಡಿದ್ದ ಶಿಫಾರಸುಗಳನ್ನು ಅಂದಿನ ಸರಕಾರ ಒಪ್ಪಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದರು. ಉತ್ಪಾದನಾ ವೆಚ್ಚದ ಶೇ. 50ರಷ್ಟು ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸಲಾಗಿದೆ. ಇದಲ್ಲದೇ ಆಯಾ ಬೆಳೆಗಳ ಎಂಎಸ್ ಪಿಯನ್ನು ಕಾಲಕಾಲಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಕಿಶನ್ ರೆಡ್ಡಿ ವಿವರಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಮಾತಿಗೆ ಸದನದಲ್ಲಿ ಮುಖ ಮುಚ್ಚಿ ನಕ್ಕ ನಿರ್ಮಲಾ ಸೀತಾರಾಮನ್; ಕ್ಷಮೆಗೆ ಕಾಂಗ್ರೆಸ್ ಒತ್ತಾಯ

ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶದಂತಹ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ ಮಾತುಗಳನ್ನು ಏಕೆ ಅನುಷ್ಠಾನಗೊಳಿಸುತ್ತಿಲ್ಲ ಎಂದು ಕಿಶನ್ ರೆಡ್ಡಿ ಪ್ರಶ್ನಿಸಿದರು. ತೆಲಂಗಾಣದಲ್ಲಿ ರೈತರಿಗೆ ನೀಡಿದ ಭರವಸೆಗಳ ಬಗ್ಗೆ ರಾಹುಲ್ ಏಕೆ ಮಾತನಾಡಲಿಲ್ಲ? ತೆಲಂಗಾಣ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಮತ್ತು ಅವರ ಕಲ್ಯಾಣಕ್ಕೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ತೆಲಂಗಾಣ ಸರ್ಕಾರ ಈ ಯಾವ ಭರವಸೆಯನ್ನೂ ಜಾರಿಗೆ ತಂದಿಲ್ಲ ಎಂದ ಕಿಶನ್ ರೆಡ್ಡಿ, ಇದನ್ನು ಜಾರಿಗೆ ತರುವತ್ತ ಮೊದಲು ರಾಹುಲ್ ಗಾಂಧಿ ಗಮನಹರಿಸಬೇಕು ಎಂದು ಸೂಚಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ